×
Ad

ಉಡುಪಿ ಜಿಲ್ಲೆಗೆ ಮೂರು ದಿನಗಳ ರೆಡ್ ಅಲರ್ಟ್ ಘೋಷಣೆ

Update: 2025-07-23 19:23 IST

ಉಡುಪಿ, ಜು.23: ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬೆಂಗಳೂರು ಇವರ ಹವಾಮಾನ ಮುನ್ಸೂಚನೆಯಂತೆ ರಾಜ್ಯದ ಕರಾವಳಿ ಭಾಗ ದಲ್ಲಿ ಮುಂದಿನ ಒಂದು ವಾರ (ಜು.23ರಿಂದ 29ರವರೆಗೆ) ಭಾರೀ ಮಳೆಯಾಗುವ ಸಾಧ್ಯತೆ ಇದೆ. ಅದರಲ್ಲೂ ಮೊದಲ ಮೂರು ದಿನ ರೆಡ್ ಅಲರ್ಟ್‌ನ್ನು ಘೋಷಿಸಲಾಗಿದೆ.

ಈ ದಿನಗಳಲ್ಲಿ ಜಿಲ್ಲೆಯಲ್ಲಿ ಬಿರುಗಾಳಿಯಿಂದ ಕೂಡಿದ ಮಳೆಯಾಗುವ ಸಾದ್ಯತೆ ಇದ್ದು, ಪಶ್ಚಿಮದ ಅರಬಿ ಸಮುದ್ರದ ಕಡೆಯಿಂದ ವೇಗದ ಗಾಳಿ ಹಾಗೂ ಭಾರೀ ಗಾತ್ರದ ಅಲೆಗಳು ದಡವನ್ನು ಅಪ್ಪಳಿಸುವ ಸಂಭವವಿದೆ ಎಂದು ಹವಾಮಾನ ಮುನ್ಸೂಚನೆಯಲ್ಲಿ ತಿಳಿಸಲಾಗಿದೆ.

ತಿರುವನಂತಪುರ ಹವಾಮಾನ ಕೇಂದ್ರ ನೀಡಿರುವ ಮುನ್ಸೂಚನೆಯಂತೆ ಜು.23ರಿಂದ 26ರವರೆಗೆ ಲಕ್ಷದೀಪ, ಕೇರಳ ಹಾಗೂ ಕರ್ನಾಟಕ ಕರಾವಳಿಯ ಸಮುದ್ರ ತೀರದಲ್ಲಿ ಗಂಟೆಗೆ 40ರಿಂದ 50 ಕಿ.ಮೀ. ವೇಗದ ಗಾಳಿ ಬೀಸುವ ಸಾಧ್ಯತೆ ಇದೆ. ಇದರಿಂದ ಸಮುದ್ರದಲ್ಲಿ ಭಾರೀ ಗಾತ್ರದ ಅಲೆಗಳು ಏಳಲಿದ್ದು, ಈ ದಿನಗಳಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದೆ.

ಕರ್ನಾಟಕ ಕರಾವಳಿಯ ಬಂದರು ಪ್ರದೇಶಗಳಲ್ಲಿ -ಕಾರವಾರ, ಮಂಗಳೂರು, ಪಣಂಬೂರು, ಹೊನ್ನಾವರ, ಭಟ್ಕಳ, ಗಂಗೊಳ್ಳಿ ಹಾಗೂ ಮಲ್ಪೆ- ಸ್ಥಳೀಯ ಎಚ್ಚರಿಕೆಯ ಸೂಚನೆಯಾಗಿ ಸಿಗ್ನಲ್ ನಂ.3ನ್ನು ಹಾರಿಸುವಂತೆ ಮುನ್ಸೂಚನೆಯಲ್ಲಿ ತಿಳಿಸಲಾಗಿದೆ.

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾದಿಕಾರದ ಸೂಚನೆ: ಜಿಲ್ಲೆಯಲ್ಲಿ ಮುಂದಿನ ಮೂರು ದಿನ ರೆಡ್ ಅಲರ್ಟ್ ಹಾಗೂ ನಂತರದ ದಿನಗಳಲ್ಲಿ ಆರೆಂಜ್ ಅಲರ್ಟ್‌ನ್ನು ನೀಡಿರುವುದರಿಂದ ಜಿಲ್ಲೆಯ ಜನತೆಗೆ ಹಾಗೂ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮುಂಜಾಗ್ರತಾ ಕ್ರಮವಾಗಿ ಕೆಲವು ಸೂಚನೆಗಳನ್ನು ನೀಡಿದೆ.

ಅದರಂತೆ ಸಾರ್ವಜನಿಕರು, ಪ್ರವಾಸಿಗರು, ಮೀನುಗಾರರು ನದಿ, ಸಮುದ್ರ ತೀರ ಅಥವಾ ನೀರಿರುವ ಪ್ರದೇಶಗಳ ಬಳಿ ಹೋಗದಂತೆ, ನೀರಿಗೆ ಇಳಿಯದಂತೆ ಎಚ್ಚರಿಕೆ ನೀಡಿದೆ. ಗಾಳಿ ಬೀಸುವ ಹಾಗೂ ಮಿಂಚು-ಸಿಡಿಲು ಕಾಣಿಸಿಕೊಳ್ಳುವ ವೇಳೆ ಹೊರಗೆ ತಿರುಗದಂತೆ, ಮನೆಯಲ್ಲಿ ಅಥವಾ ಸುರಕ್ಷಿತ ಕಟ್ಟಡ ದಲ್ಲಿ ಆಶ್ರಯ ಪಡೆಯುವಂತೆ ತಿಳಿಸಿದೆ. ರೈತರು ಕೃಷಿ ಚಟುವಟಿಕೆ ಯಿಂದ ದೂರವಿರುವಂತೆಯೂ ಅದು ತಿಳಿಸಿದೆ.

ಇಂದು ಅಪರಾಹ್ನದ ಬಳಿಕ ಜಿಲ್ಲೆಯಲ್ಲಿ ಸತತವಾಗಿ ಭಾರೀ ಮಳೆ ಬೀಳುತ್ತಿ ರುವುದರಿಂದ ದುರ್ಬಲ ಮನೆ, ಕಟ್ಟಡ, ಕೆಲವು ಭೂಪ್ರದೇಶಗಳು ಕುಸಿಯುವ ಸಂಭವವಿದ್ದು ಈ ಬಗ್ಗೆ ಹೆಚ್ಚಿನ ನಿಗಾ ವಹಿಸುವಂತೆ, ಹತ್ತಿರದ ಗ್ರಾಪಂ ಅಥವಾ ತಾಲೂಕು ತಹಶೀಲ್ದಾರ್ ಕಚೇರಿಗೆ ಮಾಹಿತಿ ನೀಡುವಂತೆ ತಿಳಿಸಿದೆ. ಅಗತ್ಯ ಬಿದ್ದರೆ ಹತ್ತಿರದ ಕಾಳಜಿ ಕೇಂದ್ರದಲ್ಲಿ ಇರುವಂತೆ ಸಲಹೆ ನೀಡಿದೆ.

ಯಾವುದೇ ತುರ್ತು ಸಂದರ್ಭದಲ್ಲಿ ವಿಪತ್ತು ನಿರ್ವಹಣಾ ಕಂಟ್ರೋಲ್ ರೂಮ್ (ಶುಲ್ಕ ರಹಿತ 1077 ಅಥವಾ 0820-2574802) ಅಥವಾ ಆಯಾ ತಾಲೂಕು ಕಚೇರಿಯನ್ನು ಸಂಪರ್ಕಿಸುವಂತೆ ಸೂಚನೆ ನೀಡಲಾಗಿದೆ.

ಉಡುಪಿ ಜಿಲ್ಲೆಯಾದ್ಯಂತ ಬುಧವಾರ ಅಪರಾಹ್ನದ ಬಳಿಕ ಬಾರೀ ಮಳೆಯಾಗುತ್ತಿದೆ. ಮಳೆಯೊಂದಿಗೆ ಆಗಾಗ ಗಾಳಿಯೂ ಬೀಸುತ್ತಿದೆ. ಬುಧವಾರ ಬೆಳಗ್ಗೆ 8:30ಕ್ಕೆ ಕೊನೆಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 51 ಮಿ.ಮೀ. ಮಳೆಯಾಗಿದೆ. ಬೈಂದೂರಿನಲ್ಲಿ ಅತ್ಯಧಿಕ 61.4ಮಿ.ಮೀ. ಮಳೆಯಾದರೆ, ಕುಂದಾಪುರದಲ್ಲಿ 59.8, ಹೆಬ್ರಿಯಲ್ಲಿ 50.2, ಕಾಪುವಲ್ಲಿ 47.6, ಕಾರ್ಕಳದಲ್ಲಿ 45.4, ಬ್ರಹ್ಮಾವರದಲ್ಲಿ 43.0 ಹಾಗೂ ಉಡುಪಿಯಲ್ಲಿ 33.4ಮಿ.ಮೀ. ಮಳೆಯಾಗಿದೆ.

ಇಂದು ಜಿಲ್ಲೆಯಲ್ಲಿ ಎರಡು ಮನೆಗಳಿಗೆ ಹಾನಿಯಾದ ವರದಿ ಬಂದಿದೆ. ಕಾಪು ತಾಲೂಕು 92 ಹೇರೂರು ಗ್ರಾಮದ ಪ್ರೇಮ ಆಚಾರ್ತಿ ಇವರ ಮನೆ ಭಾರೀ ಮಳೆಯಿಂದ ಭಾಗಶ: ಹಾನಿಗೊಂಡಿದ್ದು 50,000 ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ. ಕಾರ್ಕಳ ತಾಲೂಕು ಪಳ್ಳಿ ಗ್ರಾಮದ ನಾಗೇಶ್ ಎಂಬವರ ಮನೆಯೂ ಮಳೆಗೆ ಭಾಗಶ: ಹಾನಿಗೊಂಡಿದ್ದು 30ಸಾವಿರ ರೂ.ಗಳ ನಷ್ಟವಾಗಿರುವುದಾಗಿ ಅಂದಾಜಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News