×
Ad

ಉಡುಪಿ: 'ಮಲಬಾರ್ ಗೋಲ್ಡ್'ನಿಂದ ರಕ್ತದಾನ ಶಿಬಿರ, ರಕ್ತದಾನಿಗಳಿಗೆ ಸನ್ಮಾನ

Update: 2023-07-30 13:16 IST

ಉಡುಪಿ, ಜು.30: ಉಡುಪಿ ಜಿಲ್ಲೆಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡುವುದರಿಂದ ಇದು ರಕ್ತದಾನಿಗಳ ಜಿಲ್ಲೆಯಾಗಿ ಮೂಡಿಬಂದಿದೆ. ಈ ಮೂಲಕ ಇಲ್ಲಿನ ರಕ್ತದಾನಿಗಳು ಬೇರೆಯವರಿಗೆ ಪ್ರೇರಣೆಯಾಗಿದ್ದಾರೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ್ ಉಡುಪ ಹೇಳಿದ್ದಾರೆ.

ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಇದರ 10ನೇ ವಾರ್ಷಿಕೋತ್ಸವದ ಪ್ರಯುಕ್ತ ಹುಬ್ಬಳ್ಳಿ ಶಾಖಾ ವ್ಯವಸ್ಥಾಪಕ ದಿವಂಗತ ಶಶಾಂಕ್ ಎಕ್ಬೋಟೆ ಸ್ಮರಣಾರ್ಥ ಉಡುಪಿ ಜಿಲ್ಲಾಸ್ಪತ್ರೆಯ ಸಹಯೋಗದೊಂದಿಗೆ ರವಿವಾರ ಮಲಬಾರ್ ಗೋಲ್ಡ್ ಉಡುಪಿ ಶಾಖೆಯಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರ ಹಾಗೂ ರಕ್ತದಾನಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಹೆರಿಗೆ ಸಂದರ್ಭದಲ್ಲಿ ಹೆಚ್ಚಿನ ರಕ್ತದ ಅಗತ್ಯ ಇರುವುದರಿಂದ ಗರ್ಭಿಣಿಯರ ಭಯವನ್ನು ದೂರ ಮಾಡುವ ಕಾರ್ಯಗಳನ್ನು ರಕ್ತದಾನಿಗಳು ಮಾಡುತ್ತಿದ್ದಾರೆ. ಈ ಮೂಲಕ ರಕ್ತದಾನಿಗಳು ಇನ್ನೊಬ್ಬರ ಬದುಕಿನ ಆಶಾಕಿರಣ ಆಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಹಲವು ಬಾರಿ ರಕ್ತದಾನ ಮಾಡಿದ ರಕ್ತದಾನಿಗಳಾದ ರಾಘವೇಂದ್ರ ಪ್ರಭು ಕರ್ವಾಲು, ಮುಹಮ್ಮದ್ ಶರೀಫ್, ಮಹೇಶ್ ಪೂಜಾರಿ ಹೂಡೆ, ಅಜ್ಮಲ್ ಅಸಾದಿ, ಮುನೀರ್ ಕಲ್ಮಾಡಿ, ಡಾ.ಚರಿಷ್ಮಾ ಶೆಟ್ಟಿ, ರಾಮ್ ಅಜೆಕಾರು, ದಿವಾಕರ್ ಎನ್.ಖಾರ್ವಿ, ದೇವದಾಸ್ ಪಾಟ್ಕರ್, ರೋವಿನ್ ಪಾಲನ್ ಅವರನ್ನು ಸನ್ಮಾನಿಸಲಾಯಿತು.

ಉಡುಪಿ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ಮುಖ್ಯಸ್ಥೆ ಡಾ.ವೀಣಾ ಕುಮಾರಿ, ಹೋಪ್ ಇಂಡಿಯಾ ಫೌಂಡೇಶನ್ನ ಅನ್ಸಾರ್ ಅಹ್ಮದ್, ನಗರಸಭೆ ಮಾಜಿ ಸದಸ್ಯ ಶ್ಯಾಮ್ಪ್ರಸಾದ್ ಕುಡ್ವ, ಜಿಪಂ ಮಾಜಿ ಸದಸ್ಯೆ ಗೀತಾಂಜಲಿ ಸುವರ್ಣ, ಸಂಜೆ ಪ್ರಭಾ ಪತ್ರಿಕೆಯ ಸಂಪಾದ ವೆಂಕಟೇಶ್ ಪೈ ಮುಖ್ಯ ಅತಿಥಿಗಳಾಗಿದ್ದರು.

ಮಲಬಾರ್ ಗೋಲ್ಡ್ ಉಡುಪಿ ಶಾಖೆಯ ಮುಖ್ಯಸ್ಥ ಹಫೀಝ್ ರಹ್ಮಾನ್, ಸ್ಟೋರ್ ಮ್ಯಾನೇಜರ್ ಪುರಂದರ ತಿಂಗಳಾಯ, ಗೆಸ್ಟ್ ರಿಲೇಶನ್ ಮೆನೇಜರ್ ರಾಘವೇಂದ್ರ ನಾಯಕ್, ಮಾರ್ಕೆಟಿಂಗ್ ಮ್ಯಾನೇಜರ್ ತಂಝೀಮ್ ಶಿರ್ವ, ಸಿಬ್ಬಂದಿ ವರ್ಗ, ಗ್ರಾಹಕರು ಉಪಸ್ಥಿತರಿದ್ದರು.

ಸಿಬ್ಬಂದಿ ವಿಘ್ನೇಶ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

 

 

 

 

 

 

 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News