×
Ad

ಉಡುಪಿ| ಮಾದಕ ವಸ್ತು ಮಾರಾಟ: ಮೂವರು ಆರೋಪಿಗಳ ಬಂಧನ

ಗಾಂಜಾ ಸೇವಿಸಿದ ನಾಲ್ವರು ಕಾರ್ಮಿಕರು ವಶಕ್ಕೆ: ಪ್ರಕರಣ ದಾಖಲು

Update: 2025-08-18 20:49 IST

ಅಫ್ಶಿನ್, ಮನೀಶ್, ಶಿವನಿಧಿ

ಉಡುಪಿ, ಆ.18: ಮಣಿಪಾಲದ ವಿದ್ಯಾರ್ಥಿಗಳನ್ನು ಮತ್ತು ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಗುರಿಯಾಗಿರಿಸಿಕೊಂಡು ಗಾಂಜಾ ಮತ್ತು ಎಲ್‌ಎಸ್‌ಡಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಮಣಿಪಾಲ ಪೊಲೀಸರು ಬಂಧಿಸಿದ್ದು, ಗಾಂಜಾ ಸೇವನೆಗೆ ಸಂಬಂಧಿಸಿ ನಾಲ್ಕು ಮಂದಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಕೇರಳ ರಾಜ್ಯದ ತಿರುವನಂತಪುರಂ ಜಿಲ್ಲೆಯ ಅಫ್ಶಿನ್ (26), ಕೇರಳ ಕಾಸರಗೋಡಿನ ಮನೀಶ್(34), ಇಂದ್ರಾಳಿ ನಿವಾಸಿ ಶಿವನಿಧಿ ಆಚಾರ್ಯ(20) ಮಾದಕ ವಸ್ತು ಮಾರಾಟ ಮಾಡಿದ ಪ್ರಕರಣದ ಆರೋಪಿಗಳು. ಕೇರಳದ ಪಾಲಾಕ್ಕಾಡ್ ಜಿಲ್ಲೆಯ ಅಜೀಸ್(28), ಕೇರಳದ ಕೋಲಮನ್ನು ನಿವಾಸಿ ವಿಪಿನ್(32), ಕೇರಳ ತ್ರಿಶೂರು ಜಿಲ್ಲೆಯ ಬಿಪಿನ್(24), ಕೇರಳ ಮಲ್ಲಪಳ್ಳಿಯ ಅಖಿಲ್(26) ಗಾಂಜಾ ಸೇವನೆ ಮಾಡಿರುವ ಆರೋಪಿಗಳು.

ಖಚಿತ ಮಾಹಿತಿಯಂತೆ ದಾಳಿ: ಬೆಂಗಳೂರಿನಿಂದ ಗಾಂಜಾ ಮತ್ತು ಡ್ರಗ್ಸ್ ತರಿಸಿ ಮಣಿಪಾಲದಲ್ಲಿ ಮಾರಾಟ ಮಾಡುತ್ತಿರುವ ಕುರಿತ ಮಾಹಿತಿ ಯಂತೆ ಮಣಿಪಾಲ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ನೇತೃತ್ವದ ತಂಡ ಆ.16ರಂದು ರಾತ್ರಿ ಹೆರ್ಗ ಗ್ರಾಮದ ಈಶ್ವರನಗರ ನರಸಿಂಗೆ ದೇವಸ್ಥಾನ ರಸ್ತೆಯ ಬಳಿ ಇರುವ ಕಟ್ಟಡದ ಮೊದಲನೇ ಮಹಡಿಯ ರೂಮ್‌ಗೆ ದಾಳಿ ನಡೆಸಿದ್ದು, ಗಾಂಜಾ ಮಾರಾಟ ಮಾಡುತ್ತಿದ್ದ ಅಫ್ಶಿನ್ ಹಾಗೂ ಶಿವನಿಧಿ ಆಚಾರ್ಯನನ್ನು ಬಂಧಿಸಿತ್ತು. ಇವರಿಂದ 1 ಕೆಜಿ 237 ಗ್ರಾಂ ಗಾಂಜಾ, 0.038 ಗ್ರಾಂ ಎಲ್‌ಎಸ್‌ಡಿ ಸ್ಟ್ರಿಪ್ ಮಾದಕ ವಸ್ತು, ಡಿಜಿಟಲ್ ಸ್ಕೇಲ್, 2000ರೂ. ನಗದು ಹಾಗೂ 2 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ತನಿಖೆ ಮುಂದುವರೆಸಿದ ಮಣಿಪಾಲ ಎಸ್ಸೈ ಅಕ್ಷಯ ಕುಮಾರಿ ಆ.17ರಂದು ಗಾಂಜಾ ಮಾರಾಟದ ಪ್ರಕರಣದ ಇನ್ನೊರ್ವ ಆರೋಪಿ ಮನೀಶ್‌ನನ್ನು ಮಣಿಪಾಲ ವಿದ್ಯಾರತ್ನ ನಗರದ ಫ್ಲಾಟ್‌ನಲ್ಲಿ ಬಂಧಿಸಿ, 653 ಗ್ರಾಂ ಗಾಂಜಾ, 2 ಡಿಜಿಟಲ್ ಸ್ಕೇಲ್, 1 ಗಾಂಜಾ ಕ್ರಷರ್, 3000ರೂ. ನಗದು ಹಾಗೂ 1 ಮೊಬೈಲ್ ಪೋನನ್ನು ವಶಪಡಿಸಿಕೊಂಡಿದ್ದಾರೆ.

ಕೇರಳ ಕಾರ್ಮಿಕರು ವಶಕ್ಕೆ: ಮನೀಶ್‌ನನ್ನು ವಿಚಾರಣೆಗೆ ಒಳಪಡಿಸಿ ದಾಗ ಆತ ಕೇರಳದ ಕಾರ್ಮಿಕರಿಗೆ ಗಾಂಜಾ ಮಾರಾಟ ಮಾಡಿರುವುದು ತಿಳಿದುಬಂತು. ಅದರಂತೆ ಆ.17 ರಂದು ಕೇರಳದ ಕಾರ್ಮಿಕರಾದ ಆಜೀಶ, ವಿಪಿನ್, ಬಿಪಿನ್ ಮತ್ತು ಆಖಿಲ್ ಹಾಗೂ ಇತರ ಇಬ್ಬರನ್ನು ಗಾಂಜಾ ಸೇವನೆಗೆ ಸಂಬಂಧಿಸಿ ಪರೀಕ್ಷೆಗೆ ಒಳಪಡಿಸಲಾಯಿತು.

ಇದರಲ್ಲಿ ನಾಲ್ವರು ಗಾಂಜಾ ಸೇವಿಸಿರುವುದು ದೃಢಪಟ್ಟಿತ್ತು. ಇವರ ವಿರುದ್ಧ ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಾಂಜಾ ಮಾರಾಟ ಪ್ರಕರಣದ ಮೂವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿತರ ಪೈಕಿ ಅಫ್ಶಿನ್ ವಿರುದ್ಧ 2023ರಲ್ಲಿ ಮಣಿಪಾಲದಲ್ಲಿ ಎಂಡಿಎಂಎ ಮಾರಾಟ ಹಾಗೂ ಕೇರಳದ ಬೇಕಲದಲ್ಲಿ ಗಾಂಜಾ ಸೇವನೆ ಬಗ್ಗೆ ಪ್ರಕರಣ ದಾಖಲಾಗಿತ್ತು.

ವಿದ್ಯಾರ್ಥಿಗಳು, ಕಾರ್ಮಿಕರೇ ಟಾರ್ಗೆಟ್!

ಅಫ್ಶಿನ್ ಖಾಸಗಿ ಆಯುರ್ವೇದ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದು, ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಮತ್ತು ಕಾರ್ಮಿಕರನ್ನು ಗುರಿ ಮಾಡಿ ಡ್ರಗ್ಸ್ ಮಾರಾಟ ಮಾಡುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಶಿವನಿಧಿ ಮಂಗಳೂರಿನಲ್ಲಿ ಎಂಜಿನಿಯಾರಿಂಗ್ ವಿದ್ಯಾರ್ಥಿಯಾಗಿದ್ದು, ವಿದ್ಯಾರ್ಥಿಗಳಿಗೆ ಮತ್ತು ಸ್ಥಳೀಯರಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದನು. ಮನೀಶ್ ವೆಲ್ಡಿಂಗ್ ಕೆಲಸ ಮಾಡುವ ವೃತ್ತಿ ಮಾಡಿಕೊಂಡಿದ್ದು, ಕೇರಳ ಹಾಗೂ ಹೊರರಾಜ್ಯಗಳಿಂದ ಬರುವ ಮಣಿಪಾಲದ ಸುತ್ತಮುತ್ತ ಇರುವ ಕಾರ್ಮಿಕರಿಗೆ ಗಾಂಜಾ ಸರಬರಾಜು ಮಾಡುತ್ತಿದ್ದನು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಉಡುಪಿ ಎಸ್ಪಿ ಹರಿರಾಮ್ ಶಂಕರ್ ಸೂಚನೆ ಮೇರೆಗೆ ಮಣಿಪಾಲ ಪೊಲೀಸರು ಇತ್ತೀಚಿಗೆ ಹೊರ ರಾಜ್ಯಗಳ ವಿದ್ಯಾರ್ಥಿಗಳು ಮತ್ತು ಮಣಿಪಾಲದ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಡ್ರಗ್ಸ್ ಪರೀಕ್ಷೆ ನಡೆಸಿದ್ದು, ಇದರಿಂದ ಡ್ರಗ್ಸ್ ಸೇವನೆಯ ಪ್ರಕರಣಗಳು ಪತ್ತೆಯಾಗಿವೆ. ತನಿಖೆ ನಡೆಸಿ ಡ್ರಗ್ಸ್ ಮೂಲವನ್ನು ಬೆನ್ನು ಬಿದ್ದಾಗ ಕೇರಳ ವ್ಯಕ್ತಿಗಳು ಡ್ರಗ್ಸ್ ಮಾರಾಟ ಮಾಡುತ್ತಿರುವ ಪ್ರಕರಣ ಪತ್ತೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News