ಉಡುಪಿ | ಮಂಜುನಾಥ್ ಹೆಗ್ಡೆಗೆ ಜನಪದ ವೈದ್ಯ ಸಿರಿ ಪ್ರಶಸ್ತಿ ಪ್ರದಾನ
ಉಡುಪಿ, ಡಿ.3: ಕುತ್ಪಾಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಜಾನಪದ ವೈದ್ಯಕೀಯ ಸಂಶೋಧನಾ ಕೇಂದ್ರದ ವತಿಯಿಂದ ನೀಡುವ ರಾಜ್ಯಮಟ್ಟದ ’ಜನಪದ ವೈದ್ಯ ಸಿರಿ ಪ್ರಶಸ್ತಿ’ಯನ್ನು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹೂಡ್ಲಮನೆಯ ಜಾನಪದ ವೈದ್ಯ ಮಂಜುನಾಥ್ ಹೆಗ್ಡೆ ಅವರಿಗೆ ಮಂಗಳವಾರ ಪ್ರದಾನ ಮಾಡಲಾಯಿತು.
ಕಾಲೇಜಿನ ಭಾವಪ್ರಕಾಶ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಸ್ವೀಕರಿಸಿ ಮಾತನಾಡಿದ ಮಂಜುನಾಥ್ ಹೆಗ್ಡೆ, ಪಾರಂಪರಿಕ ಸಂಪ್ರದಾಯದಿಂದ ಬಂದ ಸಸ್ಯಮೂಲದ ವೈದ್ಯಕೀಯ ಪದ್ಧತಿಯ ಬಗ್ಗೆ ವಿದ್ಯಾರ್ಥಿಗಳು ಆಸಕ್ತಿ ಬೆಳೆಸಿಕೊಳ್ಳಬೇಕು ಆಯುರ್ವೇದ ವಿದ್ಯಾರ್ಥಿಗಳಿಗೆ ಮುಂದಿನ ದಿನದಲ್ಲಿ ಆಯುರ್ವೇದಕ್ಕೆ ಹೆಚ್ಚಿನ ಬೇಡಿಕೆ ಬರುವುದರಿಂದ ಆಯುರ್ವೇದದಲ್ಲಿ ಅಪಾರ ನಂಬಿಕೆ ಇಡಬೇಕು ಎಂದು ತಿಳಿಸಿದರು.
70 ವರ್ಷ ಪ್ರಾಯದ ಇವರು ಸುಮಾರು 50 ವರ್ಷಗಳ ಅನುಭವದೊಂದಿಗೆ ಬಹುಮೂಲಿಕ ಪದ್ಧತಿಯಲ್ಲಿ ಪಾರಂಗತೆಯನ್ನು ಹೊಂದಿದ್ದು, ಬೆನ್ನುನೋವು, ಮೂಲವ್ಯಾಧಿ, ಚರ್ಮರೋಗ, ಸ್ತ್ರೀಯರ ರೋಗಗಳು, ದುರ್ಬಲತೆ ಮುಂತಾದ ಅನೇಕ ರೋಗಗಳಿಗೆ ಸೂಕ್ತವಾಗಿ ತಾವೇ ತಯಾರಿಸಿದ ಸಸ್ಯಮೂಲದ ಔಷಧಿಗಳ ಮೂಲಕ ಚಿಕಿತ್ಸೆ ನೀಡುತ್ತಾರೆ.
ಪ್ರಾಂಶುಪಾಲೆ ಡಾ.ಮಮತಾ ಕೆ., ವೈದ್ಯಕೀಯ ಅಧೀಕ್ಷಕ ಡಾ.ನಾಗರಾಜ್ ಎಸ್., ಆಡಳಿತ ವಿಭಾಗದ ಮುಖ್ಯಸ್ಥ ಡಾ.ಪ್ರಶಾಂತ್ ಕೆ., ಸ್ನಾತಕೋತ್ತರ ವಿಭಾಗದ ಡೀನ್ ಡಾ.ಶ್ರೀಕಾಂತ್ ಪಿ., ಸ್ನಾತಕ ವಿಭಾಗದ ಡೀನ್ ಡಾ.ಪೃಥ್ವಿರಾಜ್ ಪುರಾಣಿಕ್, ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಡಾ.ರಮಾದೇವಿ ಜಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜನಪದ ವೈದ್ಯಕೀಯ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ರವಿಕೃಷ್ಣ ಎಸ್. ವೈದ್ಯರನ್ನು ವೇದಿಕೆಗೆ ಆಹ್ವಾನಿಸಿದರು. ಸದಸ್ಯರಾದ ಡಾ.ರವಿ ಕೆ. ವೈದ್ಯರನ್ನು ಪರಿಚಯಸಿದರು. ಡಾ.ಅರ್ಹಂತ್ ಕುಮಾರ್ ಸನ್ಮಾನ ಪತ್ರ ವಾಚಿಸಿದರು. ಡಾ.ಸುಷ್ಮಿತಾ ಎಸ್. ಕಾರ್ಯಕ್ರಮ ನಿರೂಪಿಸಿದರು.