×
Ad

ಉಡುಪಿ: ಸಾಧಾರಣ ಮಳೆ; ಎರಡು ಮನೆಗಳಿಗೆ ಹಾನಿ

Update: 2025-07-22 19:45 IST

ಉಡುಪಿ, ಜು.22: ಜಿಲ್ಲೆಯಲ್ಲಿ ಸಾಧಾರಣ ಮಳೆ ಮುಂದುವರಿದಿದ್ದು, ದಿನದಲ್ಲಿ ಎರಡು ಮನೆಗಳಿಗೆ ಹಾನಿಯಾಗಿರುವ ವರದಿ ಬಂದಿದೆ. ಬ್ರಹ್ಮಾವರ ತಾಲೂಕಿನ ಕೋಡಿಕನ್ಯಾನ ಗ್ರಾಮದಲ್ಲಿ ರಾಮದೇವ ಖಾರ್ವಿ ಎಂಬವರ ಮನೆ ಮಳೆಯಿಂದ ಸಂಪೂರ್ಣ ಹಾನಿಗೊಳಗಾಗಿದ್ದು, ಮೂರು ಲಕ್ಷ ರೂ. ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ.

ಕುಂದಾಪುರ ತಾಲೂಕು ವಕ್ವಾಡಿ ಗ್ರಾಮದ ಗೋಪಾಲಕೃಷ್ಣ ಎಂಬವರ ಮನೆಯೂ ಮಳೆಯಿಂದ ಭಾಗಶ: ಹಾನಿಗೊಳಗಾಗಿದೆ. ಇದರಿಂದ ಸುಮಾರು 25 ಸಾವಿರ ರೂ.ಗಳ ನಷ್ಟವಾಗಿರುವಾಗಿರುವುದಾಗಿ ತಾಲೂಕು ಕಚೇರಿಗೆ ಮಾಹಿತಿ ಬಂದಿದೆ.

ನಡ್ಸಾಲಿನಲ್ಲಿ ಜೀವಹಾನಿ: ಜು.18ರಂದು ಕಾಪು ತಾಲೂಕು ನಡ್ಸಾಲು ಗ್ರಾಮದ ಚಂದ್ರಶೇಖರ್ (52) ಎಂಬವರ ಮೃತದೇಹ ಪಡುಬಿದ್ರಿ ಕಲ್ಲೊಟ್ಟೆ ಸೇತುವೆ ಬಳಿಯ ನೀರು ತುಂಬಿದ ಗದ್ದೆಯಲ್ಲಿ ಪತ್ತೆಯಾಗಿದೆ. ಮಳೆಯ ಸಂದರ್ಭದಲ್ಲಿ ಅಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟಿರಬೇಕೆಂದು ಶಂಕಿಸಲಾಗಿದೆ. ಮೃತರ ಮರಣೋತ್ತರ ಪರೀಕ್ಷಾ ವರದಿ ಇನ್ನೂ ಬಂದಿಲ್ಲ ಎಂದು ಕಾಪು ತಹಶೀಲ್ದಾರರು ಜಿಲ್ಲಾಧಿಕಾರಿ ಕಚೇರಿಯ ವಿಕೋಪ ನಿರ್ವಹಣಾ ಕೇಂದ್ರಕ್ಕೆ ಮಾಹಿತಿ ನೀಡಿದ್ದಾರೆ.

ಜಿಲ್ಲೆಯಲ್ಲಿ ಸರಾಸರಿ 24.5ಮಿ.ಮೀ.ಮಳೆಯಾಗಿದೆ. ಬೈಂದೂರಿನಲ್ಲಿ ಅತ್ಯಧಿಕ 39.1ಮಿ.ಮೀ. ಮಳೆಯಾ ದರೆ ಉಡುಪಿಯಲ್ಲಿ 35.9ಮಿ.ಮೀ. ಮಳೆ ಬಿದ್ದಿದೆ. ಉಳಿದಂತೆ ಕಾಪು 25.2, ಕುಂದಾಪುರ 22.5, ಕಾರ್ಕಳ 19.4, ಬ್ರಹ್ಮಾವರ 18.5 ಹಾಗೂ ಹೆಬ್ರಿಯಲ್ಲಿ 14.8 ಮಿ.ಮೀ.ಮಳೆಯಾದ ವರದಿ ಬಂದಿದೆ.

ಉಡುಪಿ ಜಿಲ್ಲೆಗೆ ನಾಳೆಯಿಂದ ಮುಂದಿನ ಐದು ದಿನಗಳವರೆಗೆ ಆರೆಂಜ್ ಅಲರ್ಟ್‌ನ ಸೂಚನೆ ನೀಡಲಾ ಗಿದೆ. ಈ ಸಂದರ್ಭದಲ್ಲಿ ಗಂಟೆಗೆ 40ರಿಂದ 50ಕಿ.ಮೀ. ವೇಗದ ಗಾಳಿ ಬೀಸುವ ಸಾದ್ಯತೆ ಇದ್ದು, ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿರುತ್ತದೆ. ಹೀಗಾಗಿ ಮೀನುಗಾರರು ಕಡಲಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಇದೇ ವೇಳೆ ಉತ್ತರ ಕನ್ನಡ ಜಿಲ್ಲೆಗೆ ರೆಡ್ ಅಲರ್ಟ್‌ನ ಸೂಚನೆ ನೀಡಲಾಗಿದೆ.

ಕರ್ನಾಟಕದ ಕರಾವಳಿ ತೀರದ ಕಾರವಾರ, ಮಂಗಳೂರು, ಪಣಂಬೂರು, ಹೊನ್ನಾವರ, ಭಟ್ಕಳ, ಗಂಗೊಳ್ಳಿ ಹಾಗೂ ಮಲ್ಪೆ ಬಂದರುಗಳಲ್ಲಿ ಸ್ಥಳೀಯ ಎಚ್ಚರಿಕೆಯ ಸೂಚನೆಯಾದ 3ನೇ ನಂ.ನ್ನು ಹಾರಿಸಲು ಸೂಚಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News