×
Ad

ಉಡುಪಿ | ಎಪಿಎಂಸಿ ಆವರಣದಲ್ಲಿ ಶೆಡ್, ಇಂಟರ್‌ಲಾಕ್‌ ಧ್ವಂಸ : ಆರೋಪಿಗಳ ಬಂಧನಕ್ಕೆ ಹಿತರಕ್ಷಣಾ ವೇದಿಕೆ ಆಗ್ರಹ

Update: 2025-11-03 21:43 IST

ಉಡುಪಿ : ಆದಿ ಉಡುಪಿಯ ಎಪಿಎಂಸಿ ಮಾರುಕಟ್ಟೆಯಲ್ಲಿರುವ ಮರಗಳನ್ನುಕಡಿದು, ಶೆಡ್ ಹಾಗೂ ಇಂಟರ್‌ಲಾಕ್‌ಗಳನ್ನು ಧ್ವಂಸ ಮಾಡಿರುವ ಕೃತ್ಯದಲ್ಲಿ ಭಾಗಿಯಾದವರನ್ನು ಕೂಡಲೇ ಬಂಧಿಸಿ, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಅವರಿಗೆ ಬೆಂಬಲ ನೀಡಿದ ಎಪಿಎಂಸಿಯ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು ಎಂದು ಆದಿ ಉಡುಪಿ ಎಪಿಎಂಸಿ ಹಿತ ರಕ್ಷಣಾ ವೇದಿಕೆಯ ವಿಜಯ ಕೊಡವೂರು ಆಗ್ರಹಿಸಿದ್ದಾರೆ.

ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಪಿಎಂಸಿ ಮಾರುಕಟ್ಟೆಯಲ್ಲಿ ನಿರಂತರ ಅವ್ಯವಹಾರ ನಡೆಯುತ್ತಿದೆ. ಇದಕ್ಕೆ ಅಧಿಕಾರಿಗಳು ಬೆಂಬಲ ನೀಡುತ್ತಿದ್ದಾರೆ. ಎರಡೂವರೆ ವರ್ಷಗಳ ಹಿಂದೆ ಮೋಸದಿಂದ ಜಾಗ ಮಾರಾಟ ಮಾಡಿದ ಸಂದರ್ಭದಲ್ಲಿಯೂ ನಾವು ಪ್ರತಿಭಟಿಸಿಕೊಂಡು ಬಂದಿದ್ದೇವೆ. ಇದೀಗ ಎಪಿಎಂಸಿ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಉಪಸ್ಥಿತಿಯಲ್ಲಿ ಪೊಲೀಸರನ್ನು ಧಿಕ್ಕರಿಸಿ ವ್ಯಾಪಾರಿಗಳು 50 ಜನರ ತಂಡ ಕಟ್ಟಿಕೊಂಡು ಮಾರುಕಟ್ಟಿಯಲ್ಲಿರುವ ಮರವನ್ನು ಅಕ್ರಮವಾಗಿ ಕಡಿದು, ಶೆಡ್‌ಗಳು ಮತ್ತು ಇಂಟರ್‌ಲಾಕ್‌ಗಳನ್ನು ಕಿತ್ತು ಹಾಳುಗೆಡವಿದ್ದಾರೆ ಎಂದು ಆರೋಪಿಸಿದರು.

ಈ ಕುರಿತು ಸಮಿತಿ, ಉಡುಪಿ ವಲಯ ಅರಣ್ಯ ಅಧಿಕಾರಿ, ಎಪಿಎಂಸಿ ಆಡಳಿತಾಧಿಕಾರಿ ಮತ್ತು ಕಾರ್ಯದರ್ಶಿಗಳಿಗೆ ಮುಂಚಿತವಾಗಿ ಮಾಹಿತಿ ನೀಡಿದ್ದರೂ, ಯಾವುದೇ ಸ್ಪಂದನೆ ನೀಡಿಲ್ಲ. ಅಲ್ಲದೆ, ಘಟನೆ ನಡೆದು ಒಂದು ವಾರವಾದರೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟಿಲ್ಲ. ಹೀಗಾಗಿ ಇದು ಅಧಿಕಾರಿಗಳ ಬೆಂಬಲದಿಂದಲೇ ಇವೆಲ್ಲಾ ನಡೆದಿದೆ ಎಂಬುದು ನಮ್ಮ ಅನುಮಾನವಾಗಿದೆ ಎಂದು ವಿಜಯ ಕೊಡವೂರು ತಿಳಿಸಿದರು.

ಸರಕಾರಿ ಆಸ್ತಿಪಾಸ್ತಿಗಳಿಗೆ ಹಾನಿ ಉಂಟು ಮಾಡಿದವರನ್ನು ಕೂಡಲೇ ಬಂಧಿಸಬೇಕು. ಅವರ ವಿರುದ್ಧ ಸೂಕ್ತ ಕಾನೂನು ರೀತಿಯ ಕ್ರಮವನ್ನು ಕೈಗೊಳ್ಳಬೇಕು. ಅಲ್ಲದೇ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಈ ಘಟನೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಸಾರ್ವಜನಿಕರೊಂದಿಗೆ ಸೇರಿಕೊಂಡು ಬೃಹತ್ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ವೇದಿಕೆಯ ರಾಘವೇಂದ್ರ ಉಪ್ಪೂರು, ಮಧುಕರ ಮುದ್ರಾಡಿ, ಸುಭಾಷಿತ್ ಕುಮಾರ್, ವೇದಾವತಿ ಹೆಗ್ಡೆ, ಪ್ರಭು ಗೌಡ ಫಯಾಜ್ ಅಹ್ಮದ್ ಮತ್ತಿತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News