×
Ad

ಪರಸ್ಪರ ಒಗ್ಗೂಡುವಿಕೆ ಭಾಷೆಯ ಅಪೂರ್ವ ಕೊಡುಗೆ: ಡಾ.ನಿಕೇತನ

Update: 2025-05-18 18:49 IST

ಉಡುಪಿ: ಪರಸ್ಪರ ಒಗ್ಗೂಡುವಿಕೆ ನಮ್ಮ ಸಂಸ್ಕೃತಿ ಮತ್ತು ಭಾಷೆಯ ಅಪೂರ್ವವಾದ ಕೊಡುಗೆಯಾಗಿದೆ. ನಮ್ಮ ಸಾಹಿತ್ಯ ವಿವಿಧ ಮಜಲುಗಳನ್ನು ಸ್ಪರ್ಶಿಸಿ ವಿವಿಧ ರಂಗಕ್ಕೆ ಕಾಲಿಟ್ಟರೂ ಕೂಡ ಅದರ ಮೌಲ್ಯವನ್ನು ಕಳೆದುಕೊಳ್ಳದೆ ಇನ್ನಷ್ಟು ಎತ್ತರಕ್ಕೆ ಏರಿದೆ. ಕನ್ನಡ ನಮ್ಮ ಸ್ವಾಭಿಮಾನದ ಸಂಕೇತವಾಗಿದೆ. ಇದನ್ನು ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದಾಗಿದೆ ಎಂದು ಪ್ರಾಧ್ಯಾಪಕಿ, ಸಾಹಿತಿ ಡಾ.ನಿಕೇತನ ಹೇಳಿದ್ದಾರೆ.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ವತಿಯಿಂದ ಶನಿವಾರ ಕೊಡವೂರು ದೇವಳದಲ್ಲಿ ನಡೆದ ಉಡುಪಿ ತಾಲೂಕು ೧೫ನೇ ಕನ್ನಡ ಸಾಹಿತ್ಯ ಸಮ್ಮೇಳನ ’ಕಲಾಯತನ ಸಾಹಿತ್ಯ ಯಕ್ಷ ಸಂಭ್ರಮ’ ದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.

ಸಮ್ಮೇಳನದ ಅಧ್ಯಕ್ಷ ಪ್ರೊ.ಎಂ.ಎಲ್ ಸಾಮಗ ಮಾತನಾಡಿ, ಮಲ್ಪೆಎಂದರೆ ಎಲ್ಲರಿಗೂ ನೆನಪಾಗುವುದು ಶಂಕರನಾರಾಯಣ ಸಾಮಗ ಅಂತ ಶ್ರೇಷ್ಠ ವ್ಯಕ್ತಿ. ಅವರು ಕೊಟ್ಟಂತಹ ಕೊಡುಗೆಗಳು ನಮ್ಮನ್ನು ಈ ಎತ್ತರಕ್ಕೆ ಏರಿಸುತ್ತಿದೆ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಯಕ್ಷಗಾನದ ಕಲಾವಿದರನ್ನು ಸಮ್ಮೇಳನ ಅಧ್ಯಕ್ಷ ಮಾಡಿರುವುದು ಯಕ್ಷಗಾನಕ್ಕೆ ನೀಡಿದ ದೊಡ್ಡ ಅಭಿನಂದನೆಯಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಯಕ್ಷರಂಗಾಯಣ ಕಾರ್ಕಳ ನಿರ್ದೇಶಕ ವೆಂಕಟ್ರಮಣ ಐತಾಳ, ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಕಾಶ್ ಕೊಡವೂರು, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕ ಉಡುಪಿ ವಿಶ್ವನಾಥ್ ಶೆಣೈ, ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಸಾಧು ಸಾಲಿಯನ್, ಕಾರ್ಯದರ್ಶಿ ಸತೀಶ್ ಕೊಡವೂರು, ತಾಲೂಕು ಪದಾಧಿಕಾರಿಗಳಾದ ಜನಾದರ್ನ ಕೊಡವೂರು, ರಾಜೇಶ್ ಭಟ್ ಪಣಿಯಾಡಿ, ರಂಜಿನಿ ವಸಂತ್ ಮೊದಲಾದವರು ಉಪಸ್ಥಿತರಿದ್ದರು.

ಸಭಾಧ್ಯಕ್ಷತೆಯನ್ನು ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ ವಹಿಸಿದ್ದರು. ಸಮಾಜದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಮತ್ತು ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳನ್ನು ಅಭಿನಂದಿಸಲಾಯಿತು. ಸಮ್ಮೇಳನದ ಅಧ್ಯಕ್ಷ ದಂಪತಿಯನ್ನು ಗೌರವಿಸಲಾಯಿತು.

ಪ್ರಭಾಕರ್ ತುಮರಿ ಮತ್ತು ರಾಘವೇಂದ್ರ ಪ್ರಭು ಕರ್ವಾಲು ಕಾರ್ಯಕ್ರಮ ನಿರೂಪಿಸಿದರು. ರಂಜನಿ ವಸಂತ್ ವಂದಿಸಿದರು. ನಂತರ ಯಕ್ಷ ರಂಗಾಯಣ ಇವರಿಂದ ಕುಮಾರವ್ಯಾಸ ಭಾರತ ವಿರಾಟ ಪರ್ವದಿಂದ ಆಯ್ದ ಭಾಗ ಆರೊಡನೆ ಕಾದುವೆನು ಕಾರ್ಯಕ್ರಮ ನಡೆಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News