×
Ad

Udupi | ಅಂಬಲಪಾಡಿ ಪ್ಲೈಓವರ್ ಕೆಳಗಡೆ ವಾಹನ ಸಂಚಾರಕ್ಕೆ ತಾತ್ಕಾಲಿಕ ಅನುಮತಿ: ಡಿಸಿ ಆದೇಶ

Update: 2025-11-16 12:00 IST

ಉಡುಪಿ, ನ.16: ಪ್ರಧಾನಿ ನರೇಂದ್ರ ಮೋದಿ ಅವರು ನ.28ರ ಉಡುಪಿ ಭೇಟಿಯ ಹಿನ್ನೆಲೆಯಲ್ಲಿ ಉಡುಪಿ ನಗರ ವ್ಯಾಪ್ತಿಯಲ್ಲಿ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಿಕೊಡುವ ಉದ್ದೇಶದಿಂದ ನ.15ರಿಂದ 30ರವರೆಗೆ ರಾಷ್ಟ್ರೀಯ ಹೆದ್ದಾರಿ 66ರ ಅಂಬಲಪಾಡಿ ಜಂಕ್ಷನ್‌ನ ಪ್ಲೈ ಓವರ್ ಕೆಳಗಡೆ ತಾತ್ಕಾಲಿಕವಾಗಿ ವಾಹನಗಳ ಸಂಚಾರಕ್ಕೆ ಅನುಮತಿ ನೀಡಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಆದೇಶ ಹೊರಡಿಸಿದ್ದಾರೆ.

ತೀರ್ಥಹಳ್ಳಿ-ಮಲ್ಪೆ ರಾಷ್ಟ್ರೀಯ ಹೆದ್ದಾರಿ 169(ಎ)ರ ಆದಿ ಉಡುಪಿ ಭಾಗದ ಚತುಷ್ಪಥ ರಸ್ತೆಯ ಎರಡು ಬದಿಯಲ್ಲಿ ಏಕಕಾಲದಲ್ಲಿ ಕಾಂಕ್ರೀಟಿಕರಣಗೊಳಿಸುವ ಕಾಮಗಾರಿಯು ಪ್ರಾರಂಭವಾಗಿದ್ದು, ಈ ಬಗ್ಗೆ ಈಗಾಗಲೇ ಆದಿಉಡುಪಿ ಚತುಷ್ಪಥ ರಸ್ತೆಯ ಎರಡೂ ಬದಿಯಲ್ಲಿ ನ.30ರವರೆಗೆ ತಾತ್ಕಾಲಿಕವಾಗಿ ವಾಹನ ಸಂಚಾರ ನಿಷೇಧಿಸಿ ಅಧಿಸೂಚನೆ ಹೊರಡಿಸಲಾಗಿದೆ.

ನ.28ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಉಡುಪಿ ಶ್ರೀಕೃಷ್ಣ ಮಠದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಬಗ್ಗೆ ಮಾಹಿತಿ ಇರುವುದರಿಂದ ಪ್ರಧಾನಿ ಉಡುಪಿ ಭೇಟಿ ಸಮಯ ಯಾವುದೇ ರೀತಿಯ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗದಂತೆ ಉಡುಪಿ ಅಂಬಲಪಾಡಿ ಜಂಕ್ಷನ್‌ನ ಫೈ ಓವರ್ ಕೆಳಗಡೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಆದುದರಿಂದ ನ.30ರವರೆಗೆ ಅಂಬಲಪಾಡಿ ಪ್ಲೈಓವರ್ ಕೆಳಗಡೆ ತಾತ್ಕಾಲಿಕವಾಗಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ ಯೋಜನಾ ಅನುಷ್ಠಾನ ವಿಭಾಗದ ಯೋಜನಾ ನಿರ್ದೇಶಕರು ಜಿಲ್ಲಾಧಿಕಾರಿಯವರನ್ನು ಕೋರಿದ್ದಾರೆ.

ಇವರ ವರದಿ ಹಾಗೂ ಪ್ರಸ್ತಾವನೆಯನ್ನು ಪರಿಗಣಿಸಿ ಕೇಂದ್ರ ಮೋಟಾರು ವಾಹನ ಕಾಯ್ದೆ 1988ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಾಮವಳಿಗಳು 1989ರ ಕಲಂ 221(ಎ)(2) ಮತ್ತು (5)ರನ್ವಯ ಅಂಬಲಪಾಡಿ ಫ್ಲೈಓವರ್ ಕೆಳಗಡೆ ತಾತ್ಕಾಲಿಕವಾಗಿ ವಾಹನ ಸಂಚಾರಕ್ಕೆ ಅನುಮತಿ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News