ಉಡುಪಿ | ಹೊಸ ಕಾರ್ಮಿಕ ಸಂಹಿತೆಗಳ ಪ್ರತಿ ದಹಿಸಿ ಕಾರ್ಮಿಕರಿಂದ ಪ್ರತಿಭಟನೆ
ಉಡುಪಿ, ನ.23: ದೇಶಾದ್ಯಂತ 25 ಕೋಟಿ ಕಾರ್ಮಿಕರು ಮುಷ್ಕರದಲ್ಲಿ ಭಾಗವಹಿಸಿ ಹೊಸ ಕಾರ್ಮಿಕ ಸಂಹಿತೆ ವಿರೋಧಿಸಿದರೂ ಕೇಂದ್ರ ಸರಕಾರವು ತನ್ನ ಪಕ್ಷದ ಬೆಳೆವಣಿಗೆಗೆ ದೇಶದ ಬಂಡವಾಳಗಾರರಿಂದ ಲಾಭ ಪಡೆಯಲು ಬಂಡವಾಳಗಾರರ ಪರವಾದ ನೂತನ ಕಾರ್ಮಿಕ ಸಂಹಿತೆ ಅಧಿಸೂಚನೆ ಹೊರಡಿಸಿದೆ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಆರೋಪಿಸಿದ್ದಾರೆ.
ಸಾಲಿಗ್ರಾಮದಲ್ಲಿ ನಡೆದ ಕಟ್ಟಡ ಕಾರ್ಮಿಕರ ಸಭೆಯಲ್ಲಿ ಅವರು ನೂತನ ಕಾರ್ಮಿಕ ಸಂಹಿತೆಯ ಪ್ರತಿಗಳನ್ನು ದಹಿಸಿ ಮಾತನಾಡುತಿದ್ದರು. ಹೊಸ ಕಾರ್ಮಿಕ ಸಂಹಿತೆ ಕಾರ್ಮಿಕರು ಅನ್ಯಾಯಕ್ಕೊಳಗಾದಾಗ ನಡೆಸುವ ಮುಷ್ಕರ ದೇಶದ್ರೋಹ ಆಗುತ್ತದೆ. ಮಾಲಕರು ಕಾರ್ಮಿಕರಿಗೆ ಸೌಲಭ್ಯಗಳನ್ನು ಕೊಡಲು ನಿರಾಕರಿಸಿದಾಗ ಕಾರ್ಮಿಕರ ನಿರೀಕ್ಷಕ ಮಾಡುವ ತಪಾಸಣೆ ನಿರ್ಬಂಧಿಸುತ್ತದೆ ಅಥವಾ ಸ್ಪೇಷಲಿಟೇಟರ್ ಆಗುತ್ತದೆ ಎಂದರು.
ಕಾರ್ಮಿಕ ಇಲಾಖೆ ಕಾರ್ಮಿಕರ ರಕ್ಷಣೆಗೆ ಬದಲಾಗಿ ಖಾಸಗಿ ವಲಯದಲ್ಲಿ ಉದ್ಯೋಗ ಒದಗಿಸುವ ಮಾಲಕರ ಏಜೆಂಟ್ ಆಗಿ ಕೆಲಸ ಮಾಡಲು ಸೀಮಿತಗೊಳ್ಳುವ ಅಪಾಯಕಾರಿ ಅಂಶಗಳು ಶ್ರಮಶಕ್ತಿ ನೀತಿ-202 ರಲ್ಲಿ ಅಡಕವಾಗಿದೆ. ಆದರೆ ಕೇಂದ್ರ ಸರ್ಕಾರ ಇವುಗಳನ್ನು ಮರೆಮಾಚಿ ಜನರನ್ನು ಮರಳುಗೊಳಿಸುವ ಪ್ರಕಟಣೆ ಮಾಡುತ್ತಿದೆ. ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳುವ ಹೊಸ ಸಂಹಿತೆ ರಾಜ್ಯ ಸರ್ಕಾರ ಜಾರಿ ಮಾಡಬಾರದು ಎಂದು ಅವರು ಆಗ್ರಹಿಸಿದರು.
ಹೊಸ ಸಂಹಿತೆಯು ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಮೇಲೆ ದುಷ್ಪರಿಣಾಮ ಬೀರುತ್ತದೆ ಮತ್ತು ಮಂಡಳಿ ರದ್ದಾಗುತ್ತದೆ. ಈ ಸಂಹಿತೆ ವಾಪಾಸ್ಸು ಪಡೆಯಬೇಕು ಎಂದು ಅವರು ಒತ್ತಾಯಿಸಿದರು.
ಉಡುಪಿ ತಾಲೂಕು ಸಾಲಿಗ್ರಾಮ, ಕುಂದಾಪುರ ತಾಲೂಕು ಹಾಲಾಡಿ, ಗಂಗೊಳ್ಳಿ, ಆಲೂರು ಗ್ರಾಮಗಳಲ್ಲಿ ಕಾರ್ಮಿಕರು ಪ್ರತಿಭಟನೆ ನಡೆಸಿ ಕೇಂದ್ರ ಸರಕಾರ ಜಾರಿ ಮಾಡಿದ ಸಂಹಿತೆಯ ಪ್ರತಿಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ವಿ., ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ(ಸಿಐಟಿಯು) ಗೌರವಾಧ್ಯಕ್ಷ ಚಿಕ್ಕ ಮೊಗವೀರ ಗಂಗೊಳ್ಳಿ, ಶಶಿಕಾಂತ್, ರಘುರಾಮ ನಾಯ್ಕ್, ಅನಂತ ಕುಲಾಲ್, ಉಡುಪಿ ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘದ ಮುಖಂಡರಾದ ರಾಮ ಕಾರ್ಕಡ, ಸಾಲಿಗ್ರಾಮ ಕ್ರಷ್ಣ, ನಾಗರಾಜ್, ಶಾರದಾ ಉಪಸ್ಥಿತರಿದ್ದರು. ಉಡುಪಿ ಜಿಲ್ಲೆಯಲ್ಲಿ 5 ಪ್ರದೇಶಗಳಲ್ಲಿ 217 ಮಂದಿ ಭಾಗವಹಿಸಿದ್ದರು.