×
Ad

ಭಟ್ಕಳ | ಸಂವಿಧಾನದ ಆಶಯಗಳ ಪಾಲನೆಗೆ ತಹಶೀಲ್ದಾರ್ ನಾಗೇಂದ್ರ ಕೋಲಶೆಟ್ಟಿ ಕರೆ

Update: 2026-01-26 15:52 IST

ಭಟ್ಕಳ: “ಸಂವಿಧಾನವು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕುಗಳನ್ನು ನೀಡುವುದರ ಜೊತೆಗೆ, ರಾಷ್ಟ್ರೀಯ ಏಕತೆ, ಸಮಗ್ರತೆ ಮತ್ತು ಸಾಮಾಜಿಕ ನ್ಯಾಯವನ್ನು ಕಾಪಾಡುವ ಜವಾಬ್ದಾರಿಯನ್ನೂ ಒಪ್ಪಿಸಿದೆ” ಎಂದು ತಹಶೀಲ್ದಾರ್ ನಾಗೇಂದ್ರ ಕೋಲಶೆಟ್ಟಿ ಹೇಳಿದ್ದಾರೆ.

ನಗರದ ನವಾಯತ್ ಕಾಲನಿಯಲ್ಲಿರುವ ವೈಎಂಎಸ್ಎ ತಾಲೂಕು ಕ್ರೀಡಾಂಗಣದಲ್ಲಿ ಸೋಮವಾರ ನಡೆದ ತಾಲೂಕು ಮಟ್ಟದ 77ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡುತ್ತಿದ್ದರು.

ಜನವರಿ 26, 1950ರಂದು ಸಂವಿಧಾನ ಜಾರಿಗೆ ಬರುವ ಮೂಲಕ ಭಾರತವು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ ಹಾಗೂ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ಉದಯಿಸಿತು. ಡಾ. ಬಿ.ಆರ್. ಅಂಬೇಡ್ಕರ್ ಅವರ ದೂರದೃಷ್ಟಿ ಮತ್ತು ಸಾಮಾಜಿಕ ಬದ್ಧತೆಯು ದೇಶದ ಆಡಳಿತ ವ್ಯವಸ್ಥೆಗೆ ಭದ್ರ ಬುನಾದಿ ಹಾಕಿಕೊಟ್ಟಿದೆ. ನ್ಯಾಯ, ಸ್ವಾತಂತ್ರ್ಯ ಮತ್ತು ಸಮಾನತೆಯ ಮೌಲ್ಯಗಳೇ ದೇಶವನ್ನು ಮುನ್ನಡೆಸುತ್ತಿರುವ ಶಕ್ತಿ ಎಂದರು.

ತಾಲೂಕು ಆಡಳಿತದ ಕಾರ್ಯವೈಖರಿಯನ್ನು ವಿವರಿಸಿದ ಅವರು, ಸರಕಾರ ಮತ್ತು ಜನರ ನಡುವೆ ತಾಲೂಕು ಆಡಳಿತವು ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದೆ. ಭೂ ದಾಖಲೆಗಳ ಗಣಕೀಕರಣ, ಪಹಣಿ ತಿದ್ದುಪಡಿ ಪ್ರಕ್ರಿಯೆಯ ಸರಳೀಕರಣ, ಸಾಮಾಜಿಕ ಭದ್ರತಾ ಯೋಜನೆಗಳ ಪಾರದರ್ಶಕ ವಿತರಣೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದು ಹೇಳಿದರು. ಯುವಜನತೆ ಶಿಸ್ತು, ಪ್ರಾಮಾಣಿಕತೆ ಮತ್ತು ದೇಶಪ್ರೇಮವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಇದೇ ವೇಳೆ 2024–25ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ತಾಲೂಕಿನ ಮೂವರು ವಿದ್ಯಾರ್ಥಿಗಳಿಗೆ ತಲಾ ರೂ.50,000 ಮೊತ್ತದ ಚೆಕ್ ವಿತರಿಸಿ ಗೌರವಿಸಲಾಯಿತು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಪೊಲೀಸ್ ಇಲಾಖೆ ಹಾಗೂ ಶಾಲಾ–ಕಾಲೇಜು ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್ ನಾವುಡ, ಸಿಪಿಐ ದಿವಾಕರ್, ಜಾಲಿ ಪಟ್ಟಣ ಪಂಚಾಯತ್ ಅಧ್ಯಕ್ಷೆ ಅಫ್ಶಾ ಕಾಝಿಯಾ, ಉಪಾಧ್ಯಕ್ಷ ಸೈಯದ್ ಇಮ್ರಾನ್ ಲಂಕಾ, ಗ್ಯಾರಂಟಿ ಯೋಜನೆ ಸಮಿತಿಯ ಅಧ್ಯಕ್ಷ ರಾಜು ಮಂಜಪ್ಪ ನಾಯ್ಕ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಎನ್. ನಾಯ್ಕ, ಬ್ಲಾಕ್ ಶಿಕ್ಷಣಾಧಿಕಾರಿ ವೆಂಕಟೇಶ್ ನಾಯಕ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ್ ಎಂ. ಸ್ವಾಗತಿಸಿದರು. ಶಿಕ್ಷಕ ಶ್ರೀಧರ್ ಶೇಟ್ ಕಾರ್ಯಕ್ರಮ ನಿರೂಪಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News