×
Ad

ಭಟ್ಕಳ| ಮಹಿಳೆಯರಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಆರೋಪ: ವಿದ್ಯಾರ್ಥಿ ಸೆರೆ

Update: 2026-01-19 22:32 IST

ಭಟ್ಕಳ: ಇನ್‌ಸ್ಟಾಗ್ರಾಂನಲ್ಲಿ ಮಹಿಳೆಯರಿಗೆ ಬೆದರಿಕೆ ಹಾಕಿ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ ಆರೋಪದ ಮೇಲೆ ಭಟ್ಕಳ ಟೌನ್ ಪೊಲೀಸರು ಒಬ್ಬ ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ.

ಬಂಧಿತನನ್ನು ಮೆಹ್ರಾನ್ ಮೆಹ್ತಾಬ್ ಶಾಬಂದ್ರಿ (19) ಎಂದು ಗುರುತಿಸಲಾಗಿದ್ದು, ‌ಈತ ಕುಮಟಾದ ತುಳಸಿ ಕಟ್ಟೆ ನಿವಾಸಿಯಾಗಿದ್ದಾನೆ. ಮೂಲತಃ ಭಟ್ಕಳಕ್ಕೆ ಸಮೀಪದ ಮಂಕಿ (ಹೊನ್ನಾವರ ತಾಲ್ಲೂಕು) ಮೂಲದವನಾಗಿರುವ ಈತ, ಪ್ರಸ್ತುತ ಕುಮಟಾದಲ್ಲಿ ವಾಸವಾಗಿದ್ದಾನೆ ಎಂದು ತಿಳಿದು ಬಂದಿದೆ.

ಪೊಲೀಸರ ಮಾಹಿತಿ ಪ್ರಕಾರ, ಮೆಹ್ರಾನ್ ಮಂಗಳೂರು ನಗರದ ಖಾಸಗಿ ಕಾಲೇಜೊಂದರಲ್ಲಿ ಬಿಸಿಎ (BCA) ವ್ಯಾಸಂಗ ಮಾಡುತ್ತಿದ್ದಾನೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕಾರವಾರ ಜೈಲಿಗೆ ರವಾನಿಸಲಾಗಿದೆ.

ತನಿಖೆಯ ವೇಳೆ ಆರೋಪಿಯು 18ಕ್ಕೂ ಹೆಚ್ಚು ನಕಲಿ ಇಮೇಲ್ ಖಾತೆಗಳನ್ನು ಹೊಂದಿರುವುದು ಪತ್ತೆಯಾಗಿದೆ. ಆತ ಅಪರಿಚಿತರ ವಿವಾಹ ಸಮಾರಂಭಗಳಿಗೆ ಹಾಜರಾಗಿ, ಅಲ್ಲಿ ಮಹಿಳೆಯರ ಫೋಟೋಗಳನ್ನು ಗುಪ್ತವಾಗಿ ಮೊಬೈಲ್‌ನಲ್ಲಿ ಸಂಗ್ರಹಿಸಿಕೊಂಡು, ನಂತರ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುತ್ತಿದ್ದನು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಭಟ್ಕಳದ ಒಬ್ಬ ಮಹಿಳೆ ಮೊದಲಿಗೆ ಈ ಸಂಬಂಧ ಭಟ್ಕಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂತರ ಪ್ರಕರಣವನ್ನು ಸೈಬರ್ ಕ್ರೈಂ ಸೆಲ್‌ಗೆ ವರ್ಗಾಯಿಸಲಾಗಿದ್ದು, ತನಿಖೆಯ ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಈ ಕುರಿತು ಭಟ್ಕಳ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ದಿವಾಕರ್ ಅವರ ಮೇಲ್ವಿಚಾರಣೆಯಲ್ಲಿ ಮುಂದಿನ ತನಿಖೆ ಮುಂದುವರಿದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News