ಅಂಕೋಲಾ | ಡಬಲ್ ಬ್ಯಾರಲ್ ಗನ್‌ನಿಂದ ಶೂಟ್ ಮಾಡಿಕೊಂಡು ನರ್ಸಿಂಗ್ ಹೋಂ ನೌಕರ ಆತ್ಮಹತ್ಯೆ
ಕಾರವಾರ: ಇಲ್ಲಿನ ಪಿಕಳೆ ನರ್ಸಿಂಗ್ ಹೋಂನಲ್ಲಿ ದೀರ್ಘಕಾಲ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದ ರಾಜು ಪಿಕಳೆ ಅವರು ಡಬಲ್ ಬ್ಯಾರಲ್ ಗನ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅವರ್ಸಾ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಸುಮಾರು 15 ದಿನಗಳ ಹಿಂದೆ ಪಿಕಳೆ ನರ್ಸಿಂಗ್ ಹೋಂನಲ್ಲಿ ರೋಗಿಯೊಬ್ಬರಿಗೆ ಅವಧಿ ಮೀರಿದ ಮಾತ್ರೆ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ರೋಗಿಯ ಸಂಬಂಧಿಕರೊಬ್ಬರು ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ಅದು ಜಿಲ್ಲಾದ್ಯಂತ ವ್ಯಾಪಕವಾಗಿ ವೈರಲ್ ಆಗಿತ್ತು.
ಈ ಘಟನೆಯಿಂದ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ರಾಜು ಪಿಕಳೆ ಅವರು, ವಿಡಿಯೋ ವೈರಲ್ ಆದ ಬಳಿಕ ಇದು ಕಣ್ತಪ್ಪಿನಿಂದ ನಡೆದ ಪ್ರಮಾದ ಎಂದು ಒಪ್ಪಿಕೊಂಡು ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದರು. ಆದರೂ ಸಾಮಾಜಿಕ ಜಾಲತಾಣಗಳಲ್ಲಿ ಮುಂದುವರಿದ ಟೀಕೆಗಳು ಹಾಗೂ ಅವಮಾನದಿಂದ ತೀವ್ರ ಮಾನಸಿಕ ಖಿನ್ನತೆಗೆ ಒಳಗಾದ ಅವರು, ಇಂದು ಬೆಳಿಗ್ಗೆ ತಮ್ಮ ನಿವಾಸದಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.