ಸಚಿವ ಮಂಕಾಳ ವೈದ್ಯ ಸುಳ್ಳು ಹೇಳುತ್ತಿದ್ದಾರೆ: ದಾಖಲೆ ಬಿಡುಗಡೆ ಮಾಡಿ ಬಿಜೆಪಿ ವಾಗ್ದಾಳಿ
ಭಟ್ಕಳ: ಸಿರಸಿ ಮಾರಿಕಾಂಬಾ ಜಾತ್ರೆಯ ಸಭೆಯಲ್ಲಿ ಸಚಿವ ಮಂಕಾಳ ವೈದ್ಯ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲೆಗೆ ಹೊಸ ಬಸ್‌ಗಳು ಬಂದಿಲ್ಲ ಎಂದು ಹೇಳಿರುವುದು ಸತ್ಯಕ್ಕೆ ದೂರವಾಗಿದೆ ಎಂದು ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಆರೋಪಿಸಿದ್ದಾರೆ.
ನಗರದ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ಸಂಜೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಎಸ್‌ಆರ್‌ಟಿಸಿ ಇಲಾಖೆಯಿಂದ ಪಡೆದ ಅಧಿಕೃತ ದಾಖಲೆಗಳನ್ನು ಬಿಡುಗಡೆ ಮಾಡಿ ತಮ್ಮ ಆರೋಪಕ್ಕೆ ಆಧಾರ ನೀಡಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲೆಗೆ ಯಾವುದೇ ಹೊಸ ಬಸ್ ಬಂದಿಲ್ಲ ಎಂಬ ಸಚಿವರ ಹೇಳಿಕೆ ಯನ್ನು ಅವರು ಖಂಡಿಸಿದರು.
“ಸಚಿವರು ಸಿರಸಿ ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಕಳೆದ ಏಳು ವರ್ಷಗಳಲ್ಲಿ ಒಂದೂ ಹೊಸ ಬಸ್ ಬಂದಿಲ್ಲ ಎಂದು ಹೇಳಿದ್ದರು. ಆದರೆ ಕೆಎಸ್‌ಆರ್‌ಟಿಸಿ ದಾಖಲೆಗಳ ಪ್ರಕಾರ 2018–19ರಿಂದ 2022–23ರ ಅವಧಿಯಲ್ಲಿ, ಅಂದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಿರಸಿ ವಿಭಾಗಕ್ಕೆ ಒಟ್ಟು 87 ಹೊಸ ಬಸ್‌ಗಳು ಮಂಜೂರಾಗಿವೆ. ಇದರಲ್ಲಿ ಸಿರಸಿ ಘಟಕವೊಂದಕ್ಕೇ 28 ಬಸ್‌ಗಳು ಸೇರಿವೆ” ಎಂದು ಮೂರ್ತಿ ವಿವರಿಸಿದರು.
ಧಾರ್ಮಿಕ ಸಭೆಯಂತಹ ಪವಿತ್ರ ವೇದಿಕೆಯಲ್ಲಿ ರಾಜಕೀಯ ಬೆರೆಸಿ ಸುಳ್ಳು ಹೇಳಿರುವುದು ಖಂಡನೀಯ ಎಂದು ಟೀಕಿಸಿದ ಅವರು, “ಸಚಿವರು ತಾಯಿ ಮಾರಿಕಾಂಬೆಯ ಮುಂದೆ ಕ್ಷಮೆ ಯಾಚಿಸಬೇಕು” ಎಂದು ಆಗ್ರಹಿಸಿದರು.
ಮಂಕಿ ಕ್ಷೇತ್ರದ ಚುನಾವಣಾ ಸೋಲಿನ ಹತಾಶೆಯಿಂದ ಸಚಿವರು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದ ಅನಂತಪುರ, ಧಾರ್ಮಿಕ ಸಭೆಗಳಲ್ಲಿಯೂ ಬಿಜೆಪಿ ವಿರುದ್ಧ ರಾಜಕೀಯ ಟೀಕೆ ನಡೆಸುತ್ತಿರು ವುದು ಸರಿಯಲ್ಲ ಎಂದರು. ಬೆಡ್ತಿ–ವರದಾ ಲಿಂಕ್ ಯೋಜನೆ ಕುರಿತು ಸ್ವಾಮೀಜಿಗಳ ಮುಂದೆ ಒಂದು ಮಾತು, ಸಾರ್ವಜನಿಕ ಸಭೆಗಳಲ್ಲಿ ಮತ್ತೊಂದು ಮಾತು ಹೇಳುವ ಮೂಲಕ ಸಚಿವರು ದ್ವಂದ್ವ ನಿಲುವು ತೋರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕುಮಟಾ ಮತ್ತು ಭಟ್ಕಳ ಭಾಗದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸುವುದಾಗಿ ಘೋಷಿಸಿದ್ದ ಸಚಿವರು, ಈಗ ಸರ್ಕಾರಿ ಆಸ್ಪತ್ರೆ ನಿರ್ಮಾಣ ಬಿಟ್ಟು ತಮ್ಮ ಹೆಸರಿನಲ್ಲಿ ಆಸ್ಪತ್ರೆ ಕಟ್ಟಲು ಮುಂದಾಗಿರುವುದೇ ಎಂಬ ಪ್ರಶ್ನೆಯನ್ನೂ ಅವರು ಎತ್ತಿದರು. ಸಿರಸಿಯಲ್ಲಿ ಈ ಹಿಂದೆ ಮಂಜೂರಾಗಿದ್ದ 142 ಕೋಟಿ ರೂ. ಆಸ್ಪತ್ರೆ ಉಪಕರಣಗಳ ಯೋಜನೆಗೆ ನೀಡಲಾಗಿದ್ದ 30 ಕೋಟಿ ರೂ. ಅನುದಾನವನ್ನು ಇದೀಗ 5 ಕೋಟಿ ರೂ.ಗೆ ಇಳಿಸಲಾಗಿದೆ ಎಂದು ದೂರಿದರು.
ಇದೇ ವೇಳೆ ಸಮುದ್ರದಲ್ಲಿನ ಪ್ಲಾಸ್ಟಿಕ್ ತ್ಯಾಜ್ಯ ತೆರವುಗೊಳಿಸುವ 850 ಕೋಟಿ ರೂ. ಮೊತ್ತದ ಯೋಜನೆಯ ಸ್ಥಿತಿ ಏನು? ಎಷ್ಟು ಪ್ಲಾಸ್ಟಿಕ್ ಸಂಗ್ರಹಿಸಲಾಗಿದೆ ಎಂಬ ಕುರಿತು ಸಚಿವರು ಸ್ಪಷ್ಟನೆ ನೀಡಲಿ ಎಂದು ಅವರು ಸವಾಲು ಹಾಕಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ರಮೇಶ್ ನಾಯ್ಕ ಕುಪ್ಪಳ್ಳಿ, ಗಣೇಶ್ ಹೆಗಡೆ ಯಲ್ಲಾಪುರ, ಮಂಜುನಾಥ್ ನಾಯ್ಕ ಮಾರಿಗುಡ್ಡಿ, ರಾಘವೇಂದ್ರ ನಾಯ್ಕ, ಶ್ರೀನಿವಾಸ ನಾಯ್ಕ ಇದ್ದರು.