×
Ad

‘ಹಸಿರು ಭಟ್ಕಳ’ ಸಂಕಲ್ಪ: ಐಎನ್ಎಫ್ ಗ್ರೀನ್ ಯೋಜನೆಗೆ ಸಚಿವ ಮಂಕಾಳ ವೈದ್ಯ ಚಾಲನೆ

Update: 2026-01-21 18:51 IST

ಭಟ್ಕಳ: “ಆರೋಗ್ಯವಾಗಿರಲು ಮತ್ತು ಆಸ್ಪತ್ರೆಗಳಿಂದ ದೂರವಿರಲು ಗಿಡಮರಗಳನ್ನು ಪ್ರೀತಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಭಟ್ಕಳವನ್ನು ಕಸಮುಕ್ತ, ಹಸಿರು ನಗರವನ್ನಾಗಿ ರೂಪಿಸುವುದು ನಮ್ಮೆಲ್ಲರ ಜವಾಬ್ದಾರಿ,” ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ ಹೇಳಿದರು.

ನಗರದ ಇಂಡಿಯನ್ ನವಾಯತ್ ಫೋರಂ (ಐಎನ್ಎಫ್) ವತಿಯಿಂದ ಹಮ್ಮಿಕೊಳ್ಳಲಾದ ‘ಐಎನ್ಎಫ್ ಗ್ರೀನ್ ಭಟ್ಕಳ’ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಹಿಂದೆ ಭಟ್ಕಳ ಹಸಿರಿನಿಂದ ತುಂಬಿದ ನಗರವಾಗಿತ್ತು. ಆದರೆ ಕಾಲಕ್ರಮೇಣ ಮನುಷ್ಯನ ಆಸೆ ಹೆಚ್ಚಿದಂತೆ ಹಸಿರು ಕಡಿಮೆಯಾಯಿತು. ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಮನೆಗಿಂತ ಹೆಚ್ಚಾಗಿ ಆಸ್ಪತ್ರೆಗಳಲ್ಲೇ ಸಮಯ ಕಳೆಯಬೇಕಾಗುತ್ತದೆ ಎಂದು ಸಚಿವರು ಎಚ್ಚರಿಸಿದರು. ಕೇವಲ ಗಿಡ ನೆಡುವುದಕ್ಕೆ ಮಾತ್ರ ಸೀಮಿತ ವಾಗದೆ, ನಗರವನ್ನು ಸಂಪೂರ್ಣವಾಗಿ ಕಸಮುಕ್ತಗೊಳಿಸುವುದು, ಶುದ್ಧ ಕುಡಿಯುವ ನೀರು ಹಾಗೂ ನಿರಂತರ ವಿದ್ಯುತ್ ಪೂರೈಕೆಗೆ ಯೋಜನೆ ರೂಪಿಸಲಾಗುತ್ತಿದೆ. ಈ ಕಾರ್ಯದಲ್ಲಿ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಅವರು ಹೇಳಿದರು.

ಮುನ್ಸಿಪಾಲಿಟಿಯ ವಾಟರ್ ಟ್ಯಾಂಕ್ ಸಮೀಪದ ಡಂಪಿಂಗ್ ಗ್ರೌಂಡ್ ಅನ್ನು ಮಕ್ಕಳ ಉದ್ಯಾನವನವಾಗಿ ಅಭಿವೃದ್ಧಿ ಪಡಿಸಲು ಸಂಪೂರ್ಣ ಬೆಂಬಲ ನೀಡುವುದಾಗಿ ಸಚಿವರು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ಐಎಎಸ್, ಐಎನ್ಎಫ್ ಸಂಸ್ಥೆಯ ಪರಿಸರ ಸ್ನೇಹಿ ಕಾರ್ಯವನ್ನು ಶ್ಲಾಘಿಸಿದರು. “ಗಿಡ ನೆಡುವುದಕ್ಕಿಂತಲೂ ಅದನ್ನು ಸಂರಕ್ಷಿಸುವುದು ಮುಖ್ಯ. ನೆಡಲಾದ ಗಿಡಗಳಿಗೆ ನೀರುಣಿಸಲು ಸ್ಪ್ರಿಂಕ್ಲರ್ ವ್ಯವಸ್ಥೆ ಮಾಡಿರುವುದು ಶ್ಲಾಘನೀಯ. ಇದರ ನಿರ್ವಹಣೆಯನ್ನು ನಗರಸಭೆ ಅಧಿಕಾರಿಗಳು ಕಡ್ಡಾಯವಾಗಿ ನೋಡಿಕೊಳ್ಳಬೇಕು. ನಿರ್ಲಕ್ಷ್ಯ ಕಂಡುಬಂದರೆ ನೇರವಾಗಿ ನನ್ನ ಗಮನಕ್ಕೆ ತರಬೇಕು,” ಎಂದು ಅವರು ಸೂಚನೆ ನೀಡಿದರು.

ಹೆದ್ದಾರಿ ಸಮಸ್ಯೆಗಳ ಕುರಿತು ಮಾತನಾಡಿದ ಅವರು, ಬಾಕಿ ಉಳಿದ ಕಾಮಗಾರಿಗಳ ಬಗ್ಗೆ ಸಭೆ ನಡೆಸಲಾಗುವುದು ಎಂದರು. ಅಪಘಾತ ಸಂಭವಿಸುವ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾ, ಲೈಟಿಂಗ್ ಹಾಗೂ ರಿಫ್ಲೆಕ್ಟರ್‌ಗಳನ್ನು ಅಳವಡಿಸಲು ಮುನ್ಸಿಪಲ್ ನಿಧಿ ಬಳಸಲಾಗುವುದು ಎಂದು ತಿಳಿಸಿದರು. ಭಟ್ಕಳ ಅಭಿವೃದ್ಧಿಗೆ ಮೀಸಲಿಟ್ಟಿರುವ ರೂ.50 ಕೋಟಿ ಸಿಎಂ–ಐಡಿಪಿ ಅನುದಾನದ ಪ್ರಸ್ತಾವನೆ ಶೀಘ್ರದಲ್ಲೇ ಅನುಮೋದನೆ ಪಡೆಯಲಿದೆ ಎಂದರು.

”ಐಎನ್ಎಫ್ ಗ್ರೀನ್ ಭಟ್ಕಳ’ ಯೋಜನೆಯ ಸಂಚಾಲಕ ಅರ್ಷದ್ ಮೊಹತೆಶಮ್ ಮಾತನಾಡಿ, ‘ಗ್ರೀನ್ ಭಟ್ಕಳ’ ಅಭಿಯಾನವನ್ನು ಪೈಲಟ್ ಯೋಜನೆಯಾಗಿ ಆರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ ಅಂಜುಮನ್, ಜಾಮಿಯಾ ಹಾಗೂ ನಗರದ ವಿವಿಧ ಪ್ರಮುಖ ರಸ್ತೆಗಳಿಗೂ ವಿಸ್ತರಿಸಲಾಗುವುದು ಎಂದು ತಿಳಿಸಿದರು. ನಗರದ ಪರಿಸರವನ್ನು ಸುಧಾರಿಸುವ ಉದ್ದೇಶದಿಂದ ಈ ಯೋಜನೆಗೆ ಕೈಹಾಕಲಾಗಿದೆ ಎಂದು ಹೇಳಿದರು.

ಇಂಡಿಯನ್ ನವಾಯತ್ ಫೋರಂ ಅಧ್ಯಕ್ಷ ಅಫ್ತಾಬ್ ಹುಸೈನ್ ಕೋಲಾ ಪ್ರಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಆದಿಲ್ ನಾಗರಮಠ್ ಧನ್ಯವಾದ ಅರ್ಪಿಸಿದರು. ಸೈಯ್ಯದ್ ಗುಫ್ರಾನ್ ಲಂಕಾ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಅಂಜುಮನ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮುಹಮ್ಮದ್ ಯೂನೂಸ್ ಕಾಜಿಯಾ, ತಂಝಿಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಎಡಿಸಿ ಜಹೀರ್ ಅಹಮದ್, ಮರ್ಕಝಿ ಖಲಿಫಾ ಜಮಾಅತುಲ್ ಮುಸ್ಲಿಮೀನ್ ಪ್ರಧಾನ ಕಾಝಿ ಮೌಲಾನ ಕ್ವಾಜಾ ಮುಈನುದ್ದೀನ್ ಅಕ್ರಮಿ ಮದನಿ ನದ್ವಿ, ತಹಸಿಲ್ದಾರ ನಾಗೇಂದ್ರ ಕೋಳಶೆಟ್ಟಿ, ಪುರಸಭೆ ಅಧಿಕಾರಿಗಳು, ಐಎನ್ಎಫ್ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ಭಟ್ಕಳವನ್ನು ಸುಂದರ ಹಾಗೂ ಆರೋಗ್ಯವಂತ ನಗರವನ್ನಾಗಿ ರೂಪಿಸುವ ಈ ಅಭಿಯಾನಕ್ಕೆ ಸ್ಥಳೀಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News