ಭಟ್ಕಳ | ವೆಂಕಟಾಪುರ ಹೆದ್ದಾರಿಯಲ್ಲಿ ಕಾರು ಅಪಘಾತ : ಇಬ್ಬರು ಯುವಕರು ಮೃತ್ಯು
ಆಯಾನ್, ಬಿಲಾಲ್
ಭಟ್ಕಳ : ವೆಂಕಟಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಕಾರು ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ನಡೆದಿದೆ.
ಅಪಘಾತದ ವೇಳೆ ಭಟ್ಕಳದ ಆಜಾದ್ ನಗರ ನಿವಾಸಿ ಮೊಹಮ್ಮದ್ ಅಶ್ರಫ್ ರುಕ್ನುದ್ದೀನ್ ಶಿಪಾಯಿ ಅವರ ಪುತ್ರ ಬಿಲಾಲ್ (15) ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಗೊಂಡಿದ್ದ ಕಾರು ಚಾಲನೆ ಮಾಡುತ್ತಿದ್ದ ಆಯಾನ್ (20) ಹೆಚ್ಚಿನ ಚಿಕಿತ್ಸೆಗೆ ಉಡುಪಿಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಶಿರಾಲಿಯಿಂದ ಭಟ್ಕಳದತ್ತ ಕಾರಿನಲ್ಲಿ ಬರುತ್ತಿದ್ದ ಯುವಕರು ಮಧ್ಯರಾತ್ರಿ ವೇಳೆಗೆ ವೆಂಕಟಾಪುರ ಹೆದ್ದಾರಿ ಭಾಗದಲ್ಲಿ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಅಪಘಾತದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ, ಅಪಘಾತ ಸ್ಥಳದಲ್ಲಿ ಜೆಲ್ಲಿ ಕಲ್ಲುಗಳು ಚದುರಿರುವುದು ಕಂಡುಬಂದಿದ್ದು, ಅವುಗಳಿಂದಲೇ ಅಪಘಾತ ಸಂಭವಿಸಿರಬಹುದೆಂಬ ಅನುಮಾನ ವ್ಯಕ್ತವಾಗಿದೆ.
ಮೃತ ಬಿಲಾಲ್‌ನ ಮೃತದೇಹವನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಂತರ ಕುಟುಂಬಕ್ಕೆ ಒಪ್ಪಿಸಲಾಗುವುದು ಎಂದು ತಿಳಿದು ಬಂದಿದೆ.