ಭಟ್ಕಳ: ಜೂಜಾಟ ನಡೆಸುತ್ತಿದ್ದ ಆರೋಪ; ಸೊತ್ತು ಸಹಿತ ಇಬ್ಬರ ಬಂಧನ
ಭಟ್ಕಳ: ಬೈಲೂರಿನಲ್ಲಿ ಇಸ್ಪೀಟ್ ಕಾರ್ಡ್‌ಗಳ ಮೂಲಕ ಜೂಜಾಟ ನಡೆಸಲಾಗುತ್ತಿದ್ದ ಸ್ಥಳಕ್ಕೆ ಮರ್ಡೇಶ್ವರ ಪೊಲೀಸರು ದಾಳಿ ನಡೆಸಿ, ಇಬ್ಬರನ್ನು ಬಂಧಿಸಿ, ಎರಡು ದ್ವಿಚಕ್ರ ವಾಹನಗಳು ಹಾಗೂ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.
ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಬೈಲೂರು ರಸ್ತೆ ಬದಿಯಲ್ಲಿರುವ ಸಣ್ಣ ಅಂಗಡಿಯೊಂದರ ಬಳಿ ಅಕ್ರಮವಾಗಿ ಜೂಜಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಮರ್ಡೇಶ್ವರ ಪೊಲೀಸ್ ಠಾಣೆಯ ಉಪನಿರೀಕ್ಷಕ ಹನುಮಂತ ಬಡೇರ ಅವರ ನೇತೃತ್ವದ ತಂಡ ದಾಳಿ ನಡೆಸಿತು. ಈ ವೇಳೆ ದಿನೇಶ್ ಎರಿಯಾ ದಿವಾಡೀಗ, ಈಶ್ವರ ಮಂಜುನಾಥ ದಿವಾಡೀಗ, ಸುಬ್ರಾಯ ನಾಗಪ್ಪ ನಾಯ್ಕ್, ಪ್ರವೀಣ ರವಿ ನಾಯ್ಕ್ ಸೇರಿದಂತೆ ಇತರರು ಸ್ಪೀಡ್ ಕಾರ್ಡ್‌ಗಳ ಮೂಲಕ ಜೂಜಾಟದಲ್ಲಿ ತೊಡಗಿರುವುದು ಕಂಡುಬಂದಿತು.
ಪೊಲೀಸರು ಸ್ಥಳದಲ್ಲೇ 6,020 ನಗದು ಹಣ ಮತ್ತು ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು, ದಿನೇಶ್ ಮತ್ತು ಮಂಜುನಾಥ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನು ಸುಬ್ರಾಯ, ಪ್ರವೀಣ ಹಾಗೂ ಮತ್ತೊಬ್ಬ ದ್ವಿಚಕ್ರ ವಾಹನದ ಚಾಲಕ ಪರಾರಿಯಾಗಲು ಯಶಸ್ವಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಮರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾದ ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.