ಭಟ್ಕಳ: ‘ವಿಸ್ಡಮ್ ಸ್ಪೆಷಲ್ ಸ್ಕೂಲ್’ ಲೋಕಾರ್ಪಣೆ
ಭಟ್ಕಳ: ವಿಶೇಷ ಅಗತ್ಯವುಳ್ಳ ಮಕ್ಕಳ ಶೈಕ್ಷಣಿಕ, ಸಾಮಾಜಿಕ ಹಾಗೂ ಮಾನಸಿಕ ಸಬಲೀಕರಣದ ಉದ್ದೇಶದಿಂದ ಭಟ್ಕಳದಲ್ಲಿ ‘ವಿಸ್ಡಮ್ ಸ್ಪೆಷಲ್ ಸ್ಕೂಲ್’ ಎಂಬ ನೂತನ ವಿಶೇಷ ಶಾಲೆಯನ್ನು ಜಮಾಅತುಲ್ ಮುಸ್ಲಿಮೀನ್ ಪ್ರಧಾನ ಖಾಝಿ ಮೌಲಾನ ಅಬ್ದಲ್ ರಬ್ ಖತೀಬ್ ನದ್ವಿ ಹಾಗೂ ಮರ್ಕಝಿ ಖಲಿಫಾ ಜಮಾಅತ್ ನ ಪ್ರಧಾನ ಖಾಝಿ ಮೌಲಾನ ಕ್ವಾಜಾ ಮುಈನುದ್ದೀನ್ ಅಕ್ರಮಿ ಮದನಿ ನದ್ವಿ ಉದ್ಘಾಟಿದರು.
ಈ ಸಂದರ್ಭದಲ್ಲಿ ಮಾತನಾಡಿದ . ಮೌಲಾನ ಅಬ್ದಲ್ ರಬ್ ಖತೀಬ್ ನದ್ವಿ, ವಿಶೇಷ ಮಕ್ಕಳ ಬದುಕನ್ನು ರೂಪಿಸುವುದು ಹಾಗೂ ಅವರಿಗೆ ಸಮಾಜದಲ್ಲಿ ಸಮಾನ ಅವಕಾಶ ಮತ್ತು ಗೌರವ ಒದಗಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು. ಮರ್ಕಝಿ ಖಲಿಫಾ ಜಮಾಅತ್ ನ ಪ್ರಧಾನ ಖಾಝಿ ಮೌಲಾನ ಕ್ವಾಜಾ ಮುಈನುದ್ದೀನ್ ಅಕ್ರಮಿ ಮಾತನಾಡಿ ಶುಭ ಹಾರೈಸಿದರು.
ಸಮಾರಂಭದಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಎಸ್.ಎಂ.ಸೈಯ್ಯದ್ ಶಕೀಲ್, ಸಮುದಾಯದ ಹಲವಾರು ತಾಯಂದಿರು ತಮ್ಮ ವಿಶೇಷಚೇತನ ಮಕ್ಕಳ ಶಿಕ್ಷಣಕ್ಕಾಗಿ ದೂರದ ಸಂಸ್ಥೆಗಳ ಮೇಲೆ ಅವಲಂಬಿಸಬೇಕಾದ ಪರಿಸ್ಥಿತಿಯನ್ನು ಕಂಡು, ಈ ಶಾಲೆ ಸ್ಥಾಪಿಸುವ ಸಂಕಲ್ಪ ಮೂಡಿತು ಎಂದು ತಿಳಿಸಿದರು. ಸಮುದಾಯದ ಪ್ರತಿಯೊಂದು ಮಗು ಮುಂದುವರಿಯಬೇಕು, ಯಾವುದೇ ಮಗು ಹಿಂದೆ ಉಳಿಯಬಾರದು ಎಂಬ ದೃಢ ನಿಲುವಿನೊಂದಿಗೆ ನಿರಂತರ ಪರಿಶ್ರಮದಿಂದ ಈ ಸಂಸ್ಥೆಯನ್ನು ಆರಂಭಿಸಲಾಗಿದೆ ಎಂದರು
ಮೌಲಾನ ಸೈಯ್ಯದ್ ಝುಬೇರ್ ಮಾತನಾಡಿ, ಭಟ್ಕಳದಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ಸುಮಾರು 200 ರಿಂದ 300 ವಿಶೇಷಚೇತನ ಮಕ್ಕಳು ಇದ್ದು, ಸೂಕ್ತ ಮಾರ್ಗದರ್ಶನ ಮತ್ತು ವ್ಯವಸ್ಥೆಗಳ ಕೊರತೆಯಿಂದ ಹಲವರು ಮನೆಗಳಲ್ಲೇ ಸೀಮಿತರಾಗಿದ್ದರು. ಅಂತಹ ಮಕ್ಕಳಿಗೆ ಶಿಕ್ಷಣ, ತರಬೇತಿ ಮತ್ತು ಆತ್ಮವಿಶ್ವಾಸ ನೀಡುವ ಉದ್ದೇಶ ದಿಂದ ಈ ಶಾಲೆ ಆರಂಭಿಸಲಾಗಿದೆ. ಮಕ್ಕಳನ್ನು ಕೇವಲ ನಾಲ್ಕು ಗೋಡೆಗಳೊಳಗೆ ಬಂಧಿಸದೇ, ಕ್ರೀಡೆ, ಚಿತ್ರಕಲೆ, ಸೃಜನಶೀಲ ಚಟುವಟಿಕೆಗಳು ಹಾಗೂ ದೃಶ್ಯಮಾಧ್ಯಮಗಳ ಮೂಲಕ ಬದುಕಿನ ಹೊಸ ಆಯಾಮಗಳನ್ನು ಪರಿಚಯಿಸುವ ಯೋಜನೆಯಿದೆ ಎಂದರು.
ರಾಬಿತಾ ಸೂಸೈಟಿಯ ಪ್ರಧಾನ ಕಾರ್ಯದರ್ಶಿ ಡಾ.ಅತಿಕುರ್ರಹ್ಮಾನ್ ಮುನೀರಿ, ಈ ಸಂಸ್ಥೆ ಸಮುದಾಯಕ್ಕೆ ಮಾತ್ರವಲ್ಲ, ಸಮಾಜಕ್ಕೂ ಮಾದರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು. ಅಗತ್ಯವಿರುವ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ವಿಶೇಷ ಮಕ್ಕಳಿಗೆ ಕೇವಲ ಪಾಠವಲ್ಲ, ಪ್ರೀತಿ, ಮಾನವೀಯತೆ ಮತ್ತು ಆತ್ಮಗೌರವ ಕಲಿಸುವುದು ಇಂದಿನ ಅಗತ್ಯ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಅಂಜುಮನ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮುಹಮ್ಮದ್ ಯೂನೂಸ್ ಕಾಜಿಯಾ, ರಾಬಿತಾ ಸೂಸೈಟಿಯ ಅಧ್ಯಕ್ಷ ಫಾರೂಖ್ ಮುಸ್ಬಾ, ಪ್ರ.ಕಾ. ಡಾ.ಅತಿಕುರ್ರಹ್ಮಾನ್ ಮುನೀರಿ, ಜಿದ್ದಾ ಜಮಾಅತ್ ಅಧ್ಯಕ್ಷ ಖಮರ್ ಸಾದಾ, ದುಬೈ ಜಮಾಅತ್ ಕಾರ್ಯದರ್ಶಿ ಜೈಲಾನಿ ಮೊಹತೆಶಮ್, ಮುಸದ್ದೀಖ್ ಇಕ್ಕೇರಿ ಕಿಮಿಯಾ, ಮೌಲಾನ ಇಲ್ಯಾಸ್ ನದ್ವಿ, ಮತ್ತಿತರು ಭಾಗವಹಿಸಿ ಶುಭ ಹಾರೈಸಿದರು.
ಮೌಲಾನ ಝೀಯಾವುರ್ರಹ್ಮಾನ್ ರುಕ್ನುದ್ದೀನ್ ನದ್ವಿಯವರ ಕುರಾನ್ ಪಠಣದೊಂದಿಗೆ ಕಾರ್ಯಕ್ರಮ ಆರಂಭ ಗೊಂಡಿತು. ವಿಸ್ಡಂ ವಿಶೇಷ ಶಾಲೆಯ ಕಾರ್ಯದರ್ಶಿ ಮೌಲಾನ ಸೈಯ್ಯದ್ ಯಾಸೀರ್ ನದ್ವಿ ಬರ್ಮಾವರ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಅರ್ಪಿಸಿದರು.