ಶಿಕ್ಷಣದ ಜತೆಗೆ ವ್ಯಕ್ತಿತ್ವ ನಿರ್ಮಾಣಕ್ಕೂ ಆದ್ಯತೆ ಅಗತ್ಯ: ಯೂನುಸ್ ಕಾಝಿಯಾ
ಭಟ್ಕಳ: ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯಷ್ಟೇ ಅಲ್ಲದೆ, ಉತ್ತಮ ಸಂಸ್ಕಾರ, ವ್ಯಕ್ತಿತ್ವ ಹಾಗೂ ಸಾಮಾಜಿಕ ಹೊಣೆಗಾರಿಕೆಯ ಗುಣಗಳನ್ನು ಬೆಳೆಸುವುದಕ್ಕೂ ಆದ್ಯತೆ ನೀಡಬೇಕು ಎಂದು ಅಂಜುಮನ್ ಹಾಮಿ-ಎ-ಮುಸ್ಲೀಮೀನ್ ಅಧ್ಯಕ್ಷ ಯೂನಿಸ್ ಕಾಝಿಯಾ ಹೇಳಿದರು.
ನಗರದ ಮದೀನಾ ಜುಮ್ಮಾ ಮಸೀದಿಯಲ್ಲಿ ಶನಿವಾರ ರಾತ್ರಿ ಮದೀನಾ ವೆಲ್ಫೇರ್ ಸೊಸೈಟಿ ವತಿಯಿಂದ ಆಯೋಜಿಸಿದ್ದ ಶೈಕ್ಷಣಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಶಿಕ್ಷಣದ ಜತೆಗೆ ತರಬೇತಿ ಹಾಗೂ ವ್ಯಕ್ತಿತ್ವ ನಿರ್ಮಾಣಕ್ಕೂ ಒತ್ತು ನೀಡಬೇಕು. ನಮ್ಮ ಶಿಕ್ಷಕರು ಶಿಕ್ಷಣದ ಜತೆಗೆ ಸಂಸ್ಕಾರಕ್ಕೂ ಆದ್ಯತೆ ನೀಡಿದ್ದರಿಂದಲೇ ಅದರ ಪರಿಣಾಮ ಇಂದು ನಮ್ಮ ಜೀವನದಲ್ಲಿ ಕಾಣಿಸುತ್ತಿದೆ’ ಎಂದರು.
ಪೋಷಕರು ಮಕ್ಕಳ ಮೊಬೈಲ್ ಹಾಗೂ ಪರದೆ ಬಳಕೆಯ ಸಮಯವನ್ನು ನಿಯಂತ್ರಿಸಿ, ಅವರನ್ನು ಸಕಾರಾತ್ಮಕ ಚಟುವಟಿಕೆಗಳತ್ತ ಪ್ರೋತ್ಸಾಹಿಸಬೇಕು. ವಿದ್ಯಾರ್ಥಿಗಳು ಶಿಕ್ಷಕರನ್ನು ಗೌರವಿಸುವುದರೊಂದಿಗೆ ಜೀವನದಲ್ಲಿ ಶಿಸ್ತು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಯುವಜನರು ವಾಹನಗಳನ್ನು ಅತಿವೇಗವಾಗಿ ಚಲಾಯಿಸದೆ ಸಂಚಾರ ನಿಯಮಗಳನ್ನು ಪಾಲಿಸಬೇಕು. ಅಲ್ಲದೆ, ನಾಗರಿಕ ಸೇವಾ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶಿಸುವ ಮೂಲಕ ಸಮಾಜ ಹಾಗೂ ದೇಶದ ಸೇವೆಗೆ ಮುಂದಾಗಬೇಕು. ಈ ಕ್ಷೇತ್ರದಲ್ಲಿ ಗಂಭೀರವಾಗಿ ಸಿದ್ಧತೆ ನಡೆಸುವ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ತರಬೇತಿಯ ವೆಚ್ಚ ಸೇರಿದಂತೆ ಅಗತ್ಯ ನೆರವು ನೀಡಲು ಸಿದ್ಧವಿರುವುದಾಗಿ ಕಾಝಿಯಾ ತಿಳಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಬಿಲಾಲ್ ಮಸೀದಿಯ ಇಮಾಮ್ ಮೌಲಾನಾ ಶಾಕಿರುಲ್ಲಾ ರಶಾದಿ ಮಾತನಾಡಿ, ಯುವಜನರ ಧಾರ್ಮಿಕ ಹಾಗೂ ನೈತಿಕ ತರಬೇತಿ ಇಂದಿನ ಅಗತ್ಯವಾಗಿದೆ ಎಂದರು. ಮಾದಕ ವಸ್ತುಗಳ ಬಳಕೆ ಸೇರಿದಂತೆ ಯುವಜನರು ಎದುರಿಸುತ್ತಿರುವ ಸವಾಲುಗಳನ್ನು ತಡೆಯಲು ಕುಟುಂಬ ಮತ್ತು ಸಮಾಜ ಒಗ್ಗೂಡಿ ಕೆಲಸ ಮಾಡಬೇಕು ಎಂದು ಹೇಳಿದರು.
83 ವಿದ್ಯಾರ್ಥಿಗಳಿಗೆ ಪ್ರಶಸ್ತಿ: 2024 ಮತ್ತು 2025ರಲ್ಲಿ ವಿವಿಧ ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿ ಗಳು ಹಾಗೂ ವಿದ್ಯಾರ್ಥಿನಿಯರಿಗೆ ಒಟ್ಟು 83 ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಕುರ್‌ಆನ್ ಕಂಠಪಾಠ, ಫಜೀಲತ್ ಶಿಕ್ಷಣ, ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಹಾಗೂ ಉನ್ನತ ಶಿಕ್ಷಣ ಸೇರಿದಂತೆ ಏಳು ವಿಭಾಗಗಳಲ್ಲಿ ಸಾಧನೆ ಮಾಡಿದವರನ್ನು ಗೌರವಿಸಲಾಯಿತು.
ಕಾರ್ಯಕ್ರಮದ ಸಂಚಾಲಕ ರಮೀಜ್ ಕೋಲಾ ಪ್ರಶಸ್ತಿಗಳ ವಿವರ ನೀಡಿದರು. ಮದೀನಾ ವೆಲ್ಫೇರ್ ಸೊಸೈಟಿ ಪ್ರಧಾನ ಕಾರ್ಯದರ್ಶಿ ಮೌಲಾನಾ ಅಬ್ದುಸ್ಸಮೀಅ್ ನದ್ವಿ ನಿರೂಪಿಸಿದರು. ಅಧ್ಯಕ್ಷ ಮೌಲಾನಾ ಇರ್ಫಾನ್ ನದ್ವಿ ಅಧ್ಯಕ್ಷತೆ ವಹಿಸಿ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು. ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.