ಶಿಕ್ಷಣದ ಜತೆಗೆ ಮಕ್ಕಳ ಧಾರ್ಮಿಕ ಗುರುತಿನ ರಕ್ಷಣೆ ಅಗತ್ಯ: ಮೌಲಾನಾ ಮುಹಮ್ಮದ್ ಇಲಿಯಾಸ್ ನದ್ವಿ
ಭಟ್ಕಳ: ಶೈಕ್ಷಣಿಕ ಸಾಧನೆಯ ಜತೆಗೆ ಮಕ್ಕಳ ನಂಬಿಕೆ, ನೈತಿಕತೆ ಹಾಗೂ ವ್ಯಕ್ತಿತ್ವದ ಬೆಳವಣಿಗೆಗೂ ಪೋಷಕರು ಆದ್ಯತೆ ನೀಡಬೇಕು ಎಂದು ಮೌಲಾನಾ ಮುಹಮ್ಮದ್ ಇಲಿಯಾಸ್ ನದ್ವಿ ಹೇಳಿದರು.
ಹೊನ್ನಾವರ ತಾಲ್ಲೂಕಿನ ವಲ್ಕಿಯ ಯುನೈಟೆಡ್ ಪಬ್ಲಿಕ್ ಸ್ಕೂಲ್‌ನಲ್ಲಿ ಶರಾವತಿ ಮುಸ್ಲಿಂ ಕೌನ್ಸಿಲ್ ವತಿಯಿಂದ ಆಯೋಜಿಸಿದ್ದ ಶರಾವತಿ ಶೈಕ್ಷಣಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳಿಗೆ ಉತ್ತಮ ಶೈಕ್ಷಣಿಕ ಅವಕಾಶಗಳ ಜತೆಗೆ ಮೌಲ್ಯಾಧಾರಿತ ವಾತಾವರಣವೂ ಅಗತ್ಯ. ಪೋಷಕರು ಮಕ್ಕಳ ಶಿಕ್ಷಣವನ್ನು ಕೇವಲ ಅಂಕಗಳ ಸಾಧನೆಗೆ ಸೀಮಿತಗೊಳಿಸದೆ, ಅವರ ನೈತಿಕ ಹಾಗೂ ವ್ಯಕ್ತಿತ್ವದ ಬೆಳವಣಿಗೆಯತ್ತ ಗಮನ ಹರಿಸಬೇಕು ಎಂದರು.
ಸಮುದಾಯವು ತನ್ನದೇ ಆದ ಶಿಕ್ಷಣ ಸಂಸ್ಥೆಗಳನ್ನು ಬಲಪಡಿಸುವುದರ ಜತೆಗೆ, ಮಕ್ಕಳಿಗೆ ಉತ್ತಮ ಶೈಕ್ಷಣಿಕ ಹಾಗೂ ನೈತಿಕ ವಾತಾವರಣ ಕಲ್ಪಿಸಲು ಮುಂದಾಗಬೇಕು. ವಿಶೇಷವಾಗಿ ಹೆಣ್ಣುಮಕ್ಕಳ ಶಿಕ್ಷಣದಲ್ಲಿ ಅವರ ಧಾರ್ಮಿಕ ಹಾಗೂ ನೈತಿಕ ಮೌಲ್ಯಗಳನ್ನು ಕಾಪಾಡುವ ವಾತಾವರಣಕ್ಕೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
13ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗೌರವ: ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ, ಎಂಜಿನಿಯರಿಂಗ್ ಹಾಗೂ ಇತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 13ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪದಕ, ಪ್ರಮಾಣಪತ್ರ ಹಾಗೂ ಬಹುಮಾನ ನೀಡಿ ಗೌರವಿಸಲಾಯಿತು.
ವಲ್ಕಿಯ ಯುನೈಟೆಡ್ ಪಬ್ಲಿಕ್ ಸ್ಕೂಲ್‌ನ ಮುಹಮ್ಮದ್ ಬರಾಕ್ ಅವರು ಕುರ್‌ಆನ್ ಕಂಠಪಾಠ ಪೂರ್ಣಗೊಳಿಸು ವುದರ ಜತೆಗೆ ಎಸ್‌ಎಸ್‌ಎಲ್‌ಸಿಯಲ್ಲಿ 96.8% ಅಂಕ ಗಳಿಸಿ ಗಮನ ಸೆಳೆದರು. ಎಂಜಿನಿಯರಿಂಗ್‌ನಲ್ಲಿ 95.16% ಅಂಕ ಗಳಿಸಿದ ಅಕ್ಸಾ ಅಂಜುಮ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಶರಾವತಿ ಮುಸ್ಲಿಂ ಕೌನ್ಸಿಲ್ ಪ್ರಧಾನ ಕಾರ್ಯದರ್ಶಿ ಡಾ. ಅಬ್ದುಲ್ಲಾ ಅಸ್ಕರಿ ಅಧ್ಯಕ್ಷತೆ ವಹಿಸಿದ್ದರು. ಜಾಮಿಯಾ ಇಸ್ಲಾಮಿಯಾ ಭಟ್ಕಳದ ಮೌಲಾನಾ ಅಬ್ದುಲ್ ಮತೀನ್ ಮುನೀರಿ ಸೇರಿದಂತೆ ಗಣ್ಯರು, ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು.