ಭಟ್ಕಳ: ಗಂಗಾಧರ ನಾಯ್ಕ, ಶ್ರೀಧರ್ ಶೇಟ್‌ರಿಗೆ ಕರ್ನಾಟಕ ಸಾಧಕ ಶ್ರೇಷ್ಠ ರತ್ನ ಪ್ರಶಸ್ತಿ
ಭಟ್ಕಳ: ನಾಗಯಕ್ಷೆ ಸಭಾಭವನದಲ್ಲಿ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ) ಬೆಂಗಳೂರು ಹಾಗೂ ಭಟ್ಕಳ ತಾಲೂಕು ಘಟಕದ ಸಹಯೋಗದಲ್ಲಿ ನಡೆದ ರಾಜ್ಯಮಟ್ಟದ ಪತ್ರಕರ್ತರ ವಿಚಾರ ಸಂಕಿರಣ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗಂಗಾಧರ ನಾಯ್ಕ ಮತ್ತು ಶ್ರೀಧರ್ ಶೇಟ್ ಅವರಿಗೆ ಕರ್ನಾಟಕ ಸಾಧಕ ಶ್ರೇಷ್ಠ ರತ್ನ ರಾಜ್ಯ ಪ್ರಶಸ್ತಿ ಪ್ರದಾನಿಸಲಾಯಿತು.
ಕನ್ನಡ ಸಾಹಿತ್ಯ, ಸಂಗೀತ ಹಾಗೂ ಸಾಂಸ್ಕೃತಿಕ ಸಂಘಟನೆಗಳಲ್ಲಿ ಸಕ್ರಿಯರಾಗಿರುವ ಗಂಗಾಧರ ನಾಯ್ಕ ಅವರು ಕನ್ನಡ ಸಾಹಿತ್ಯ ಪರಿಷತ್ ಭಟ್ಕಳ ತಾಲೂಕು ಘಟಕದ ಅಧ್ಯಕ್ಷರಾಗಿ ಪರಿಷತ್ತನ್ನು ಜನಸಾಮಾನ್ಯರ ಮನೆಮನೆಗಳಿಗೆ ತಲುಪಿಸಿದ ಸಾಧನೆಗಾಗಿಯೂ, ‘ಭಾನುಭಾವ’ ಹಾಗೂ ‘ಆಚಾರ ಸುವಿಚಾರ’ ಕೃತಿಗಳ ರಚನೆಯ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಈ ಗೌರವಕ್ಕೆ ಭಾಜನರಾದರು. ಗಾಯನ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿರುವ ಅವರು ನಿರೂಪಕ, ಉಪನ್ಯಾಸಕ ಹಾಗೂ ಸಂಘಟಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಶಿಕ್ಷಕ, ಸಾಹಿತಿ, ವ್ಯಂಗ್ಯಚಿತ್ರಕಾರ ಹಾಗೂ ಚಿತ್ರಕಲಾವಿದರಾಗಿರುವ ಶ್ರೀಧರ್ ಶೇಟ್ ಅವರು 2025ನೇ ಸಾಲಿನ ಉತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿ ಪುರಸ್ಕೃತರಾಗಿದ್ದು, ಅವರ ‘ಬೇಲಿಯ ಹೂವು’ ಕವಿತೆ ಐಸಿಎಸ್‌ಇ ಪಠ್ಯಕ್ರಮದಲ್ಲೂ ಅಳವಡಿಸಲಾಗಿದೆ. ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಭಟ್ಕಳ ತಾಲೂಕು 9ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ರಾಗಿದ್ದ ಅವರು, ಬಹುಮುಖ ಕೊಡುಗೆಯ ಹಿನ್ನೆಲೆಯಲ್ಲಿ ಈ ಗೌರವಕ್ಕೆ ಆಯ್ಕೆಯಾದರು.
ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿ ಮಾರುತಿ ಗುರುಜಿ, ಮಾಜಿ ಸಚಿವ ಶಿವಾನಂದ ನಾಯ್ಕ, ಹಿರಿಯ ಪತ್ರಕರ್ತ ಗಂಗಾಧರ್ ಮೊದಲಿಯಾರ್, ಉದ್ಯಮಿ ಗೋವಿಂದ ಬಾಬು ಪೂಜಾರಿ ಸೇರಿದಂತೆ ವಿವಿಧ ಗಣ್ಯರು ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಪತ್ರಕರ್ತರು ಉಪಸ್ಥಿತರಿದ್ದರು.