BHATKAL: ಕಾರು–ಸ್ಕೂಟರ್ ಢಿಕ್ಕಿ; ಇಬ್ಬರಿಗೆ ಗಾಯ
ಭಟ್ಕಳ: ಕಾರು ಮತ್ತು ಸ್ಕೂಟರ್ ಢಿಕ್ಕಿಯಾಗಿ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ–66ರ ನವಾಯತ್ ಕಾಲನಿಯ ಸಿಟಿ ಲೈಟ್ ಕ್ರಾಸ್ ಬಳಿ ಬುಧವಾರ ಬೆಳಗ್ಗೆ ನಡೆದಿದೆ.
ಮದೀನಾ ಕಾಲನಿಯ ನಿವಾಸಿ ಸೈಯದ್ ಉಮರ್ ರಶಾದ್ ಶೇಖ್ (20) ಹಾಗೂ ಆಝಾದ್ ನಗರ ನಿವಾಸಿ ವಾಸವಾಗಿರುವ ತೌಸೀಫ್ (40) ಗಾಯಗೊಂಡವರು. ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬುಧವಾರ 11 ಗಂಟೆ ವೇಳೆ ಇವರಿಬ್ಬರು ಸ್ಕೂಟರ್ ಸಿಟಿ ಲೈಟ್ ಕ್ರಾಸ್ನಿಂದ ಶಂಸುದ್ದೀನ್ ವೃತ್ತದತ್ತ ಸಾಗುತ್ತಿದ್ದ ವೇಳೆ, ವಿರುದ್ಧ ದಿಕ್ಕಿನಿಂದ ಉಡುಪಿ–ಸಿರ್ಸಿ ಮಾರ್ಗವಾಗಿ ಅತಿವೇಗದಲ್ಲಿ ಬಂದ ಕಾರು ಲಾರಿಯನ್ನು ಓವರ್ ಟೇಕ್ ಮಾಡುವ ಭರದಲ್ಲಿ ಸ್ಕೂಟರ್ ಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ತೀವ್ರತೆಗೆ ಸ್ಕೂಟರ್ ಕೆಲವು ಮೀಟರ್ ದೂರಕ್ಕೆ ಎಸೆಯಲ್ಪಟ್ಟಿದ್ದು, ಸವಾರರು ರಸ್ತೆ ಮಧ್ಯಭಾಗಕ್ಕೆ ಬಿದ್ದು ಗಾಯಗೊಂಡಿದ್ದಾರೆ.
ಸ್ಥಳೀಯರು ಗಾಯಾಳುಗಳನ್ನು ಭಟ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿದೆ.
ಈ ಬಗ್ಗೆ ಭಟ್ಕಳ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.