×
Ad

ಭಟ್ಕಳ: ‘ಕಲಿಕೋಪಕರಣಗಳ ವಸ್ತು ಪ್ರದರ್ಶನ–2026’

Update: 2026-01-28 19:37 IST

ಭಟ್ಕಳ: ನಗರದ ನವಾಯತ್ ಕಾಲೋನಿಯಲ್ಲಿರುವ ಸರ್ಕಾರಿ ಮಾದರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ‘ಕಲಿಕೋಪಕರಣಗಳ ವಸ್ತು ಪ್ರದರ್ಶನ–2026’ ಯಶಸ್ವಿಯಾಗಿ ನಡೆಯಿತು. ವಿದ್ಯಾರ್ಥಿಗಳ ಕಲಿಕಾ ಆಸಕ್ತಿಯನ್ನು ಉತ್ತೇಜಿಸುವುದು ಹಾಗೂ ಬೋಧನೆಯಲ್ಲಿ ನವೀನತೆ ತರಲು ಈ ಪ್ರದರ್ಶನ ಉಪಯುಕ್ತವಾಗಲಿದೆ ಎಂದು ಗಣ್ಯರು ಅಭಿಪ್ರಾಯಪಟ್ಟರು.

ಕಾರ್ಯಕ್ರಮವನ್ನು ಜಾಲಿ ಪಟ್ಟಣ ಪಂಚಾಯತ್ ಅಧ್ಯಕ್ಷೆ ಅಫ್ಶಾ ಕಾಜಿಯಾ ಉದ್ಘಾಟಿಸಿ ಮಾತನಾಡಿ, ಪಾಠಗಳನ್ನು ಕೇವಲ ಪಠ್ಯಪುಸ್ತಕಗಳಿಗೆ ಸೀಮಿತಗೊಳಿಸದೇ, ಕಲಿಕೋಪಕರಣಗಳ ಮೂಲಕ ಮಕ್ಕಳಿಗೆ ತಿಳಿಸುವುದು ಅತ್ಯಂತ ಪರಿಣಾಮಕಾರಿ ವಿಧಾನ. ಇಂತಹ ಪ್ರದರ್ಶನಗಳು ಮಕ್ಕಳಲ್ಲಿ ಕುತೂಹಲ, ಸೃಜನಶೀಲತೆ ಹಾಗೂ ಆತ್ಮ ವಿಶ್ವಾಸ ವನ್ನು ಬೆಳೆಸುತ್ತವೆ ಎಂದರು.

ಸರ್ಕಾರಿ ನೌಕರರ ಸಂಘದ ಖಜಾಂಚಿ ಹಾಗೂ ಗಾಂಧಿನಗರ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕ ವೆಂಕಟೇಶ್ ನಾಯ್ಕ ಮಾತನಾಡಿ, ಶಿಕ್ಷಕರ ಪರಿಶ್ರಮ ಮತ್ತು ಕಲಿಕೋಪಕರಣಗಳ ಬಳಕೆಯಿಂದ ಸರ್ಕಾರಿ ಶಾಲೆಗಳ ಗುಣಮಟ್ಟ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇಂತಹ ಪ್ರಯತ್ನಗಳು ಮಕ್ಕಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯ ಎಂ.ಡಿ.ರಫೀಕ್, ಸಮೂಹ ಸಂಪನ್ಮೂಲ ಕೇಂದ್ರ ನವಾಯತ್ ಕಾಲೋನಿಯ ಸಿಆರ್‌ಪಿ ಮುನಿರಾ ಖಾನಂ, ನ್ಯಾಷನಲ್ ಕಾಲೋನಿ ಮರ್ಡೇಶ್ವರದ ಸಿಆರ್‌ಪಿ ನಾಜಿಯಾ ಬಾನು, ಸರ್ಕಾರಿ ಉರ್ದು ಪ್ರೌಢಶಾಲೆ ನವಾಯತ್ ಕಾಲೋನಿಯ ಮುಖ್ಯಾಧ್ಯಾಪಕ ಅಯ್ಯುಬ್ ಖಾನ್, ಮದೀನಾ ಕಾಲೋನಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಗಾಲಿಬ್ ಔಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಗುಧೂಮ್ ಕಾಲೋನಿಯ ಮುಖ್ಯ ಶಿಕ್ಷಕಿ ಸೈದಾ ಫಾತಿಮಾ, ಎಸ್‌ಡಿಎಂಸಿ ಸದಸ್ಯ ಅಯ್ಯುಬ್ ಖಾನ್ ಸೇರಿದಂತೆ ವಿವಿಧ ಸರ್ಕಾರಿ ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

ಸಂಘಟನಾ ಶಾಲೆಯ ಮುಖ್ಯ ಶಿಕ್ಷಕಿ ಸಬೀಹಾ ಬಾನು ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಕರು ತಯಾರಿಸಿದ ವಿವಿಧ ಕಲಿಕೋಪಕರಣಗಳನ್ನು (TLM) ಪ್ರದರ್ಶಿಸಲಾಯಿತು.

ದಿನೇಶ್ ವೆಂಕಟರಮಣ ಹೆಗಡೆ ನಿರೂಪಿದರು. ಮಾಲಿನಿ ಆರ್.ನಾಯ್ಕ ವಂದನಾರ್ಪಣೆ ಸಲ್ಲಿಸಿದರು. ಈ ಕಲಿಕೋಪಕರಣ ಪ್ರದರ್ಶನಕ್ಕೆ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪಾಲಕರಿಂದ ಉತ್ತಮ ಸ್ಪಂದನೆ ದೊರೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News