ಭಟ್ಕಳ: ರಸ್ತೆ ಅಪಘಾತ; ಗಾಯಾಳು ಯುವಕ ಮೃತ್ಯು
ಭಟ್ಕಳ: ನವಾಯತ್ ಕಾಲೋನಿಯ ಸಿಟಿ ಲೈಟ್ ಕ್ರಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿ–66ರಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದ್ದ ಕಾರು–ಸ್ಕೂಟರ್ ಡಿಕ್ಕಿ ಪ್ರಕರಣದಲ್ಲಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ.
ಗಂಭೀರ ಗಾಯಗೊಂಡಿದ್ದ ತೌಸಿಫ್ (40) ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ತೌಸಿಫ್ ಅವರು ಶಿರೂರು ಮೂಲದವರಾಗಿದ್ದು, ಪ್ರಸ್ತುತ ಭಟ್ಕಳದ ಆಜಾದ್ ನಗರದಲ್ಲಿ ವಾಸವಾಗಿದ್ದರು.
ಅಪಘಾತದಲ್ಲಿ ಸ್ಕೂಟರ್‌ನಲ್ಲಿ ಅವರೊಂದಿಗೆ ಇದ್ದ ಮದೀನಾ ಕಾಲನಿಯ ನಿವಾಸಿ ಸೈಯದ್ ಉಮರ್ ರಶಾದ್ ಶೇಖ್ (20) ಅವರು ಗಂಭೀರವಾಗಿ ಗಾಯಗೊಂಡಿದ್ದು, ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಿಟಿ ಲೈಟ್ ಕ್ರಾಸ್‌ನಿಂದ ಶಮ್ಸುದ್ದೀನ್ ಸರ್ಕಲ್ ಕಡೆಗೆ ಸ್ಕೂಟರ್ ಸಾಗುತ್ತಿದ್ದ ವೇಳೆ, ಎದುರಿನಿಂದ ಉಡುಪಿ–ಸಿರಸಿ ಮಾರ್ಗವಾಗಿ ಬರುತ್ತಿದ್ದ ಕಾರು ಲಾರಿಯನ್ನು ಓವರ್‌ಟೇಕ್ ಮಾಡುವ ಸಂದರ್ಭದಲ್ಲಿ ಡಿಕ್ಕಿ ಹೊಡೆದಿತ್ತು. ಅಪಘಾತದ ತೀವ್ರತೆಗೆ ಇಬ್ಬರೂ ಸವಾರರು ರಸ್ತೆ ಮೇಲೆ ಎಸೆಯಲ್ಪಟ್ಟಿದ್ದರು.
ಈ ಸಂಬಂಧ ಭಟ್ಕಳ ಟೌನ್ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.