×
Ad

ಭಟ್ಕಳ: ಅಂಜುಮನ್ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥಆರ್.ಎಸ್. ನಾಯಕ್ ಅವರಿಗೆ ಸನ್ಮಾನ

Update: 2025-12-29 14:11 IST

ಭಟ್ಕಳ: ದಶಕಗಳ ಕಾಲ ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಭಟ್ಕಳದ ಅಂಜುಮನ್ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಆರ್.ಎಸ್. ನಾಯಕ್ ಅವರ ಸೇವಾನಿವೃತ್ತಿಯ ಅಂಗವಾಗಿ ಜಮಾಅತ್-ಎ-ಇಸ್ಲಾಮಿ ಹಿಂದ್ ಹಾಗೂ ಸದ್ಭಾವನಾ ಮಂಚ್ ವತಿಯಿಂದ ಡಿ. 28ರಂದು ಭಟ್ಕಳದಲ್ಲಿ ಸನ್ಮಾನ ಸಮಾರಂಭ ನಡೆಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರೊ. ಆರ್.ಎಸ್. ನಾಯಕ್ ಅವರು, ಮನುಷ್ಯ ಮೊದಲು ಮನುಷ್ಯನಾಗಿ ಬದುಕಬೇಕು ಎಂದು ಅಭಿಪ್ರಾಯಪಟ್ಟರು. “ನಾವು ಕೇವಲ ನಮ್ಮ ಧರ್ಮ ಅಥವಾ ಜಾತಿಯ ಚೌಕಟ್ಟಿನಲ್ಲಿ ಸೀಮಿತವಾಗದೆ ಪರಸ್ಪರ ಅರ್ಥಮಾಡಿಕೊಂಡು ಸೌಹಾರ್ದತೆಯಿಂದ ಬದುಕಬೇಕು. ಮನುಷ್ಯತ್ವವೇ ಶ್ರೇಷ್ಠ ಮೌಲ್ಯ” ಎಂದು ಹೇಳಿದರು.

ಭಟ್ಕಳದಲ್ಲಿ ಕಳೆದ 25 ವರ್ಷಗಳ ತಮ್ಮ ಅನುಭವಗಳನ್ನು ಹಂಚಿಕೊಂಡ ಅವರು, 1990ರ ದಶಕದಲ್ಲಿ ನಡೆದ ಗಲಭೆ ಮತ್ತು ಕರ್ಫ್ಯೂ ದಿನಗಳನ್ನು ಸ್ಮರಿಸಿದರು. ಸಮಾಜದಲ್ಲಿ ಹೆಚ್ಚುತ್ತಿರುವ ದ್ವೇಷದ ಗೋಡೆಗಳನ್ನು ಕೆಡವಿ ಪ್ರೀತಿ ಮತ್ತು ಸಹಬಾಳ್ವೆಯ ಸೇತುವೆಗಳನ್ನು ನಿರ್ಮಿಸುವ ಅಗತ್ಯವಿದೆ ಎಂದು ಅವರು ಕರೆ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಮಾಅತ್-ಎ-ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮೌಲಾನ ಸೈಯದ್ಯ ಝುಬೇರ್ ಎಸ್.ಎಂ., ಸದ್ಭಾವನಾ ಮಂಚ್ ನ ಕಾರ್ಯದರ್ಶಿ ಮುಹಮ್ಮದ್ ರಝಾ ಮಾನ್ವಿ, ಭಟ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಗೂ ಸದ್ಭಾವನಾ ಮಂಚ್ ಪದಾಧಿಕಾರಿ ಗಂಗಾಧರ್ ನಾಯ್ಕ ಸಂದರ್ಭೋಚಿತವಾಗಿ ಮಾತನಾಡಿದರು.

ಕಾರ್ಯದರ್ಶಿ ಪ್ರೊ.ರವೂಫ್ ಆಹಮದ್ ಸವಣೂರು ಕಾಯರ್ಕ್ರಮ ನಿರೂಪಿಸಿ ಧನ್ಯವಾದ ಅರ್ಪಿಸಿದರು.

ಕಾರ್ಯಕ್ರಮದಲ್ಲಿ ಜಮಾಅತ್ ನ ಪದಾಧಿಕಾರಿಗಳು, ಹಾಗೂ ಸದ್ಭಾವನಾ ಮಂಚ್‌ನ ಪದಾಧಿಕಾರಿಗಳು, ಅಂಜುಮನ್ ಕಾಲೇಜಿನ ಸಹೋದ್ಯೋಗಿಗಳು, ಸ್ಥಳೀಯ ಗಣ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News