ಭಟ್ಕಳ: ಮಡಿವಾಳರ ಕ್ಷೇಮಾಭಿವೃದ್ಧಿ ಸಂಘದಿಂದ ಸಾಧಕರಿಗೆ ಸನ್ಮಾನ
ಭಟ್ಕಳ: ಭಟ್ಕಳ ತಾಲೂಕು ಮಡಿವಾಳರ ಕ್ಷೇಮಾಭಿವೃದ್ಧಿ ಸಂಘದ ಮಾಸಿಕ ಸಭೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಶಿರಾಲಿಯ ಹಾದಿಮಾಸ್ತಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ರಮೇಶ್ ಮಡಿವಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದ 2025ನೇ ಸಾಲಿನ ಬಿಎಸ್ಸಿ ಪರೀಕ್ಷೆಯಲ್ಲಿ ವಿಶ್ವವಿದ್ಯಾಲಯಕ್ಕೆ 6ನೇ ರ್ಯಾಂಕ್ ಪಡೆದ ಕುಮಾರಿ ಸಿಂಚನಾ ತಿಮ್ಮಪ್ಪ ಮಡಿವಾಳ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಕಬಡ್ಡಿ ತಂಡಕ್ಕೆ ಆಯ್ಕೆಯಾಗಿ ಯುನಿವರ್ಸಿಟಿ ಬ್ಲ್ಯೂ ಪಡೆದ ಪವಿತ್ರ ರಘುರಾಮ್ ಮಡಿವಾಳ ಹಾಗೂ ಕರ್ನಾಟಕ ಪರೀಕ್ಷಾ ಮಂಡಳಿ ನಡೆಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ನಾಲ್ಕನೇ ಸ್ಥಾನ ಪಡೆದ ನಾಗರಾಜ್ ಗಣೇಶ್ ಶಿರಾಲಿ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಸಂಘದ ಮಾರ್ಗದರ್ಶಕರಾಗಿರುವ ಅಳ್ವೆಕೋಡಿ ದುರ್ಗಾಪರಮೇಶ್ವರಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಕೆ.ಬಿ. ಮಡಿವಾಳ, ಶ್ರೀವಲಿ ಪ್ರೌಢಶಾಲೆ ಚಿತ್ರಾಪುರದ ಮುಖ್ಯಾಧ್ಯಾಪಕಿ ಮಮತಾ ಭಟ್ಕಳ ಅವರು ಸಂದರ್ಭೋಚಿತವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷ ವೆಂಕಟೇಶ ಮಡಿವಾಳ ಶಿರಾಲಿ, ಕಾರ್ಯದರ್ಶಿ ನಿತ್ಯಾನಂದ ತೀರ್ಥಹಳ್ಳಿ, ಖಜಾಂಚಿ ರಾಜೇಶ್ ಮಡಿವಾಳ ಸೇರಿದಂತೆ ಇತರ ಪದಾಧಿಕಾರಿಗಳು ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು. ಸಂಘದ ಆರ್ಥಿಕ ಸಲಹೆಗಾರ ಕೃಷ್ಣಾನಂದ ಮಡಿವಾಳ ಸ್ವಾಗತಿಸಿದರು. ಶಿಕ್ಷಕ ರಾಘವೇಂದ್ರ ಮಡಿವಾಳ ಕಾರ್ಯಕ್ರಮವನ್ನು ನಿರೂಪಿಸಿದರು.