ಕಾರವಾರ ಕ್ಷೇತ್ರಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮೊದಲ ಆದ್ಯತೆ : ಡಿಸಿಎಂ ಡಿ.ಕೆ.ಶಿವಕುಮಾರ್
PC | X@DKShivakumar
ಕಾರವಾರ, ಡಿ.28: "ಕಾರವಾರದ ಜನರ ಬಹುದಿನದ ಬೇಡಿಕೆಯಂತೆ ಕ್ಷೇತ್ರಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನೀಡುವುದು ನಮ್ಮ ಸರ್ಕಾರದ ಜವಾಬ್ದಾರಿ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಕಾರವಾರದ ರವೀಂದ್ರನಾಥ ಠಾಗೋರ್ ಕಡಲ ತೀರದಲ್ಲಿ ಭಾನುವಾರ ರಾತ್ರಿ ನಡೆದ ಕರಾವಳಿ ಉತ್ಸವದಲ್ಲಿ ಶಿವಕುಮಾರ್ ಅವರು ಭಾಗವಹಿಸಿ ಮಾತನಾಡಿದರು.
"ಶಾಸಕರಾದ ಸತೀಶ್ ಸೈಲ್ ಅವರು ನಮ್ಮ ಜನರು ಗೋವಾ, ಉಡುಪಿ, ಮಂಗಳೂರಿಗೆ ಉತ್ತಮ ಚಿಕಿತ್ಸೆಗೆ ಹೋಗಲು ಆಗುವುದಿಲ್ಲ. ಅದಕ್ಕೆ ನಮಗೆ ಅತ್ಯುತ್ತಮ ಆಸ್ಪತ್ರೆ ಬೇಕು ಎಂದಿದ್ದಾರೆ. ನಾವು ನಿಮ್ಮ ಜೊತೆ ಇದ್ದೇವೆ" ಎಂದರು.
"ಉತ್ತರ ಕನ್ನಡ ಜಿಲ್ಲೆಯ ಜನತೆ ಐದು ಜನ ಶಾಸಕರನ್ನು ನೀಡಿ ಸರ್ಕಾರಕ್ಕೆ ಶಕ್ತಿ ತುಂಬಿದ್ದೀರಿ. ನೀವು ಶಕ್ತಿ ಕೊಟ್ಟ ಕಾರಣಕ್ಕೆ ಐದು ಗ್ಯಾರಂಟಿಗಳನ್ನು ನೀಡಿದ್ದೇವೆ. ನಿಮ್ಮಿಂದ ಈ ಕೈ ಗಟ್ಟಿಯಾಗಿದೆ. ನಾವು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ" ಎಂದರು.
"ನಿಮಗಾಗಿ ಪ್ರತ್ಯೇಕ ಪ್ರವಾಸೋದ್ಯಮ ನೀತಿ ಮಾಡಿ ಉದ್ಯೋಗ ಸೃಷ್ಟಿ ಮಾಡುತ್ತೇವೆ. ಯುವ ಜನರ ವಲಸೆ ತಪ್ಪಿಸುತ್ತೇವೆ. ಮನೆ ಬಾಗಿಲಲ್ಲಿ ಉದ್ಯೋಗ ನೀಡುತ್ತೇವೆ. ಜ.10 ರಂದು ಮಂಗಳೂರಿನಲ್ಲಿ ಸಭೆ ನಡೆಸಲಾಗುವುದು" ಎಂದರು.
"ಪಶ್ಚಿಮ ಘಟ್ಟ, ಸಮುದ್ರ ತೀರ ಹೊಂದಿರುವ ವಿಶಿಷ್ಟವಾದ ಪ್ರದೇಶವಿದು. ವಿಭಿನ್ನವಾದ ಸಾಹಿತ್ಯ, ಸಂಸ್ಕೃತಿ, ಭಾಷೆ, ಆಚರಣೆ, ಪರಿಸರ ಹೀಗೆ ವೈವಿಧ್ಯಮಯವಾದ ಪ್ರದೇಶವಿದು. ಸಮುದ್ರ ಎಂದರೆ ಶಕ್ತಿ, ಸಂಪತ್ತು, ಸಮುದ್ರ ಎಂದರೆ ಜೀವನ, ಮೀನುಗಾರರ ಬದುಕಿಗೆ ದೊಡ್ಡ ಆಧಾರ, ಪ್ರವಾಸಿಗರ ಸ್ವರ್ಗ ಈ ಸಮುದ್ರ" ಎಂದು ಕರಾವಳಿಯ ವೈಭವವನ್ನು ಬಣ್ಣಿಸಿದರು.
"ಕಳೆದ ಏಳು ವರ್ಷಗಳಿಂದ ಕರಾವಳಿ ಉತ್ಸವ ನಡೆದಿಲ್ಲ. ಈ ವರ್ಷ ನೀವು ಬರಲೇಬೇಕು ಎಂದು ಸತೀಶ್ ಸೈಲ್ ಅವರು ಜಿಲ್ಲಾ ಮಂತ್ರಿ ಮಂಕಾಳ್ ವೈದ್ಯ ಅವರು ಒತ್ತಾಯ ಪೂರ್ವಕವಾಗಿ ನನ್ನನ್ನು ಇಲ್ಲಿಗೆ ಕರೆತಂದಿದ್ದಾರೆ. ದೇವರು ವರ, ಶಾಪ ಎರಡನ್ನೂ ನೀಡುವುದಿಲ್ಲ. ಆದರೆ ಅವಕಾಶ ಮಾತ್ರ ನೀಡುತ್ತಾನೆ. ಆ ಅವಕಾಶವನ್ನು ನಾವು ಬಳಸಿಕೊಳ್ಳಬೇಕು. ಇದನ್ನು ಸತೀಶ್ ಸೈಲ್ ಅವರು ಬಳಸಿಕೊಂಡು ಜಿಲ್ಲೆಯ ಕಲಾವಿದರು ಸೇರಿದಂತೆ ಅನೇಕರಿಗೆ ಅವಕಾಶ ಸೃಷ್ಟಿಸಿ ಕೊಟ್ಟಿದ್ದಾರೆ" ಎಂದು ಹೇಳಿದರು.
"ನಾನು ಸಹ ಕಳೆದ 10-15 ವರ್ಷದಿಂದ ನನ್ನ ಕ್ಷೇತ್ರ ಕನಕಪುರದಲ್ಲಿ ಕನಕೋತ್ಸವ ನಡೆಸಿಕೊಂಡು ಬಂದಿದ್ದೇನೆ. ನನ್ನಿಂದಲೂ ಇಂತಹ ಭವ್ಯವಾದ ಕಾರ್ಯಕ್ರಮ ಮಾಡಲು ಅಗಿಲ್ಲ. ಆದರೆ ಸತೀಶ್ ಸೈಲ್ ಅವರು ಅತ್ಯಂತ ಭವ್ಯವಾದ ಕಾರ್ಯಕ್ರಮ ಮಾಡಿರುವುದು ನೋಡಿ ಸಂತೋಷವಾಗಿದೆ" ಎಂದರು.
"ನಾವು ಯಾವುದೇ ಕಾರ್ಯಕ್ರಮ ಮಾಡಿದರೂ ವಿರೋಧಿಗಳು ಟೀಕೆ ಮಾಡುತ್ತಾರೆ. ಮಾತನಾಡುವ ಬಾಯಿಗಿಂತ ಕೆಲಸ ಮಾಡುವ ಕೈಗಳು ಮುಖ್ಯ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ನಾನು ಕೇವಲ ಭಾಷಣ ಮಾಡಲು ಬಂದಿಲ್ಲ, ನೃತ್ಯ ನೋಡಲು ಬಂದಿಲ್ಲ. ಕಾರವಾರದ ಜನತೆಯ ಜೊತೆ ಇದ್ದೇನೆ ಎಂದು ಹೇಳಲು ಬಂದಿದ್ದೇವೆ. ಮುಂದಿನ ದಿನಗಳಲ್ಲಿ ಆರು ಮಂದಿ ಶಾಸಕರನ್ನು ಆಯ್ಕೆ ಮಾಡಿ ಕೈ ಬಲಪಡಿಸಬೇಕು" ಎಂದರು.