ಬೇಡಿಕೆ ಈಡೇರಿಕೆಗೆ ಆಗ್ರಹ: ಫೆ. 5ಕ್ಕೆ ಶಿಕ್ಷಕರ ‘ದೆಹಲಿ ಚಲೋ’ ಹೋರಾಟಕ್ಕೆ ಐಟಾ ಬೆಂಬಲ
ಭಟ್ಕಳ: ಶಿಕ್ಷಕ ಸಮುದಾಯ ಎದುರಿಸುತ್ತಿರುವ ದೀರ್ಘಕಾಲದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಭಾರತ ಶಿಕ್ಷಕರ ಜಂಟಿ ಕ್ರಿಯಾ ಸಮಿತಿ ಫೆಬ್ರುವರಿ 5ರಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ‘ದೆಹಲಿ ಚಲೋ’ ಹೋರಾಟ ಹಮ್ಮಿಕೊಂಡಿದೆ. ಈ ಬೃಹತ್ ಚಳವಳಿಗೆ ಅಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ (ಐಟಾ) ಸಂಪೂರ್ಣ ಬೆಂಬಲ ನೀಡಿದೆ ಎಂದು ಐಟಾ ಕರ್ನಾಟಕ ಘಟಕದ ರಾಜ್ಯಾಧ್ಯಕ್ಷ ಎಂ.ಆರ್. ಮಾನ್ವಿ ತಿಳಿಸಿದ್ದಾರೆ.
ಪ್ರಾಥಮಿಕ ಶಾಲೆಯಿಂದ ವಿಶ್ವವಿದ್ಯಾಲಯ ಮಟ್ಟದವರೆಗೆ ವಿವಿಧ ಶಿಕ್ಷಕ ಸಂಘಟನೆಗಳು ಒಗ್ಗೂಡಿ ಅಖಿಲ ಭಾರತ ಶಿಕ್ಷಕರ ಜಂಟಿ ಕ್ರಿಯಾ ಸಮಿತಿಯನ್ನು ರಚಿಸಿಕೊಂಡಿದ್ದು, ಅದರ ನೇತೃತ್ವದಲ್ಲಿ ಫೆ.5ರಂದು ಬೆಳಿಗ್ಗೆ 10 ಗಂಟೆಯಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಧರಣಿ–ಸತ್ಯಾಗ್ರಹ ನಡೆಯಲಿದೆ.
ಶಿಕ್ಷಕರ ಹಿತರಕ್ಷಣೆಗೆ ಸಂಬಂಧಿಸಿದಂತೆ ಈ ಹೋರಾಟದಲ್ಲಿ ಹಲವು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಲಾಗಿದೆ. ಪ್ರಸ್ತುತ ಜಾರಿಯಲ್ಲಿರುವ ಹೊಸ ಪಿಂಚಣಿ ಯೋಜನೆಯನ್ನು (ಎನ್‌ಪಿಎಸ್) ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆಯನ್ನು (ಒಪಿಎಸ್) ಮರುಜಾರಿಗೊಳಿಸಬೇಕು, ಸೇವೆಯಲ್ಲಿರುವ ಶಿಕ್ಷಕರಿಗೆ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಯಿಂದ ವಿನಾಯಿತಿ ನೀಡಬೇಕು, ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೂ ಮತದಾನದ ಹಕ್ಕು ನೀಡಬೇಕು ಎಂಬುದು ಪ್ರಮುಖ ಬೇಡಿಕೆಗಳಾಗಿವೆ.
ಇದಲ್ಲದೆ, 8ನೇ ವೇತನ ಆಯೋಗದ ವರದಿಯನ್ನು ನಿಗದಿತ ಅವಧಿಯಲ್ಲಿ ಜಾರಿಗೊಳಿಸಬೇಕು, ದೇಶಾದ್ಯಂತ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು, ಅತಿಥಿ ಮತ್ತು ಗುತ್ತಿಗೆ ಆಧಾರಿತ ಶಿಕ್ಷಕರನ್ನು ಕಾಯಂಗೊಳಿಸಿ ಕನಿಷ್ಠ ವೇತನ ನಿಗದಿಪಡಿಸಬೇಕು ಎಂದು ಆಗ್ರಹಿಸಲಾಗಿದೆ. ನೂತನ ಶಿಕ್ಷಣ ನೀತಿಯಲ್ಲಿರುವ ವಿದ್ಯಾರ್ಥಿ ಮತ್ತು ಶಿಕ್ಷಕ ವಿರೋಧಿ ಅಂಶಗಳನ್ನು ಕೈಬಿಡಬೇಕು, ಸರ್ಕಾರಿ ಶಾಲೆಗಳ ವಿಲೀನ ಅಥವಾ ಮುಚ್ಚುವ ಪ್ರಕ್ರಿಯೆಯನ್ನು ನಿಲ್ಲಿಸಬೇಕು ಹಾಗೂ ಶಿಕ್ಷಕರನ್ನು ಬೋಧಕೇತರ ಕೆಲಸಗಳಿಂದ ಮುಕ್ತಗೊಳಿಸಬೇಕು ಎಂಬ ಬೇಡಿಕೆಗಳನ್ನೂ ಹೋರಾಟದಲ್ಲಿ ಮುಂದಿಡಲಾಗಿದೆ.
ಈ ಮಹತ್ವದ ‘ದೆಹಲಿ ಚಲೋ’ ಕಾರ್ಯಕ್ರಮದಲ್ಲಿ ರಾಜ್ಯದ ಎಲ್ಲ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಎಂ.ಆರ್. ಮಾನ್ವಿ ಮನವಿ ಮಾಡಿದ್ದಾರೆ.