ಬಡವರ ಆಹಾರ ಭದ್ರತೆಗೆ ಇಂದಿರಾ ಕ್ಯಾಂಟೀನ್ ಮಹತ್ವದ ಯೋಜನೆ: ಸಚಿವ ಮಂಕಾಳ್ ವೈದ್ಯ
ಭಟ್ಕಳ: ಹಳ್ಳಿಗಳು ಮತ್ತು ವಿವಿಧ ಊರುಗಳಿಂದ ಕೆಲಸಕ್ಕಾಗಿ ನಗರಗಳು ಹಾಗೂ ಪಟ್ಟಣಗಳಿಗೆ ಬರುವ ಬಡವರು ದಿನನಿತ್ಯದ ಆಹಾರಕ್ಕಾಗಿ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಡವರಿಗೆ ಪೌಷ್ಟಿಕ ಆಹಾರ ಒದಗಿ ಸುವ ಉದ್ದೇಶದಿಂದ ‘ಇಂದಿರಾ ಕ್ಯಾಂಟೀನ್’ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ರಾಜ್ಯ ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ್ ವೈದ್ಯ ಹೇಳಿದರು.
ಅವರು ಭಾನುವಾರ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಆಝಾದ್ ನಗರದಲ್ಲಿ ನೂತನವಾಗಿ ನಿರ್ಮಿಸಲ್ಪ ಟ್ಟಿರುವ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಮಾತನಾಡಿದರು.
ಐದು ರೂಪಾಯಿಗೆ ತಿಂಡಿ ಹಾಗೂ ಹತ್ತು ರೂಪಾಯಿಗೆ ಊಟ ನೀಡುವ ಮೂಲಕ ಬಡವರಿಗೆ ಆರೋಗ್ಯಕರ ಆಹಾರ ಸಿಗುವಂತೆ ವ್ಯವಸ್ಥೆ ಮಾಡಲಾಗಿದ್ದು, ಉಳಿದ ವೆಚ್ಚವನ್ನು ಸರ್ಕಾರವೇ ಭರಿಸುತ್ತಿದೆ. ಇದರಿಂದ ಕಾರ್ಮಿಕರು ಹಾಗೂ ಸಾಮಾನ್ಯ ಜನರು ಆರೋಗ್ಯವಾಗಿರಲು ಸಹಕಾರಿಯಾಗುತ್ತದೆ ಎಂದು ಸಚಿವರು ತಿಳಿಸಿದರು.
ಮೊದಲ ಹಂತದಲ್ಲಿ ಬೆಂಗಳೂರಿನ ಎಲ್ಲಾ ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಲಾಗಿದ್ದು, ನಂತರ ಈ ಯೋಜನೆಯನ್ನು ರಾಜ್ಯದಾದ್ಯಂತ ಪಟ್ಟಣ ಪಂಚಾಯಿತಿ, ಪುರಸಭೆ ಹಾಗೂ ನಗರಸಭೆ ವ್ಯಾಪ್ತಿಗಳಿಗೆ ವಿಸ್ತರಿಸಲಾ ಗಿದೆ. ಭಟ್ಕಳ, ಜಾಲಿ, ಹೊನ್ನಾವರ, ಮಂಕಿ ಹಾಗೂ ಮುರುಡೇಶ್ವರ ಸೇರಿದಂತೆ ಹಲವೆಡೆ ಇಂದಿರಾ ಕ್ಯಾಂಟೀನ್‌ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಹೇಳಿದರು.
ಈ ಯೋಜನೆ ಸ್ಥಳೀಯರಿಗೆ ಮಾತ್ರ ಸೀಮಿತವಲ್ಲದೆ, ರಾಜ್ಯದ ಯಾವುದೇ ಭಾಗದಿಂದ ಬರುವವರು ಕಡಿಮೆ ದರದಲ್ಲಿ ಆಹಾರ ಪಡೆಯಬಹುದಾಗಿದೆ. ಹಣವಿರುವವರು ಹೋಟೆಲ್‌ಗಳನ್ನು ಹುಡುಕುವರು, ಆದರೆ ಬಡವರಿಗೆ ಇಂದಿರಾ ಕ್ಯಾಂಟೀನ್ ಆಶ್ರಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ರಾಜ್ಯದಲ್ಲಿ ಪ್ರಸ್ತುತ ಸುಮಾರು 600 ಇಂದಿರಾ ಕ್ಯಾಂಟೀನ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತಿಯೊಂದು ಕೇಂದ್ರ ದಲ್ಲಿ ಹಲವರಿಗೆ ಉದ್ಯೋಗ ಸೃಷ್ಟಿಯಾಗಿದೆ. ಇದರಿಂದ ಒಂದೆಡೆ ನಿರುದ್ಯೋಗಿಗಳಿಗೆ ಕೆಲಸ, ಮತ್ತೊಂದೆಡೆ ಬಡವರಿಗೆ ಆಹಾರ ಭದ್ರತೆ ಒದಗಿದೆ ಎಂದು ಸಚಿವರು ಹೇಳಿದರು.
ಈ ಸಂದರ್ಭದಲ್ಲಿ ಜಾಲಿ ಪ.ಪಂ ಅಧ್ಯಕ್ಷೆ ಅಫ್ಸಾ ಹುಝೈಫಾ ಕಾಜಿಯಾ, ಉಪಾಧ್ಯಕ್ಷ ಸೈಯ್ಯದ್ ಇಮ್ರಾನ್ ಲಂಕಾ, ಸದಸ್ಯರಾದ ಈಶ್ವರ್ ಮೊಗೇರ್, ಎನ್. ಮಂಜಪ್ಪ ಮುಅ ತಾಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ರಾಜು ನಾಯ್ಕ, ನಾಮನಿರ್ದೇಶಿತ ಸದಸ್ಯ ಮುಹಮ್ಮದ್ ಯೂನೂಸ್ ರುಕ್ನುದ್ದೀನ್, ಕಾರ್ಯಪಾಲ ಅಭಿಯಂತರರು ಜಿಲ್ಲಾ ನಗರಾ ಭಿವೃದ್ಧಿಕೋಶ ಕಾರವಾರ ಕೆ.ಎಸ್. ಕುಮಾರ್, ಮತ್ತಿತರರು ಇದ್ದರು. ಶಿಕ್ಷಕ ನಾರಾಯಣ ನಾಯ್ಕ ನಿರೂಪಿಸಿದರು.