×
Ad

ಭಟ್ಕಳ | ಡಿ.13ರಂದು ಲೋಕ ಅದಾಲತ್

Update: 2025-11-30 23:20 IST

ಭಟ್ಕಳ, ನ.30: ಇಲ್ಲಿನ ನ್ಯಾಯಾಲಯಗಳ ಸಂಕೀರ್ಣದಲ್ಲಿ ಡಿ.13ರಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿಯ ವತಿಯಿಂದ ಬೃಹತ್ ಲೋಕ್ ಅದಾಲತ್ ಏರ್ಪಡಿಸಲಾಗಿದ್ದು, ಕಕ್ಷಿದಾರರು ಇದರ ಸದುಪಯೋಗ ಪಡೆಯುವಂತೆ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಕಾಂತ ಕುರಣಿ ಹೇಳಿದ್ದಾರೆ.

ನ್ಯಾಯಾಲಯದ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಲೋಕ ಅದಾಲತ್‌ನಲ್ಲಿ ರಾಜಿಯಾಗಲಿರುವ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ಬಗೆಹರಿಸಿಕೊಳ್ಳಲು ಅವಕಾಶ ಇದೆ. ಲೋಕ್ ಅದಾಲತ್‌ನಲ್ಲಿ ಇತ್ಯರ್ಥ ಪಡಿಸಲು ಮೂರೂ ನ್ಯಾಯಾಲಯಗಳ ಒಟ್ಟು 2,116 ಪ್ರಕರಣಗಳನ್ನು ಗುರುತಿಸಲಾಗಿದೆ. ಇನ್ನಷ್ಟು ಪ್ರಕರಣಗಳಿದ್ದಲ್ಲಿ ಕಕ್ಷಿದಾರರು ಕೂಡ ರಾಜಿಯಾಗುವಂತಹ ಪ್ರಕರಣಗಳನ್ನು ತಮ್ಮ ವಕೀಲರ ಮೂಲಕ ಇಲ್ಲವೇ ನೇರವಾಗಿ ಕಾನೂನು ಸೇವಾ ಸಮಿತಿಯ ಮೂಲಕ ಲೋಕ್ ಅದಾಲತ್‌ನಲ್ಲಿ ರಾಜಿ ಮಾಡಿಕೊಳ್ಳಬಹುದು ಎಂದು ತಿಳಿಸಿದರು.

ಲೋಕ್ ಅದಾಲತ್‌ನಲ್ಲಿ ಐಪಿಸಿ, ರಾಜಿಯಾಗತಕ್ಕ ಕ್ರಿಮಿನಲ್ ಪ್ರಕರಣ, ಚೆಕ್ ಬೌನ್ಸ್ ಪ್ರಕರಣ, ಬ್ಯಾಂಕ್ ಸಾಲ ವಸೂಲಾತಿ, ಮೋಟರು ವಾಹನ ಕಾಯ್ದೆ ಉಲ್ಲಂಘನೆ ಪ್ರಕರಣ, ಜಮೀನು ಸ್ವಾಧೀನ ಪ್ರಕರಣ, ಎಕ್ಸಿಕ್ಯೂಶನ್ ಪ್ರಕರಣ, ಮೋಟರು ವಾಹನ ಅಪಘಾತ ಪ್ರಕರಣ, ಜನನ ನೋಂದಣಿ ಪ್ರಕರಣ ಸೇರಿದಂತೆ ಇನ್ನೂ ಅನೇಕ ಪ್ರಕರಣಗಳು ರಾಜಿಯಾಗಲಿದ್ದು, ಲೋಕ ಅದಾಲತ್ ಬಗ್ಗೆ ಪಕ್ಷಗಾರರು ನ್ಯಾಯಾಲಯದ ಆವರಣದಲ್ಲಿರುವ ಕಾನೂನು ಸೇವಾ ಸಮಿತಿಯನ್ನು ಸಂಪರ್ಕಿಸಬಹುದು ಎಂದರು.

ಶೇ.50ರ ರಿಯಾಯಿತಿ: ಟ್ರಾಫಿಕ್ ಕಾಯ್ದೆ ಉಲ್ಲಂಘಿಸಿದ ಪ್ರಕರಣಗಳಲ್ಲಿ ದಂಡ ಕಟ್ಟುವವರಿಗೆ ಸರಕಾರ ಶೇ.50ರಷ್ಟು ರಿಯಾಯಿತಿ ಘೋಷಣೆ ಮಾಡಿದ್ದು, ಇದು ಡಿ.12ರಂದು ಕೊನೆಗೊಳ್ಳಲಿದೆ. ಮೋಟರು ವಾಹನ ಕಾಯ್ದೆಯಡಿಯಲ್ಲಿ ದಂಡ ಕಟ್ಟಲು ಬಾಕಿ ಇಟ್ಟುಕೊಂಡಿರುವವರು ಡಿ.12ರ ಒಳಗಾಗಿ ಭರಣ ಮಾಡಿ ಸರಕಾರ ಘೋಷಣೆ ಮಾಡಿದ ಶೇ.50 ರಿಯಾಯಿತಿಯ ಲಾಭ ಪಡೆದುಕೊಳ್ಳುವಂತೆ ಅವರು ತಿಳಿಸಿದರು.

ಈ ಸಂದರ್ಭ ಕಾನೂನು ಸೇವಾ ಸಮಿತಿಯ ಕಾರ್ಯದರ್ಶಿ ಹಾಗೂ ಪ್ರಧಾನ ಸಿವಿಲ್ ನ್ಯಾಯಾಧೀಶೆ ದೀಪಾ ಅರಳಗುಂಡಿ, ಹೆಚ್ಚುವರಿ ನ್ಯಾಯಾಧೀಶೆ ಧನವತಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News