ಭಟ್ಕಳ | ಬೃಹತ್ ಅರಣ್ಯವಾಸಿಗಳ ಕಾನೂನು ಜಾಥಾಕ್ಕೆ ಚಾಲನೆ
ಮೂರು ತಲೆಮಾರಿನ ದಾಖಲೆಗೆ ಒತ್ತಾಯ ಕಾನೂನುಬಾಹಿರ: ರವೀಂದ್ರ ನಾಯ್ಕ
ಭಟ್ಕಳ, ಡಿ.3: ರಾಜ್ಯ ಅರಣ್ಯಭೂಮಿ ಹಕ್ಕು ಹೋರಾಟ ವೇದಿಕೆಯ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಅರಣ್ಯವಾಸಿಗಳ ಕಾನೂನು ಜಾಗೃತಿ ಜಾಥಾಕ್ಕೆ ಬುಧವಾರ ಭಟ್ಕಳದಲ್ಲಿ ಚಾಲನೆ ನೀಡಲಾಯಿತು.
ಸರ್ಕ್ಯೂಟ್ ಹೌಸ್‌ನಿಂದ ಮಿನಿ ವಿಧಾನಸೌಧದವರೆಗೆ ಮೆರವಣಿಗೆ ಸಾಗಿದ ನಂತರ, ಹೋರಾಟಗಾರರು ತಹಶೀಲ್ದಾರ್ ನಾಗೇಂದ್ರ ಕೆ.ಎಸ್. ಅವರಿಗೆ ಮನವಿ ಮತ್ತು ಜಾಗೃತಿ ಕರಪತ್ರವನ್ನು ಸಲ್ಲಿಸಿದರು.
ವೇದಿಕೆಯ ರಾಜ್ಯಾಧ್ಯಕ್ಷ ರವೀಂದ್ರ ನಾಯ್ಕ ಮಾತನಾಡಿ, ಪಾರಂಪರಿಕ ಅರಣ್ಯವಾಸಿಗಳು ಅರಣ್ಯ ಹಕ್ಕು ಕಾಯ್ದೆಯಡಿ ಸಲ್ಲಿಸುವ ಸಾಗುವಳಿ ಹಕ್ಕು ಅರ್ಜಿಗಳಿಗೆ ಮೂರು ತಲೆಮಾರಿನ ದಾಖಲೆಗಳನ್ನು ಒತ್ತಾಯಿಸುವುದು ಕಾನೂನುಬಾಹಿರ ಎಂದು ಹೇಳಿದರು. 2012ರಲ್ಲಿ ಜಾರಿಯಾದ ಕಾಯ್ದೆ ತಿದ್ದುಪಡಿಯಲ್ಲೂ ಹಾಗೂ ಗುಜರಾತ್ ಹೈಕೋರ್ಟ್ ಸೇರಿದಂತೆ ಹಲವು ಕಾನೂನು ತೀರ್ಪುಗಳಲ್ಲೂ ‘ಕಠಿಣ ದಾಖಲೆಗಳ ಒತ್ತಾಯ ಅಸಂಗತ’ ಎಂದು ಸ್ಪಷ್ಟವಾಗಿದೆ ಎಂದು ಹೇಳಿದರು.
ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯವೂ ತನ್ನ ಆದೇಶದಲ್ಲಿ ‘ದಾಖಲೆ ಕೊರತೆಯನ್ನು ಆಧಾರ ಮಾಡಿ ಅರ್ಜಿ ತಿರಸ್ಕರಿಸುವುದು ಸರಿಯಲ್ಲ’ ಎಂದು ತಿಳಿಸಿದೆ. ಮೂರು ತಲೆಮಾರಿನ ವಾಸ್ತವ್ಯದ ಉಲ್ಲೇಖವು ಕೇವಲ ಪ್ರದೇಶವು ಪರಂಪರೆಯಿಂದ ವಾಸವಾಗಿರುವುದನ್ನು ದೃಢಪಡಿಸಲು ಮಾತ್ರ ಅನ್ವಯಿಸಲಿದೆ ಎಂದು ಅವರು ಹೇಳಿದರು.
ರಾಜ್ಯಾದ್ಯಂತ ಶೇ.88.90 ಮತ್ತು ಭಟ್ಕಳದಲ್ಲಿ ಶೇ.83.50 ಅರ್ಜಿಗಳು ತಿರಸ್ಕೃತವಾಗಿರುವುದು ಚಿಂತಾಜನಕ. ಅರ್ಜಿಗಳ ಪರಿಶೀಲನೆಯಲ್ಲಿ ಕಾನೂನು ಸೂಚನೆಗಳನ್ನು ಪಾಲಿಸದ ಕಾರಣವೇ ಈ ಪರಿಸ್ಥಿತಿ ಉಂಟಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಜಾಥಾ ಆರಂಭದಲ್ಲಿ ಜಿಲ್ಲಾ ಸಂಚಾಲಕ ಪಾಂಡುರಂಗ ನಾಯ್ಕ ಸ್ವಾಗತಿಸಿ ಮಾತನಾಡಿದರು. ದೇವರಾಜ ಗೊಂಡ ವಂದನೆ ಸಲ್ಲಿಸಿದರು. ಜಾಥಾದಲ್ಲಿ ಇಬ್ರಾಹಿಂ ಗೌಡಳ್ಳಿ, ರಫೀಕ್, ನವೀನ್ ಜೈನ್, ಈಶ್ವರ ನಾಯ್ಕ ಹಾಡವಳ್ಳಿ, ಚಂದ್ರ ನಾಯ್ಕ ಬೈರೋಡೆ, ರತ್ನ ನಾಯ್ಕ, ರಾಘವೇಂದ್ರ ಮರಾಠಿ, ವಿಮಲಾ ಮೊಗೇರ, ಕವಿತಾ ಮಂಜುನಾಥ್ ಗೊಂಡ, ನಾಗಮ್ಮ ಮೊಗೇರ, ದತ್ತ ನಾಯ್ಕ ಹಸವಳ್ಳಿ, ಸಬೀರ್, ಮೊಯಿದ್ದೀನ್, ನಥಾರ್ ಮತ್ತು ಜಾಬೀರ್ ಭಾಗವಹಿಸಿದ್ದರು. ಈ ಸಂದರ್ಭ ಜಿಲ್ಲೆಯಲ್ಲಿ 132 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜಾಗೃತಿ ಸಭೆಗಳನ್ನು ಆಯೋಜಿಸುವ ಯೋಜನೆಯನ್ನು ಹೋರಾಟ ವೇದಿಕೆ ಘೋಷಿಸಿದ್ದು, ಅರಣ್ಯವಾಸಿಗಳ ಹಕ್ಕುಗಳ ಕುರಿತು ಅರಿವು ಮೂಡಿಸಲು ಮೂರು ಲಕ್ಷ ಕರಪತ್ರಗಳನ್ನು ವಿತರಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.