×
Ad

ಭಟ್ಕಳ| ಹಾಡುವಳ್ಳಿ ಕೊಲೆ ಪ್ರಕರಣ: ಕುಟುಂಬಕ್ಕೆ ಸಾಂತ್ವನ ಹೇಳಿದ ಎಸ್‌ಪಿ

Update: 2025-06-09 19:39 IST

ಭಟ್ಕಳ: ತಾಲೂಕಿನ ಹಾಡುವಳ್ಳಿ ಗ್ರಾಮದಲ್ಲಿ 2023ರ ಮಾರ್ಚ್ 24ರಂದು ಆಸ್ತಿ ವಿವಾದಕ್ಕೆ ಸಂಬಂಧಿ ಸಿದಂತೆ ಒಂದೇ ಕುಟುಂಬದ ನಾಲ್ವರನ್ನು ಕೊಲೆ ಮಾಡಿದ ಘೋರ ಘಟನೆಗೆ ಸಂಬಂಧಿಸಿದಂತೆ ಆರೋಪಿ ಗಳಿಗೆ ಕಾನೂನಿನ ಮೂಲಕ ನ್ಯಾಯ ಒದಗಿಸಲಾಗಿದೆ. ಈ ಪ್ರಕರಣದಲ್ಲಿ ಒಬ್ಬ ಆರೋಪಿಗೆ ಜೀವಾವಧಿ ಕಾರಾಗೃಹ ಶಿಕ್ಷೆಯ ಜೊತೆಗೆ 2 ಲಕ್ಷ ರೂ. ದಂಡ ಹಾಗೂ ಇನ್ನೊಬ್ಬ ಆರೋಪಿಗೆ ಮರಣ ದಂಡನೆ ವಿಧಿಸಿ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಈ ವರ್ಷದ ಮೇ 6ರಂದು ತೀರ್ಪು ನೀಡಿತು.

ರವಿವಾರ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ಅವರು ತಮ್ಮ ಇಲಾಖೆಯ ಅಧಿಕಾರಿಗಳಾದ ಎಸ್‌ಪಿ ವಿನಾಯಕ್ ಪಾಟೀಲ್, ಇನ್ಸ್ಪೆಕ್ಟರ್ ಚಂದನ್ ಗೋಪಾಲಕೃಷ್ಣ, ಸಿಬ್ಬಂದಿಗಳಾದ ದೀಪಕ್ ನಾಯ್ಕ ಮತ್ತು ರಾಮಚಂದ್ರ ಅವರೊಂದಿಗೆ ದುರ್ಘಟನೆ ಸಂಭವಿಸಿದ ಮನೆಗೆ ಭೇಟಿ ನೀಡಿದರು. ಕೊಲೆಯಿಂದ ತಮ್ಮವರನ್ನು ಕಳೆದುಕೊಂಡ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ, ಅವರಿಗೆ ನೈತಿಕ ಬೆಂಬಲ ನೀಡಿದರು. ಆರೋಪಿಗಳಿಗೆ ಶಿಕ್ಷೆ ಒದಗಿಸುವಲ್ಲಿ ಯಶಸ್ವಿಯಾದ ಪೊಲೀಸ್ ಇಲಾಖೆಯ ಕಾರ್ಯ ತಂತ್ರಕ್ಕೆ ಕುಟುಂಬ ಸದಸ್ಯರು ಕೃತಜ್ಞತೆ ಸಲ್ಲಿಸಿದರು.

ಪ್ರಕರಣದ ತನಿಖೆಯಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಎಸ್‌ಪಿ ಎಂ. ನಾರಾಯಣ ಅವರು ತಂದೆ-ತಾಯಿಯನ್ನು ಕಳೆದು ಕೊಂಡ ಇಬ್ಬರು ಮಕ್ಕಳಾದ ಬಾಲಕ ಮತ್ತು ಬಾಲಕಿಯ ಶೈಕ್ಷಣಿಕ ಜವಾಬ್ದಾರಿಯನ್ನು ವಹಿಸಿ ಕೊಳ್ಳುವ ಭರವಸೆ ನೀಡಿ, ಮಾನವೀಯತೆಯ ಮಾದರಿಯಾದರು. ಈ ವೇಳೆ ತನ್ನ ಆಸಕ್ತಿಯನ್ನು ವ್ಯಕ್ತಪಡಿಸಿದ ಬಾಲಕ, “ನಾನು ಚೆನ್ನಾಗಿ ವಿದ್ಯಾಭ್ಯಾಸ ಮಾಡಿ, ಎಂ. ನಾರಾಯಣ ಅವರಂತೆ ದಕ್ಷ ಪೊಲೀಸ್ ಅಧಿಕಾರಿಯಾಗಲು ಇಚ್ಛಿಸುತ್ತೇನೆ” ಎಂದು ಹೇಳಿದ್ದು ಎಲ್ಲರ ಗಮನ ಸೆಳೆಯಿತು.

ಮೂವರು ಪೊಲೀಸರಿಗೆ ಪ್ರಶಂಸನಾ ಪತ್ರ, ನಗದು ಬಹುಮಾನ

ಭಟ್ಕಳ ತಾಲೂಕಿನ ಹಾಡುವಳ್ಳಿಯಲ್ಲಿ 2023ರ ಮಾರ್ಚ್ 24ರಂದು ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣದ ತನಿಖೆಯಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ ಮೂವರು ಪೊಲೀಸ್ ಸಿಬ್ಬಂದಿಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ಅವರು ಪ್ರಶಂಸನಾ ಪತ್ರ ಮತ್ತು ನಗದು ಬಹುಮಾನ ನೀಡಿ ಗೌರವಿಸಿದರು.

ತನಿಖೆಯಲ್ಲಿ ಸಹಾಯಕರಾಗಿ ಕಾರ್ಯನಿರ್ವಹಿಸಿದ ಭಟ್ಕಳ ಶಹರ ಪೊಲೀಸ್ ಠಾಣೆಯ ದೀಪಕ್ ಎಸ್. ನಾಯ್ಕ, ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ವಿನಾಯಕ ಪಾಟೀಲ್ ಹಾಗೂ ಕೋರ್ಟ್ ಮಾನಿಟ ರಿಂಗ್‌ನಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ ಮುರ್ಡೇಶ್ವರ ಪೊಲೀಸ್ ಠಾಣೆಯ ರಾಮಚಂದ್ರ ಕೆ. ಅವರಿಗೆ ಈ ಸಂದರ್ಭದಲ್ಲಿ ಪ್ರಶಂಸನಾ ಪತ್ರ ಮತ್ತು ನಗದು ಬಹುಮಾನ ವಿತರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಉಪ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ ಜಿ. ಮತ್ತು ಡಿವೈಎಸ್‌ಪಿ ಮಹೇಶ ಕೆ. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News