×
Ad

ಅಮೆರಿಕಕ್ಕೆ ಇನ್ನೆಷ್ಟು ದೇಶಗಳ ಬಲಿ ಬೇಕು?

ಅಮೆರಿಕವೂ ಅಧಿಕೃತವಾಗಿ ಯುದ್ಧಕ್ಕೆ ಇಳಿಯುವುದರೊಂದಿಗೆ, ಇರಾನ್-ಇಸ್ರೇಲ್ ಸಂಘರ್ಷ ತೀವ್ರಗೊಂಡಿದೆ. ಇರಾನ್ ಪರಮಾಣು ಅಸ್ತ್ರ ತಯಾರಿಕೆ ವಿರುದ್ಧದ ಹೋರಾಟ ಎಂಬ ನೆಪದಲ್ಲಿ ಅಲ್ಲಿನ ಸರಕಾರವನ್ನು ತೆಗೆದುಹಾಕುವ ಪಿತೂರಿ ಇದೆಯೆಂದೇ ಹೇಳಲಾಗುತ್ತಿದೆ. ಈಗಾಗಲೇ ಅಮೆರಿಕ ಇರಾನ್‌ನ ಪರಮಾಣುಕೇಂದ್ರಗಳ ಮೇಲೆ ಬಾಂಬ್ ದಾಳಿ ನಡೆಸಿರುವುದಾಗಿ ಹೇಳಿಕೊಂಡಿದೆ. ಇದನ್ನು ಗಮನಿಸುವಾಗ, ಅಮೆರಿಕ ಹೇಗೆ ಎರಡು ವೈರಿ ರಾಷ್ಟ್ರಗಳ ನಡುವಿನ ಸಂಘರ್ಷವನ್ನು ತಾನು ಹಿಡಿತ ಸಾಧಿಸುವುದಕ್ಕೆ ಬಳಸಿಕೊಳ್ಳುತ್ತದೆ ಎಂಬ ಸತ್ಯ ಮತ್ತೊಮ್ಮೆ ತೆರೆದುಕೊಳ್ಳುತ್ತದೆ. ಯುದ್ಧ ನಿಲ್ಲಿಸುವ ಮಾತನಾಡುತ್ತ ಅಧಿಕಾರಕ್ಕೆ ಬಂದ ಟ್ರಂಪ್ ಈಗ ಯುದ್ಧದ ಲಾಬಿಗೆ ಮಣಿಯುತ್ತಿದ್ದಾರೆ.

Update: 2025-06-24 11:21 IST

ಭಾಗ- 1

ಸತತ ಎರಡು ವರ್ಷಗಳಿಂದ ಗಾಝಾವನ್ನು ಛಿದ್ರಗೊಳಿಸುತ್ತ, ಫೆಲೆಸ್ತೀನಿಯರ ಬದುಕನ್ನೇ ನಾಶ ಮಾಡಿದ ಇಸ್ರೇಲ್ ಈಗ ಇರಾನ್ ವಿರುದ್ಧ ಮುಗಿಬಿದ್ದಿದೆ. ಇದ್ದಕ್ಕಿದ್ದಂತೆ ಅದರ ಪರಮಾಣು ನೆಲೆಯ ಮೇಲೆ ದಾಳಿ ಮಾಡುವ ಮೂಲಕ, ಕಾಲು ಕೆರೆದು ಯುದ್ಧಕ್ಕೆ ನಿಂತಿದೆ. ಇರಾನ್ ಪ್ರತ್ಯುತ್ತರ ಕೂಡ ಬಹಳ ತೀಕ್ಷ್ಣವಾಗಿಯೇ ಇದೆ. ಶರಣಾಗತಿಗೆ ಕರೆ ನೀಡಿದ್ದ ಟ್ರಂಪ್‌ಗೆ ಕೂಡ ಇರಾನ್ ಅಷ್ಟೇ ತೀಕ್ಷ್ಣ ಉತ್ತರ ಕೊಟ್ಟಿದ್ದು, ಆ ಕರೆಯನ್ನು ನಿರಾಕರಿಸಿದ್ದೂ ಆಗಿದೆ. ಈಗ ಅಮೆರಿಕ ಕೂಡ ಇರಾನ್ ವಿರುದ್ದ ಯುದ್ಧಕ್ಕೆ ಧುಮುಕಿದ್ದಾಗಿದೆ.

ಸರಕಾರ ಬದಲಾವಣೆಯಲ್ಲಿ ಮೂಗು ತೂರಿಸುವ ಅಮೆರಿಕದ ಚಾಳಿ ಟ್ರಂಪ್ ಥರದವರ ನಾಯಕತ್ವದಲ್ಲಿ ಮತ್ತೆ ಚುರುಕಾದಂತಿದೆ. ವಿಶ್ಲೇಷಕರು ಹೇಳುವಂತೆ, ಯಶಸ್ವಿ ಪಾಶ್ಚಿಮಾತ್ಯ ಬೆಂಬಲಿತ ಸರಕಾರ ಬದಲಾವಣೆಯ ಹಿಂದಿನ ಉದಾಹರಣೆಗಳು ಅಪರೂಪವಾದರೂ, ಅದು ತರುವ ವಿಪತ್ತುಗಳು ಅತಿಯಾಗಿರುತ್ತವೆ. ಇಂತಹ ಮಾತನ್ನೇ ಹೇಳಿಕೊಂಡು ಅಧಿಕಾರಕ್ಕೆ ಬಂದಿದ್ದ ಟ್ರಂಪ್, ವಾಸ್ತವದಲ್ಲಿ ಯುದ್ಧ ನಿಲ್ಲಿಸುವುದರ ಪರವಾಗಿ ಇಲ್ಲವೆನ್ನುವುದು ಈ ಸಂಘರ್ಷದಲ್ಲಿ ಸ್ಪಷ್ಟವಾಗುತ್ತಿದೆ.

ಈಗಾಗಲೇ ನಮ್ಮ ಕಣ್ಣೆದುರು ಇರುವಂತೆ, ಅಮೆರಿಕ ಮತ್ತದರ ಮಿತ್ರರಾಷ್ಟ್ರಗಳ ಮೂರು ಪ್ರಮುಖ ಮಿಲಿಟರಿ ಹಸ್ತಕ್ಷೇಪಗಳು ಭೀಕರವಾಗಿದ್ದವು. ಇರಾಕ್, ಅಫ್ಘಾನಿಸ್ತಾನ ಮತ್ತು ಲಿಬಿಯಾದಲ್ಲಿ ಅಮೆರಿಕದ ಮಿಲಿಟರಿ ಹಸ್ತಕ್ಷೇಪ ತಂದಿಟ್ಟ ಪರಿಣಾಮಗಳು ಇಂದಿಗೂ ಅಡಗಿಸಲಾರದಂಥವಾಗಿವೆ. ಅಫ್ಘಾನಿಸ್ತಾನದಲ್ಲಿ, ವಾಷಿಂಗ್ಟನ್ ನೇತೃತ್ವದ ಒಕ್ಕೂಟ 2001ರಲ್ಲಿ ತಾಲಿಬಾನ್ ಅನ್ನು ಉರುಳಿಸಿತು. ಮುಂದಿನ ಎರಡು ದಶಕಗಳಲ್ಲಿ ಅಮೆರಿಕ 2.3 ಟ್ರಿಲಿಯನ್ ಡಾಲರ್ ಖರ್ಚು ಮಾಡಿತು. 2003ರಲ್ಲಿ ಅಮೆರಿಕದಿಂದಾಗಿ ಇರಾಕ್‌ನ ಸದ್ದಾಂ ಹುಸೇನ್ ಆವಸಾನವಾಯಿತು. ಇರಾಕ್ ಮಾರಕ ದಂಗೆಗೆ ಮತ್ತು ನಂತರ ಪೂರ್ಣ ಪ್ರಮಾಣದ ಪಂಥೀಯ ಅಂತರ್ಯುದ್ಧಕ್ಕೆ ಇಳಿಯಿತು. 2011ರಲ್ಲಿ ಅಮೆರಿಕನ್ ಪಡೆಗಳು ತೊರೆದ ನಂತರ, ಇಸ್ಲಾಮಿಕ್ ಸ್ಟೇಟ್ ಗುಂಪು ಪ್ರವರ್ಧಮಾನಕ್ಕೆ ಬಂತು. ಈ ನಡುವೆ, ಲಿಬಿಯಾದಲ್ಲಿ ಮುಅಮ್ಮರ್ ಗದ್ದಾಫಿ ನೂರಾರು ಪ್ರತಿಭಟನಾಕಾರರನ್ನು ಕೊಂದರು. ನೇಟೋ ವಾಯುದಾಳಿಗಳನ್ನು ಪ್ರಾರಂಭಿಸಿತು ಮತ್ತು ಗದ್ದಾಫಿಯನ್ನು ಬಂಧಿಸಿ ಕೊಲ್ಲಲಾಯಿತು. ಆದರೆ ಮೂರು ವರ್ಷಗಳ ನಂತರ, ಲಿಬಿಯಾ ಅಂತರ್ಯುದ್ಧಕ್ಕೆ ಇಳಿಯಿತು ಮತ್ತು ಇಂದು ವಿಫಲ ದೇಶವಾಗಿ ಉಳಿದಿದೆ.

ಪ್ರಜಾಪ್ರಭುತ್ವ, ಅಭಿವೃದ್ಧಿ, ಮುಕ್ತ ಮಾರುಕಟ್ಟೆಗಳು ಮತ್ತು ಮುಕ್ತ ವ್ಯಾಪಾರದ ಭರವಸೆ ಹೆಸರಲ್ಲಿ ಪ್ರಪಂಚದ ಪ್ರತಿಯೊಂದು ಮೂಲೆಯಲ್ಲೂ ಹಸ್ತಕ್ಷೇಪಕ್ಕಿಳಿಯುವ ಅಮೆರಿಕ, ತನ್ನ ಹಿತಾಸಕ್ತಿಗಳನ್ನು ಸಾಧಿಸುತ್ತ ಬಂದಿದೆ. ಮಧ್ಯಪ್ರಾಚ್ಯದಲ್ಲಿ ಶಾಶ್ವತ ಯುದ್ಧಗಳಿಂದ ಅಮೆರಿಕವನ್ನು ದೂರವಿಡುವುದಾಗಿ ಟ್ರಂಪ್ ಹೇಳಿದ್ದೇನೋ ಹೌದು. ಆದರೆ, ಉಕ್ರೇನ್ ಮತ್ತು ಫೆಲೆಸ್ತೀನ್‌ಗಳಲ್ಲಿ ಸಂಘರ್ಷದಲ್ಲಿ ವಾಶಿಂಗ್ಟನ್ ಕಾಣಿಸಿಕೊಳ್ಳುವುದು ತಪ್ಪಲಿಲ್ಲ.

21ನೇ ಶತಮಾನದ ಯುದ್ಧಗಳ ಮೊದಲು, ಶೀತಲ ಸಮರ ವಿಯೆಟ್ನಾಂನಿಂದ ಹೈಟಿ ಮತ್ತು ಅಂಗೋಲಾದಿಂದ ನಿಕರಾಗುವಾವರೆಗೆ ಭೌಗೋಳಿಕ ರಾಜಕೀಯವನ್ನು ರೂಪಿಸುವ ಅಮೆರಿಕದ ಪ್ರಯತ್ನಗಳಿಂದ ಕೂಡಿತ್ತು. ಆದರೆ ಯಶಸ್ವಿ ಆಡಳಿತ ಬದಲಾವಣೆಯ ಉದಾಹರಣೆಗಳು ತುಂಬಾ ವಿರಳ. ಈಗ ಇರಾನ್‌ನಲ್ಲಿ ಸರಕಾರ ಉರುಳಿಸುವ ಸಾಧ್ಯತೆ ಬಗ್ಗೆ ಆತಂಕಗೊಂಡವರಲ್ಲಿ ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಕೂಡ ಇದ್ದಾರೆ. ಅವರು, ಇದು ಈ ಪ್ರದೇಶದಲ್ಲಿ ಅವ್ಯವಸ್ಥೆ ಸೃಷ್ಟಿಸುತ್ತದೆ ಎಂದು ಎಚ್ಚರಿಸಿದ್ಧಾರೆ.

ಸ್ವಲ್ಪ ಹಿಂದಕ್ಕೆ ನೋಡಿದರೆ, ಅಮೆರಿಕದ ಆರಂಭಿಕ ವಿದೇಶಿ ಮಿಲಿಟರಿ ಕ್ರಮಗಳು ಅವಶ್ಯಕತೆಯಿಂದ ಹುಟ್ಟಿಕೊಂಡವು ಎಂದು ಹೇಳಲಾಗಿತ್ತು. ಮೊದಲ ಮತ್ತು ಎರಡನೇ ಬಾರ್ಬರಿ ಯುದ್ಧಗಳು ಸ್ವಾತಂತ್ರ್ಯದ ನಂತರ ಹೆಸರಿಗಷ್ಟೇ ಕೈಗೊಳ್ಳಲಾಗಿದ್ದ ವಿದೇಶಿ ಯುದ್ಧಗಳಾಗಿದ್ದವು. ಉತ್ತರ ಆಫ್ರಿಕಾದ ಬಾರ್ಬರಿ ರಾಜ್ಯಗಳ ವಿರುದ್ಧ ಮೆಡಿಟರೇನಿಯನ್‌ನಲ್ಲಿ ಅಮೆರಿಕನ್ ಧ್ವಜ ಹೊತ್ತ ಹಡಗುಗಳನ್ನು ಪೀಡಿಸುತ್ತಿದ್ದ ಕಡಲ್ಗಳ್ಳತನ ಕೊನೆಗೊಳಿಸುವುದು ಅದರ ಉದ್ದೇಶವಾಗಿತ್ತು ಎಂದು ಹೇಳಲಾಗಿದೆ. ಈ ಘರ್ಷಣೆಗಳು, ಕಡೆಗೆ ಅಮೆರಿಕ ಶಾಶ್ವತ ಮತ್ತು ವೃತ್ತಿಪರ ನೌಕಾಪಡೆ ಸ್ಥಾಪಿಸಲು ಕಾರಣವಾಯಿತು. ಅಮೆರಿಕನ್ ವಾಣಿಜ್ಯ ಹಿತಾಸಕ್ತಿಗಳನ್ನು ರಕ್ಷಿಸಲು ಮಿಲಿಟರಿ ಬಲವನ್ನು ಕಾನೂನುಬದ್ಧ ಸಾಧನವಾಗಿ ಬಳಸುವುದಕ್ಕೆ ಅದು ಮುಂದಾಯಿತು. ಈ ವಾಣಿಜ್ಯ ರಕ್ಷಣೆಯ ನೆಪ ಬಹಳ ಬೇಗ ಪ್ರಾದೇಶಿಕ ಮತ್ತು ರಾಜಕೀಯ ವಿಸ್ತರಣೆಯ ಉದ್ದೇಶದ ಕಡೆಗೆ ವಾಲಿತು. ಮೆಕ್ಸಿಕನ್-ಅಮೆರಿಕನ್ ಯುದ್ಧ (1846-1848) ಪ್ರಾದೇಶಿಕ ವಿಜಯದ ಪ್ರಮುಖ ಸಂಘರ್ಷವಾಗಿತ್ತು. ಇದರ ಪರಿಣಾಮವಾಗಿ ಯುಎಸ್ ನೈಋತ್ಯ ರಾಜ್ಯಗಳಾಗುವ ಭೂಮಿಯನ್ನು ಅತಿಕ್ರಮಿಸಿತು. ಇದು ವಿಸ್ತರಣೆ ಉದ್ದೇಶದ ಯುದ್ಧಕ್ಕೆ ಸ್ಪಷ್ಟವಾಗಿ ಮೊದಲ ಉದಾಹರಣೆಯಾಯಿತು.

19ನೇ ಶತಮಾನದ ಅಂತ್ಯ ಮತ್ತು 20ನೇ ಶತಮಾನದ ಆರಂಭದ ವೇಳೆಗೆ ಪರಿಸ್ಥಿತಿಗಳು ಇನ್ನಷ್ಟು ಬದಲಾದವು. ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್‌ನಲ್ಲಿ ಆಗಾಗ ಮಿಲಿಟರಿ ಹಸ್ತಕ್ಷೇಪಗಳು ನಡೆದವು. ಅಮೆರಿಕದ ಪಡೆಗಳು, ಅದರಲ್ಲೂ ನೌಕಾಪಡೆಗಳು, ಕ್ಯೂಬಾ, ನಿಕರಾಗುವಾ, ಹೈಟಿ, ಡೊಮಿನಿಕನ್ ರಿಪಬ್ಲಿಕ್, ಹೊಂಡುರಾಸ್, ಪನಾಮ ಮತ್ತು ಮೆಕ್ಸಿಕೊಗಳಲ್ಲಿ ಬಂದಿಳಿದವು. ಈ ಕ್ರಮಗಳು ಅಮೆರಿಕ ರಾಜಕೀಯ ಮತ್ತು ಆರ್ಥಿಕ ದಬ್ಬಾಳಿಕೆಗೆ ಮಿಲಿಟರಿ ಬಲ ಬಳಸುವ ಶಾಶ್ವತ ಮಾದರಿಗೆ ಕಾರಣವಾದವು. ಯುರೋಪಿಯನ್ ಮಾದರಿಯಲ್ಲಿಯೇ ಅಮೆರಿಕ ಔಪಚಾರಿಕ, ದೀರ್ಘಕಾಲೀನ ವಸಾಹತುಶಾಹಿಗೆ ಒಲವು ತೋರಿತು. ತನಗೆ ಸ್ನೇಹಪರವಲ್ಲದ ಸರಕಾರಗಳನ್ನು ಉರುಳಿಸಲು, ಸಾಲ ಬಿಕ್ಕಟ್ಟುಗಳನ್ನು ನಿರ್ವಹಿಸಲು, ಅಮೆರಿಕನ್ ಒಡೆತನದ ಆಸ್ತಿ ರಕ್ಷಿಸಲು ಮತ್ತು ಯುಎಸ್ ರಾಜಕೀಯ ಮತ್ತು ವ್ಯವಹಾರ ಹಿತಾಸಕ್ತಿಗಳಿಗೆ ಅನುಕೂಲಕರವಾದ ಸರಕಾರಗಳನ್ನು ಸ್ಥಾಪಿಸಲು ಮಿಲಿಟರಿ ಬಲವನ್ನು ಬಳಸಿತು. ಅಂತಿಮವಾಗಿ, ಡಾಲರ್ ರಾಜತಾಂತ್ರಿಕತೆ ಸ್ಪಷ್ಟ ಆರ್ಥಿಕ ಉದ್ದೇಶವನ್ನು ಪೂರೈಸಿತು. ನೌಕಾಪಡೆಗಳನ್ನು ಆಗಾಗ ಕದನಕ್ಕಿಳಿಸುವ ಮೂಲಕ, ತನ್ನ ಪ್ರಭಾವ ಮತ್ತು ಆರ್ಥಿಕ ನಿಯಂತ್ರಣವನ್ನು ತೋರಿಸುವುದು ಜೋರಾಯಿತು. ಅನೌಪಚಾರಿಕ ಸಾಮ್ರಾಜ್ಯವನ್ನು ಕಾಯ್ದುಕೊಳ್ಳುವ ಈ ನೀತಿ ಲ್ಯಾಟಿನ್ ಅಮೆರಿಕದಾದ್ಯಂತ ತೀವ್ರ ಮತ್ತು ಶಾಶ್ವತ ಅಸಮಾಧಾನವನ್ನು ಹುಟ್ಟುಹಾಕಿತು.

19ನೇ ಶತಮಾನದಿಂದಲೂ, ಅಮೆರಿಕ ಅನೇಕ ವಿದೇಶಿ ಸರಕಾರಗಳನ್ನು ಬದಲಿಸುವಲ್ಲಿ ಬಹಿರಂಗವಾಗಿ ಮತ್ತು ರಹಸ್ಯವಾಗಿ ಪಾತ್ರ ನಿರ್ವಹಿಸಿದೆ ಮತ್ತು ಹಸ್ತಕ್ಷೇಪ ಮಾಡಿದೆ.

1. 19ನೇ ಶತಮಾನದ ಉತ್ತರಾರ್ಧದಲ್ಲಿ, ಅಮೆರಿಕ ಮುಖ್ಯವಾಗಿ ಲ್ಯಾಟಿನ್ ಅಮೆರಿಕ ಮತ್ತು ನೈಋತ್ಯ ಪೆಸಿಫಿಕ್‌ನಲ್ಲಿ ಆಡಳಿತ ಬದಲಾವಣೆಗೆ ಮುಂದಾಯಿತು. ಇದರಲ್ಲಿ ಸ್ಪ್ಯಾನಿಷ್-ಅಮೆರಿಕನ್ ಮತ್ತು ಫಿಲಿಪ್ಪೀನ್ಸ್-ಅಮೆರಿಕನ್ ಯುದ್ಧಗಳು ಸೇರಿವೆ. 20ನೇ ಶತಮಾನದ ಆರಂಭದಲ್ಲಿ, ನೆರೆಯ ಹವಾಯಿ, ಪನಾಮ, ನಿಕರಾಗುವಾ, ಮೆಕ್ಸಿಕೊ, ಹೈಟಿ ಮತ್ತು ಡೊಮಿನಿಕನ್ ರಿಪಬ್ಲಿಕ್ ಸೇರಿದಂತೆ ಪ್ರಪಂಚದಾದ್ಯಂತದ ಅನೇಕ ದೇಶಗಳಲ್ಲಿ ಅದು ಸರಕಾರಗಳನ್ನು ರೂಪಿಸಿತು ಅಥವಾ ತಾನೇ ಸರಕಾರವನ್ನು ಸ್ಥಾಪಿಸಿತು.

2. ಎರಡನೇ ಮಹಾಯುದ್ಧದ ಸಮಯದಲ್ಲಿ ಅಮೆರಿಕ ಅನೇಕ ನಾಝಿ ಜರ್ಮನ್ ಅಥವಾ ಇಂಪೀರಿಯಲ್ ಜಪಾನೀಸ್ ಕೈಗೊಂಬೆ ಆಡಳಿತಗಳನ್ನು ಉರುಳಿಸಲು ಸಹಾಯ ಮಾಡಿತು. ಫಿಲಿಪ್ಪೀನ್ಸ್, ಕೊರಿಯಾ, ಪೂರ್ವ ಚೀನಾ ಮತ್ತು ಯುರೋಪಿನ ಕೆಲ ಭಾಗಗಳಲ್ಲಿನ ಸರಕಾರಗಳು ಇದರಲ್ಲಿ ಸೇರಿವೆ. ಅಮೆರಿಕದ ಪಡೆಗಳು, ಯುಕೆ ಮತ್ತು ಸೋವಿಯತ್ ಒಕ್ಕೂಟದೊಂದಿಗೆ, ಜರ್ಮನಿಯಲ್ಲಿ ಹಿಟ್ಲರ್ ಸರಕಾರವನ್ನು ತೆಗೆಯುವಲ್ಲಿ ಮತ್ತು ಇಟಲಿಯಲ್ಲಿ ಮುಸ್ಸೋಲಿನಿ ಪದಚ್ಯುತಿಯಲ್ಲಿ ಪ್ರಮುಖ ಪಾತ್ರ ವಹಿಸಿದವು.

3. ಎರಡನೇ ಮಹಾಯುದ್ಧದ ಕೊನೆಯಲ್ಲಿ, ಅಮೆರಿಕ ಶೀತಲ ಸಮರದ ಸಂದರ್ಭದಲ್ಲಿ ಜಾಗತಿಕ ನಾಯಕತ್ವ, ಪ್ರಭಾವ ಮತ್ತು ಭದ್ರತೆಗಾಗಿ ಸೋವಿಯತ್ ಒಕ್ಕೂಟದೊಂದಿಗೆ ಕದನಕ್ಕಿಳಿಯಿತು.

4. ಇದಾದ ಬಳಿಕ ಯುಎಸ್ ಸಾಂಪ್ರದಾಯಿಕ ಕಾರ್ಯಾಚರಣೆಗಳ ಪ್ರದೇಶವಾದ ಮಧ್ಯ ಅಮೆರಿಕ ಮತ್ತು ಕೆರಿಬಿಯನ್ ಅನ್ನು ಮೀರಿ ತನ್ನ ಕ್ರಮಗಳ ಭೌಗೋಳಿಕ ವ್ಯಾಪ್ತಿಯನ್ನು ವಿಸ್ತರಿಸಿತು. ಅಮೆರಿಕ ಮತ್ತು ಯುಕೆ ಯೋಜಿತ 1953ರ ಇರಾನಿನ ದಂಗೆ, ಕ್ಯೂಬಾವನ್ನು ಗುರಿಯಾಗಿಸಿ 1961ರ ಬೇ ಆಫ್ ಪಿಗ್ಸ್ ಆಕ್ರಮಣ ಮತ್ತು ಇಂಡೋನೇಶ್ಯದಲ್ಲಿ ಜನರಲ್ ಸುಹಾರ್ಟೊ ನೇತೃತ್ವದ ಮಿಲಿಟರಿ ಸುಕರ್ನೊ ಸರಕಾರವನ್ನು ಉರುಳಿಸುವಲ್ಲಿ ಬೆಂಬಲ ಇವು ಅಂಥ ಉದಾಹರಣೆಗಳಾಗಿವೆ.

5. ಇದರ ಜೊತೆಗೆ ಅಮೆರಿಕ 1948ರಲ್ಲಿ ಇಟಲಿ, 1953 ರಲ್ಲಿ ಫಿಲಿಪ್ಪೀನ್ಸ್, 1950 ಮತ್ತು 1960ರ ದಶಕಗಳಲ್ಲಿ ಜಪಾನ್, 1957ರಲ್ಲಿ ಲೆಬನಾನ್ ಮತ್ತು 1996ರಲ್ಲಿ ರಶ್ಯ ಸೇರಿದಂತೆ ಆ ದೇಶಗಳ ರಾಷ್ಟ್ರೀಯ ಚುನಾವಣೆಗಳಲ್ಲಿ ಹಸ್ತಕ್ಷೇಪ ಮಾಡಿದೆ. ಒಂದು ಅಧ್ಯಯನದ ಪ್ರಕಾರ, 1946ರಿಂದ 2000ದವರೆಗೆ ವಿದೇಶಿ ಚುನಾವಣೆಗಳಲ್ಲಿ ಅಮೆರಿಕ ಕನಿಷ್ಠ 81 ಬಹಿರಂಗ ಮತ್ತು ರಹಸ್ಯ ಹಸ್ತಕ್ಷೇಪಗಳನ್ನು ನಡೆಸಿದೆ. ಮತ್ತೊಂದು ಅಧ್ಯಯನದ ಪ್ರಕಾರ, ಶೀತಲ ಸಮರದ ಸಮಯದಲ್ಲಿ ಅಮೆರಿಕ 64 ರಹಸ್ಯ ಮತ್ತು ಆರು ಬಹಿರಂಗ ಪ್ರಯತ್ನಗಳಲ್ಲಿ ತೊಡಗಿತ್ತು. ಸೋವಿಯತ್ ಒಕ್ಕೂಟದ ವಿಸರ್ಜನೆಯ ನಂತರ, ಅಮೆರಿಕ ಹಲವಾರು ದೇಶಗಳ ಆಡಳಿತವನ್ನು ನಿರ್ಧರಿಸಲು ಯುದ್ಧಗಳ ನೇತೃತ್ವ ವಹಿಸಿದೆ ಅಥವಾ ಬೆಂಬಲಿಸಿದೆ.

ಈ ಸಂಘರ್ಷಗಳಲ್ಲಿ ವಿಯೆಟ್ನಾಂ ಯುದ್ಧ, ಗಲ್ಫ್ ಯುದ್ಧ, ಅಫ್ಘಾನ್ ಯುದ್ಧ ಮತ್ತು ಇರಾಕ್ ಯುದ್ಧಗಳೂ ಸೇರಿವೆ.

ವಿಯೆಟ್ನಾಂ ಯುದ್ಧ (1955-1975)

ಶೀತಲ ಸಮರ ಯುಗದ ಅತ್ಯಂತ ದೀರ್ಘ ಮತ್ತು ಅತ್ಯಂತ ವಿಭಜಕ ಅಮೆರಿಕನ್ ಯುದ್ಧ ನಡೆದದ್ದು ವಿಯೆಟ್ನಾಂನಲ್ಲಿ. ದಕ್ಷಿಣ ವಿಯೆಟ್ನಾಂ ಕಮ್ಯುನಿಸಂ ಹಿಂದೆ ಬಿದ್ದರೆ, ಉಳಿದ ಆಗ್ನೇಯ ಏಶ್ಯ ಅನಿವಾರ್ಯವಾಗಿ ಅನುಸರಿಸುತ್ತದೆ ಎಂಬ ತರ್ಕದ ಮುಂದುವರಿಕೆಯಾಗಿ ಅಮೆರಿಕ ಈ ಯುದ್ಧಕ್ಕೆ ಇಳಿದಿತ್ತು. ಅಂದರೆ, ಜಗತ್ತಿನಲ್ಲಿ ಕಮ್ಯುನಿಸಂ ಹರಡುವಿಕೆಯ ವಿರುದ್ಧದ ಅಮೆರಿಕದ ಹೋರಾಟದ ಭಾಗವಾಗಿತ್ತು. ಒಂದು ದೇಶ ಕಮ್ಯುನಿಸಂನ ಪ್ರಭಾವಕ್ಕೆ ಒಳಗಾದರೆ, ಸುತ್ತಮುತ್ತಲಿನ ದೇಶಗಳು ಅನಿವಾರ್ಯವಾಗಿ ಅನುಸರಿಸುತ್ತವೆ ಎಂದು ಹೇಳುವ ಮೂಲಕ ವಿಯೆಟ್ನಾಂನಲ್ಲಿ ತನ್ನ ಮಿಲಿಟರಿ ಹಸ್ತಕ್ಷೇಪವನ್ನು ಅಮೆರಿಕ ಸಮರ್ಥಿಸಿಕೊಂಡಿತು. ಆಗ್ನೇಯ ಏಶ್ಯದ ಕಮ್ಯುನಿಸ್ಟ್ ಪ್ರಾಬಲ್ಯವನ್ನು ತಡೆಯುವುದು ಇದರ ಉದ್ದೇಶವಾಗಿತ್ತು. ರಾಷ್ಟ್ರೀಯ ವಿಯೆಟ್ನಾಂ (ವಿಯೆಟ್ ಕಾಂಗ್) ದಂಗೆ ಮತ್ತು ಅದರ ಪ್ರಬಲ ಪೋಷಕ ಉತ್ತರ ವಿಯೆಟ್ನಾಂ ವಿರುದ್ಧ ದಕ್ಷಿಣ ವಿಯೆಟ್ನಾಂನಲ್ಲಿ ಕಮ್ಯುನಿಸ್ಟ್ ವಿರೋಧಿಯಾದ, ಆದರೆ ತೀವ್ರ ಭ್ರಷ್ಟ ಮತ್ತು ಜನಪ್ರಿಯವಲ್ಲದ ಸರಕಾರಗಳನ್ನು ಅಮೆರಿಕ ಬೆಂಬಲಿಸಿತು.

1961ರಲ್ಲಿ ಕಮ್ಯುನಿಸ್ಟ್ ಚೀನಾ ಉತ್ತರ ವಿಯೆಟ್ನಾಂ ಅನ್ನು ಸಕ್ರಿಯವಾಗಿ ಬೆಂಬಲಿಸುತ್ತಿದೆ ಎಂದು ಮನವರಿಕೆ ಮಾಡಿಕೊಂಡ ಅಧ್ಯಕ್ಷ ಜಾನ್ ಎಫ್. ಕೆನಡಿ, ಕಮ್ಯುನಿಸ್ಟ್ ದಂಗೆಯನ್ನು ತಡೆಯಲು ಸಹಾಯ ಮಾಡುವುದಕ್ಕೆ ವಿಯೆಟ್ನಾಂನಲ್ಲಿ ಯುಎಸ್ ಮಿಲಿಟರಿ ಕಾರ್ಯಾಚರಣೆಗೆ ಅನುಮೋದನೆ ನೀಡಿದರು. ಅವರ ಉತ್ತರಾಧಿಕಾರಿ ಲಿಂಡನ್ ಬಿ ಜಾನ್ಸನ್, ಆಗ್ನೇಯ ಏಶ್ಯದಲ್ಲಿ ಅಮೆರಿಕದ ಆರ್ಥಿಕ ಮತ್ತು ರಾಜಕೀಯ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ತಮ್ಮ ದೇಶದ ಒಳಗೊಳ್ಳುವಿಕೆಯನ್ನು ಇನ್ನೂ ಹೆಚ್ಚಿಸಿದರು. 1965ರಲ್ಲಿ 23,000 ಸೈನಿಕರಿಂದ 1969ರಲ್ಲಿ 5,40,000 ಕ್ಕೂ ಹೆಚ್ಚು ಸೈನಿಕರೊಂದಿಗೆ ಅಮೆರಿಕದ ಪಾಲ್ಗೊಳ್ಳುವಿಕೆ ಬೃಹತ್ ಪ್ರಮಾಣದಲ್ಲಿ ವಿಸ್ತರಣೆಯಾಗಿತ್ತು. ಆಗಸ್ಟ್ 1964ರಲ್ಲಿ ಅದು ನಿರ್ಣಾಯಕ ಗಳಿಗೆಗೆ ಬಂದಿತು. ಅಮೆರಿಕದ ಮಿಲಿಟರಿ ಕಾರ್ಯತಂತ್ರ ಎರಡು ಪಟ್ಟು ಹೆಚ್ಚಿತ್ತು. ಉತ್ತರ ವಿಯೆಟ್ನಾಂ ವಿರುದ್ಧ ಬೃಹತ್ ವೈಮಾನಿಕ ಬಾಂಬ್ ದಾಳಿ ಮತ್ತು ದಕ್ಷಿಣದಲ್ಲಿ ನೆಲದ ಮೇಲಿನ ಯುದ್ಧ ಇದರ ಭಾಗವಾಗಿತ್ತು. ಆದರೆ, ವ್ಯಾಪಕ ಬೆಂಬಲ ಪಡೆದ ಮತ್ತು ಅಪಾರ ಸಾವುನೋವುಗಳನ್ನು ಸಹಿಸಿಕೊಳ್ಳಲು ಸಿದ್ಧವಿದ್ದ ರಾಷ್ಟ್ರೀಯತಾವಾದಿ ಚಳವಳಿ ವಿರುದ್ಧ ಈ ತಂತ್ರ ಅತ್ಯಂತ ದೊಡ್ಡ ಮಟ್ಟದಲ್ಲಿ ವಿಫಲವಾಗಿತ್ತು.

ಫೆಬ್ರವರಿ 1965ರಲ್ಲಿ ಅಮೆರಿಕ ಉತ್ತರ ವಿಯೆಟ್ನಾಂನಲ್ಲಿ ಮಿಲಿಟರಿ ಮತ್ತು ಕೈಗಾರಿಕಾ ನೆಲೆಗಳ ಮೇಲೆ ಬಾಂಬ್ ದಾಳಿ ಮಾಡಲು ಪ್ರಾರಂಭಿಸಿತು. ಅಂತರ್‌ರಾಷ್ಟ್ರೀಯ ಮಧ್ಯಸ್ಥಿಕೆಯ ಕೆಲ ಫಲಪ್ರದ ಪ್ರಯತ್ನಗಳ ಹೊರತಾಗಿಯೂ, ಇದರ ನಂತರ ದೀರ್ಘಕಾಲದ ಗೆರಿಲ್ಲಾ ಯುದ್ಧ ನಡೆಯಿತು. ಯುದ್ಧ ತಿರುವು ಪಡೆದದ್ದು ಜನವರಿ 1968ರಲ್ಲಿ ಟೆಟ್ ಆಕ್ರಮಣದೊಂದಿಗೆ. ಜನವರಿ 1968ರಲ್ಲಿ ಕಮ್ಯುನಿಸ್ಟ್ ಟೆಟ್ ಆಕ್ರಮಣ ಈ ಸಂಘರ್ಷವನ್ನು ಉಲ್ಬಣಗೊಳಿಸಿತು. ಇದು ಅಂತಿಮ ವಿಜಯದ ವಿಶ್ವಾಸ ಹೊಂದಿದ್ದ ಅಮೆರಿಕನ್ನರನ್ನು ಆಘಾತಗೊಳಿಸಿತ್ತು. ಭಾರೀ ಜೀವಹಾನಿಯಿಂದ ಆಘಾತಕ್ಕೊಳಗಾದ ಅಮೆರಿಕದ ಜನರು ಯುದ್ಧದ ಬಗ್ಗೆ ಹೆಚ್ಚು ಹೆಚ್ಚು ಅಸಹನೆ ವ್ಯಕ್ತಪಡಿಸಿದರು. ದೇಶ ತನ್ನ ಮಿಲಿಟರಿ ವೆಚ್ಚವನ್ನು ಕಡಿತಗೊಳಿಸಲು ಮತ್ತು ಹಿಂದೆ ಸರಿಯಲು ಒತ್ತಾಯಿಸಿದರು. ಅಧ್ಯಕ್ಷ ನಿಕ್ಸನ್ ಅವರ ಆದೇಶದ ಮೇರೆಗೆ ಯುಎಸ್ ವಾಯುಪಡೆ ನಡೆಸಿದ ಹೊಸ ಕಾರ್ಪೆಟ್ ಬಾಂಬ್ ದಾಳಿಗಳ ನಂತರ, ಮೇ 1968ರಲ್ಲಿ ಪ್ಯಾರಿಸ್‌ನಲ್ಲಿ ಶಾಂತಿ ಮಾತುಕತೆಗಳು ಪ್ರಾರಂಭವಾದವು.

ವಿನಾಶಕಾರಿ ನಷ್ಟಗಳನ್ನು ಅನುಭವಿಸಿದ ಕಮ್ಯುನಿಸ್ಟರಿಗೆ ಮಿಲಿಟರಿ ಸೋಲಾಯಿತಾದರೂ, ಯುದ್ಧವನ್ನು ಯುಎಸ್ ಗೆಲ್ಲುತ್ತಿದೆ ಎಂಬ ಅಧಿಕೃತ ನಿರೂಪಣೆ ಛಿದ್ರವಾಗಿತ್ತು. ವಿಯೆಟ್ನಾಂ ಯುದ್ಧದ ಪರಿಣಾಮಗಳು ದುರಂತ ಮತ್ತು ದೂರಗಾಮಿಯಾಗಿದ್ದವು. ಈ ಸಂಘರ್ಷ ಅಮೆರಿಕದ 58,000ಕ್ಕೂ ಹೆಚ್ಚು ಜೀವಗಳನ್ನು ಬಲಿತೆಗೆದುಕೊಂಡಿತ್ತು. ಅಲ್ಲದೆ, ಅಮೆರಿಕಕ್ಕೆ 168 ಶತಕೋಟಿ ಡಾಲರ್‌ಗಳಿಗಿಂತ ಹೆಚ್ಚು ನಷ್ಟ ಉಂಟುಮಾಡಿತು. ಇದು ಅಮೆರಿಕದ ಆರ್ಥಿಕತೆಯನ್ನು ಹಾನಿಗೊಳಿಸಿದ ಹಣದುಬ್ಬರದ ವಿಷಚಕ್ರಕ್ಕೆ ಕಾರಣವಾಯಿತು. ವಿಯೆಟ್ನಾಂನಲ್ಲಿ ಅಪಾರ ಸಾವುನೋವು ಸಂಭವಿಸಿತ್ತು. ಲಕ್ಷಾಂತರ ಸೈನಿಕರು ಮತ್ತು ನಾಗರಿಕರು ಮೃತಪಟ್ಟಿದ್ದರು. ಇತಿಹಾಸದಲ್ಲಿಯೇ ಅತ್ಯಂತ ತೀವ್ರವಾದ ಬಾಂಬ್ ದಾಳಿಯಿಂದ ಅದು ಧ್ವಂಸಗೊಂಡಿತ್ತು. ಎರಡನೇ ಮಹಾಯುದ್ಧದಲ್ಲಿ ಎಲ್ಲಾ ಕಡೆಯವರು ಒಟ್ಟಾಗಿ ಮಾಡಿದ್ದಕ್ಕಿಂತ ದೊಡ್ಡ ದಾಳಿಯನ್ನು ವಿಯೆಟ್ನಾಂ, ಲಾವೋಸ್ ಮತ್ತು ಕಾಂಬೋಡಿಯಾದ ಮೇಲೆ ಅಮೆರಿಕ ಮಾಡಿತ್ತು. ದೇಶೀಯವಾಗಿ, ಈ ಯುದ್ಧ ಅಮೆರಿಕನ್ ಸಮಾಜವನ್ನು ಛಿದ್ರಗೊಳಿಸಿತು. 1968ರ ಮೈ ಲೈ ಹತ್ಯಾಕಾಂಡದಂತಹ ಯುದ್ಧ ಮತ್ತು ದೌರ್ಜನ್ಯಗಳನ್ನು ಕಂಡ ಬಳಿಕ, ಮಿಲಿಟರಿಯ ಬಗ್ಗೆ ಆಳವಾದ ಮತ್ತು ಶಾಶ್ವತವಾದ ಸಾರ್ವಜನಿಕ ಸಿನಿಕತನ ಮೂಡಿತು. ಶಕ್ತಿಯುತ ಯುದ್ಧವಿರೋಧಿ ಚಳವಳಿಗೆ ಉತ್ತೇಜನ ನೀಡಿತು. ಯುದ್ಧದ ಬಗೆಗಿನ ಅಮೆರಿಕದಲ್ಲಿನ ಈ ಜಿಗುಪ್ಸೆಯನ್ನು ವಿಯೆಟ್ನಾಂ ಸಿಂಡ್ರೋಮ್ ಎಂದೇ ಕರೆಯಲಾಗುತ್ತದೆ.

ವಿಯೆಟ್ನಾಂನಲ್ಲಿ ಅಮೆರಿಕನ್ ಮಿಲಿಟರಿ ಹಸ್ತಕ್ಷೇಪ ಯುಎಸ್ ನೀತಿಯ ಮೇಲೆ ಭಾರೀ ಹೊರೆ ಉಂಟುಮಾಡಿತು ಮತ್ತು ದೇಶದ ಅಂತರ್‌ರಾಷ್ಟ್ರೀಯ ಪ್ರತಿಷ್ಠೆಗೆ, ವಿಶೇಷವಾಗಿ ಪಶ್ಚಿಮ ಯುರೋಪಿನಲ್ಲಿ ಗಂಭೀರ ಹೊಡೆತ ಕೊಟ್ಟಿತ್ತು. 27 ಜನವರಿ 1973ರ ಪ್ಯಾರಿಸ್ ಒಪ್ಪಂದಗಳ ಬಳಿಕ ಅಂತಿಮವಾಗಿ ಅಮೆರಿಕ ಸಂಘರ್ಷದಿಂದ ಹೊರಬಂತು. 1973ರಲ್ಲಿ ಯುಎಸ್ ಅಂತಿಮವಾಗಿ ತನ್ನ ಪಡೆಗಳನ್ನು ಹಿಂದೆಗೆದುಕೊಂಡಿತು. ಎರಡು ವರ್ಷಗಳ ನಂತರ, ಉತ್ತರ ವಿಯೆಟ್ನಾಂ ತನ್ನ ಅಂತಿಮ ಆಕ್ರಮಣ ಪ್ರಾರಂಭಿಸಿತು ಮತ್ತು ದಕ್ಷಿಣ ವಿಯೆಟ್ನಾಂ ಕುಸಿಯಿತು. ಕಮ್ಯುನಿಸ್ಟ್ ಆಳ್ವಿಕೆಯಲ್ಲಿ ದೇಶವನ್ನು ಒಗ್ಗೂಡಿಸಲಾಯಿತು.

ನಿರ್ಣಾಯಕ ರಾಷ್ಟ್ರೀಯತಾವಾದಿ ದಂಗೆಯನ್ನು ಎದುರಿಸಿದಾಗ ಅಮೆರಿಕದ ಮಿಲಿಟರಿ ಶಕ್ತಿಯ ಸ್ಪಷ್ಟ ಮಿತಿಗಳನ್ನು ವಿಯೆಟ್ನಾಂ ತೋರಿಸಿತು. ಯುಎಸ್ ನಾಯಕತ್ವ ಈ ಸಂಘರ್ಷವನ್ನು ಬಾಹ್ಯ ಕಮ್ಯುನಿಸ್ಟ್ ಆಕ್ರಮಣದ ಸರಳ ಪ್ರಕರಣವಾಗಿ ಬಿಂಬಿಸಿತು. ಅದರ ಸ್ವರೂಪವನ್ನು ಅಂತರ್ಯುದ್ಧ ಮತ್ತು ರಾಷ್ಟ್ರೀಯ ವಿಮೋಚನೆಗಾಗಿ ದಶಕಗಳ ಕಾಲದ ಹೋರಾಟವೆಂಬುದನ್ನು ಗ್ರಹಿಸಲು ಅದು ವಿಫಲವಾಯಿತು. ಭ್ರಷ್ಟ ಮತ್ತು ಅಸಮರ್ಥ ದಕ್ಷಿಣ ವಿಯೆಟ್ನಾಂ ಸರಕಾರಗಳನ್ನು ಬೆಂಬಲಿಸುವ ಮೂಲಕ, ಅಮೆರಿಕ ಆರಂಭದಿಂದಲೇ ರಾಜಕೀಯ ಗೆಲುವನ್ನು ಕಾಣಲಾರದ ಹೆಜ್ಜೆಯನ್ನಿಟ್ಟಿತ್ತು. ಅದರ ಮಿಲಿಟರಿ ತಂತ್ರ ನೈತಿಕವಾಗಿ ವಿನಾಶಕಾರಿ ಮತ್ತು ರಾಜಕೀಯವಾಗಿ ಅಸಮರ್ಥನೀಯವಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಆರ್.ಜೀವಿ

contributor

Similar News