ಪಹಲ್ಗಾಮ್ ದಾಳಿ ಮತ್ತು ಆನಂತರದ ಪರಿಣಾಮಗಳು
ಭಾಗ- 2
ಗಮನಿಸಬೇಕಾದ ಮುಖ್ಯ ಸಂಗತಿಯೊಂದಿದೆ. ಕಾಶ್ಮೀರ ಮತ್ತೆ ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ಅರಳಲು ಆರಂಭಿಸಿತ್ತು. ಪ್ರವಾಸೋದ್ಯಮ ಪ್ರವರ್ಧಮಾನಕ್ಕೆ ಬರುತ್ತಿತ್ತು. ಕೃಷಿ ಅಭಿವೃದ್ಧಿ ಹೊಂದುತ್ತಿತ್ತು. ಕಣಿವೆಯಲ್ಲಿ ನಿಧಾನವಾಗಿ ಸಂಘರ್ಷದ ದಿನಗಳು ಮುಗಿದಂತೆ ಕಾಣತೊಡಗಿತ್ತು. ಆದರೆ ಪಹಲ್ಗಾಮ್ ದಾಳಿ ಇವೆಲ್ಲವನ್ನೂ ಛಿದ್ರಗೊಳಿಸಿದೆ. ಭಯೋತ್ಪಾದಕ ದಾಳಿ ಮತ್ತೊಮ್ಮೆ ಈ ಪ್ರದೇಶವನ್ನು ಬೆಚ್ಚಿಬೀಳಿಸಿದೆ. ಬೆಳೆಯುತ್ತಿರುವ ಜಿಎಸ್‌ಡಿಪಿಯಿಂದ ಹಿಡಿದು ದಾಖಲೆಯ ಪ್ರವಾಸಿಗರ ಆಗಮನದವರೆಗೆ ಅಭಿವೃದ್ಧಿಯ ಹೊಸ ಪಥವೊಂದು ತೆರೆದುಕೊಳ್ಳತೊಡಗಿತ್ತು, ಆದರೆ ಈಗ ಎಲ್ಲವೂ ಮತ್ತೆ ಹಿಂದಕ್ಕೆ ಚಲಿಸಿದಂತಾಗಿದೆ.
2019ರಿಂದ ಕಾಶ್ಮೀರದ ಆರ್ಥಿಕತೆ ಶೇ.4.89ರಷ್ಟು ಬೆಳೆದಿತ್ತು. ತಲಾ ಆದಾಯ ಸುಮಾರು ಶೇ. 148ರಷ್ಟು ಹೆಚ್ಚಾಗಿತ್ತು. ಕೇವಲ 10 ವರ್ಷಗಳಲ್ಲಿ ನಿರುದ್ಯೋಗ ಶೇ. 6.1ಕ್ಕೆ ಇಳಿದಿತ್ತು.
ಇದೆಲ್ಲದಕ್ಕೂ ಎರಡು ಪ್ರಮುಖ ಕ್ಷೇತ್ರಗಳ ಕೊಡುಗೆ ಬಹಳ ದೊಡ್ಡದು. ಮೊದಲನೆಯದು ಕೃಷಿ. ಸುಮಾರು ಶೇ. 43 ಕಾಶ್ಮೀರಿಗಳು ಕೃಷಿ ವಲಯದಲ್ಲಿ ಕೆಲಸ ಮಾಡುತ್ತಾರೆ. ಜಮ್ಮು ಮತ್ತು ಕಾಶ್ಮೀರ ಭಾರತದಲ್ಲಿ ಅತಿದೊಡ್ಡ ವಾಲ್ನಟ್ ಉತ್ಪಾದಕ ರಾಜ್ಯ. ಸೇಬು ಮತ್ತು ಬಾರ್ಲಿಯನ್ನು ಸಹ ರಫ್ತು ಮಾಡುತ್ತದೆ. ಭಾರತದಲ್ಲಿ ಕೇಸರಿ ಉತ್ಪಾದಿಸುವ ಏಕೈಕ ರಾಜ್ಯ ಜಮ್ಮು-ಕಾಶ್ಮೀರ. ಕೃಷಿಗಾಗಿ ಜಮ್ಮು-ಕಾಶ್ಮೀರ 815 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. 2030ರ ವೇಳೆಗೆ ಕಾಶ್ಮೀರ 1 ಟ್ರಿಲಿಯನ್ ರೂಪಾಯಿ ಕೃಷಿ ಆರ್ಥಿಕತೆಯನ್ನು ನಿರ್ಮಿಸುವ ಗುರಿ ಹೊಂದಿದೆ.
ಆದಾಯಕ್ಕೆ ದೊಡ್ಡ ಪಾಲು ನೀಡುವ ಇನ್ನೊಂದು ವಲಯ ಪ್ರವಾಸೋದ್ಯಮ. ಪ್ರವಾಸೋದ್ಯಮದ ಪಾಲು ರಾಜ್ಯದ ಜಿಎಸ್‌ಡಿಪಿಯ ಶೇ. 8.47ಕ್ಕಿಂತ ಹೆಚ್ಚು. ಸುಮಾರು ಶೇ. 50ರಿಂದ ಶೇ. 60ರಷ್ಟು ಜನಸಂಖ್ಯೆ ಪ್ರವಾಸೋದ್ಯಮದಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ತೊಡಗಿಕೊಂಡಿದೆ. ಕೆಲವರು ಪ್ರವಾಸೋದ್ಯಮವನ್ನು ಕಾಶ್ಮೀರದ ಆರ್ಥಿಕತೆಯ ಬೆನ್ನೆಲುಬು ಎಂದು ಕರೆಯುತ್ತಾರೆ.
2018ರಲ್ಲಿ 1.6 ಕೋಟಿ ಪ್ರವಾಸಿಗರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದರು. ಕೋವಿಡ್ ಹೊತ್ತಿನಲ್ಲಿ ಪ್ರವಾಸೋದ್ಯಮ ಕುಸಿಯಿತು. 2022ರಲ್ಲಿ ಮತ್ತೆ ಪ್ರವಾಸಿಗರ ಸಂಖ್ಯೆ ಏರಿಕೆಯಾಗಿ, 1.8 ಕೋಟಿ ದಾಟಿತು.
2023ರಲ್ಲಿ ಇದು 2.11 ಕೋಟಿಯಾಯಿತು. 2024ರಲ್ಲಿ 2.35 ಕೋಟಿ ಮುಟ್ಟುವುದರೊಂದಿಗೆ ಸಾರ್ವಕಾಲಿಕ ಗರಿಷ್ಠ ಮಟ್ಟ ಕಂಡಿತು. ಕಳೆದ 3 ವರ್ಷಗಳಲ್ಲಿ ಪ್ರವಾಸೋದ್ಯಮ ಪ್ರತೀ ವರ್ಷ ಶೇ. 15ರಷ್ಟು ಏರಿಕೆಯಾಗಿದೆ. ವಿದೇಶಿ ಪ್ರವಾಸೋದ್ಯಮ ಸಹ ಪ್ರವರ್ಧಮಾನಕ್ಕೆ ಬರುತ್ತಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಅದು ಸುಮಾರು ಶೇ. 300ರಷ್ಟು ಏರಿಕೆ ಕಂಡಿದೆ. ಕಳೆದ 5 ವರ್ಷಗಳಲ್ಲಿ 350ಕ್ಕೂ ಹೆಚ್ಚು ಬಾಲಿವುಡ್ ಸಿನೆಮಾಗಳು ಮತ್ತು ವೆಬ್ ಸರಣಿಗಳನ್ನು ಇಲ್ಲಿ ಚಿತ್ರೀಕರಿಸಲಾಗಿದೆ. ಹೀಗಾಗಿ, ಜಮ್ಮು-ಕಾಶ್ಮೀರ ಸ್ವಾವಲಂಬಿಯಾಗಿ ನಿಲ್ಲುವಷ್ಟು ಮಟ್ಟದಲ್ಲಿ ಆರ್ಥಿಕವಾಗಿ ಬೆಳೆಯುತ್ತಿತ್ತು. ಆದರೆ ಆ ಭರವಸೆ ಈಗ ಮುರಿದುಬಿದ್ದಂತೆ ಕಾಣುತ್ತಿದೆ. ಈ ದಾಳಿ ಪ್ರವಾಸೋದ್ಯಮಕ್ಕೆ ದೊಡ್ಡ ಏಟು ಕೊಟ್ಟಿದೆ.
ಹೀಗಿರುವಾಗಲೇ ಹೊಸ ರಾಜಕೀಯವೊಂದು ಶುರುವಾಗಿದೆ.
ಅದು ಭಯೋತ್ಪಾದಕ ದಾಳಿಯನ್ನು ಮುಸ್ಲಿಮರ ವಿರುದ್ಧದ ದ್ವೇಷವಾಗಿ ತಿರುಗಿಸುವ ರಾಜಕೀಯ. ಪಹಲ್ಗಾಮ್ ದಾಳಿ ಬೆನ್ನಲ್ಲೇ ಬಿಜೆಪಿ ನಾಯಕರು ಆಡಿರುವ ಮಾತುಗಳು ಅವರ ಮನಃಸ್ಥಿತಿಯೇನು ಎಂಬುದನ್ನು ಹೇಳುತ್ತಿವೆ.
ದೇಶ ಹಿಂದೂ ಮತ್ತು ಮುಸ್ಲಿಮರ ಹೆಸರಿನಲ್ಲಿ ವಿಭಜನೆಯಾಗಿರುವಾಗ, ಕೇವಲ ಮತ ಬ್ಯಾಂಕ್‌ಗಾಗಿ ಅಲ್ಪಸಂಖ್ಯಾತರ ಹೆಸರಿನಲ್ಲಿ ಮುಸ್ಲಿಮರಿಗೆ ಹೆಚ್ಚಿನ ಹಕ್ಕುಗಳನ್ನು ನೀಡುವ ಮೂಲಕ ಹಿಂದೂಗಳನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ಮಾಡಿದವರು ಇಂದು ಪಹಲ್ಗಾಮ್ ಘಟನೆ ಧರ್ಮದ ಆಧಾರದ ಮೇಲೆ ನಡೆದಿದೆಯೇ ಅಥವಾ ಇಲ್ಲವೇ ಎಂದು ಹೇಳುತ್ತಾರೆಯೆ ಎಂದು ನಿಶಿಕಾಂತ್ ದುಬೆ ಪ್ರಶ್ನಿಸಿದ್ದಾರೆ.
ಜಾತ್ಯತೀತ ನಾಯಕರಿಗೆ ನಾಚಿಕೆಯಾಗಬೇಕು. ಪಾಕ್ ಆಕ್ರಮಿತ ಕಾಶ್ಮೀರ ನಮ್ಮದಾಗಲಿದೆ. ಸಂವಿಧಾನದ 26ರಿಂದ 29ರವರೆಗಿನ ಆರ್ಟಿಕಲ್ ಗಳನ್ನು ರದ್ದುಗೊಳಿಸುವ ಸಮಯ ಇದು ಎಂದು ದುಬೆ ಹೇಳಿದ್ದಾರೆ.
ಅಂದರೆ, ಅಲ್ಪಸಂಖ್ಯಾತರ ಹಿತಾಸಕ್ತಿಗಳನ್ನು ರಕ್ಷಿಸುವ ಯಾವುದೂ ಸಂವಿಧಾನದಲ್ಲಿ ಇರಕೂಡದು ಎಂದು ಈ ಬಿಜೆಪಿ ಸಂಸದ ಹೇಳುತ್ತಿದ್ದಾರೆ. ಅಲ್ಪಸಂಖ್ಯಾತರ ಎಲ್ಲಾ ಹಕ್ಕುಗಳು ಕೊನೆಗೊಳ್ಳಬೇಕು, ಅಲ್ಪಸಂಖ್ಯಾತರಿಗೆ ಯಾವುದೇ ರಕ್ಷಣೆ ಸಿಗಬಾರದು. ಮುಸ್ಲಿಮರು ಅದನ್ನು ಪಡೆಯಬಾರದು ಎನ್ನುತ್ತಿದ್ದಾರೆ. ದಾಳಿಯ ಹಿಂದಿರುವುದು ಪಾಕಿಸ್ತಾನವಾದರೂ, ಭಾರತೀಯ ಮುಸ್ಲಿಮರನ್ನು ಗುರಿ ಮಾಡಲಾಗುತ್ತಿರುವುದು ಬಿಜೆಪಿಯ ಅಜೆಂಡಾ ಏನು ಎಂಬುದನ್ನು ಹೇಳುತ್ತದೆ.
ಇನ್ನೊಂದೆಡೆ, ಬಿಜೆಪಿಯ ಮಾಜಿ ಸಂಸದ ಪ್ರತಾಪ ಸಿಂಹ, ಸ್ಥಳೀಯ ಮುಸ್ಲಿಮರ ನೆರವಿಲ್ಲದೆ ಇಂಥ ದಾಳಿ ನಡೆಯಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಅಂದರೆ, ದಾಳಿಯ ಹಿಂದೆ ಇಲ್ಲಿನ ಮುಸ್ಲಿಮರೇ ಇದ್ದಾರೆ ಎಂದು ನೇರವಾಗಿ ಆರೋಪಿಸುವಷ್ಟು ಕೆಳಮಟ್ಟಕ್ಕೆ ಇವರ ದ್ವೇಷ ರಾಜಕಾರಣ ಮುಟ್ಟಿದೆ.
ಹೀಗೆಲ್ಲ ನಡೆಯುತ್ತಿರುವಾಗ ಏಳುವ ಪ್ರಶ್ನೆಯೆಂದರೆ, ಭದ್ರತಾ ವೈಫಲ್ಯವನ್ನು ಮುಚ್ಚಿಹಾಕಲು ಬಿಜೆಪಿ ಇಂಥ ವಿಭಜನೆ ರಾಜಕಾರಣವನ್ನು ಮುಂದೆ ಮಾಡುತ್ತಿದೆಯೇ ಎಂಬುದು. ಪಹಲ್ಗಾಮ್ ದಾಳಿ ಭದ್ರತೆ ಮತ್ತು ಗುಪ್ತಚರ ವೈಫಲ್ಯದ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಅಷ್ಟೊಂದು ಜನ ಪ್ರವಾಸಿಗರು ಇದ್ದಾಗ ಅಲ್ಲಿ ಭದ್ರತೆ ಏಕಿರಲಿಲ್ಲ ಎಂಬ ಪ್ರಶ್ನೆ ಎದ್ದಿದೆ.
ದಾಳಿಯಲ್ಲಿ ಬಲಿಯಾದವರ ಕುಟುಂಬ ಸದಸ್ಯರು ನೇರವಾಗಿ ಮೋದಿ ಸರಕಾರವನ್ನು ಪ್ರಶ್ನಿಸುತ್ತಿದ್ದಾರೆ. ನೀವು ಯಾಕೆ ಅಲ್ಲಿ ಭದ್ರತಾ ವ್ಯವಸ್ಥೆ ಮಾಡಿರಲಿಲ್ಲ ಎಂದು ಕೇಳುತ್ತಿದ್ದಾರೆ.
ಸರ್ವಪಕ್ಷ ಸಭೆಯಲ್ಲಿ ಸರಕಾರ ಕೂಡ ಭದ್ರತಾ ಲೋಪ ಆಗಿದೆ ಎಂಬುದನ್ನು ಒಪ್ಪಿಕೊಂಡಿದೆ. ಪ್ರತಿಯೊಬ್ಬ ಉಗ್ರನನ್ನೂ ಹುಡುಕಿ ಹುಡುಕಿ ಶಿಕ್ಷಿಸುತ್ತೇವೆ ಎಂದು ಗುಡುಗಿದ್ದಾರೆ ಮೋದಿ. ಆದರೆ ಅದನ್ನು ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿ ಹೇಳದೆ ಬಿಹಾರದಲ್ಲಿ ಹೋಗಿ ಸಾರ್ವಜನಿಕ ಭಾಷಣದಲ್ಲಿ ಹೇಳಿದ್ದಾರೆ.
ಸದ್ಯದಲ್ಲೇ ಇರುವ ಬಿಹಾರ ಚುನಾವಣೆಯ ತಯಾರಿ ಹೊತ್ತಿನಲ್ಲಿನ ಬಿಜೆಪಿಯ ಈ ಅಬ್ಬರದ ಹೇಳಿಕೆ ಯಾವ ಉದ್ದೇಶದ್ಧಾಗಿದೆ ಎಂಬುದನ್ನು ಊಹಿಸುವುದು ಕಷ್ಟವೇನಲ್ಲ.