ಸರಕಾರಿ ಅಧಿಕಾರಿಗಳ ರಾಜೀನಾಮೆ ಪ್ರಕರಣಗಳ ಹಿಂದೆ-ಮುಂದೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವಮಾನಿಸಿದರೆಂಬ ಬೇಸರದಿಂದ ಸ್ವಯಂ ನಿವೃತ್ತಿ ಪಡೆಯಲು ಮುಂದಾಗಿದ್ದ ಧಾರವಾಡ ಎಎಸ್‌ಪಿ ನಾರಾಯಣ ಭರಮನಿ ಅವರ ಮನವೊಲಿಸಲು ಸರಕಾರ ಪ್ರಯತ್ನಿಸಿದೆ. ಸ್ವತಃ ಸಿದ್ದರಾಮಯ್ಯ ಅವರೇ ಮಾತನಾಡಿ ಸಮಾಧಾನಪಡಿಸಿದ ಬಳಿಕ ಭರಮನಿ, ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಆದರೂ ಸ್ವಯಂ ನಿವೃತ್ತಿ ಅರ್ಜಿ ವಾಪಸ್ ಪಡೆದಿಲ್ಲ, ಸರಕಾರದ ನಿರ್ಧಾರಕ್ಕಾಗಿ ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ. ಸರಕಾರ ಮತ್ತು ಅದರ ಭಾಗವಾಗಿಯೇ ಕೆಲಸ ಮಾಡುವ ಅಧಿಕಾರಿಗಳ ನಡುವೆ ಸಂಘರ್ಷದ ಸನ್ನಿವೇಶ ಬಹಳ ಸಂದರ್ಭಗಳಲ್ಲಿ ತಲೆದೋರುತ್ತದೆ. ಭರಮನಿ ಪ್ರಕರಣ ಭಿನ್ನವಾದುದು. ಆದರೂ ಅಧಿಕಾರಿಗಳು ಹೀಗೆ ಸರಕಾರದ ಜೊತೆ ಅಥವಾ ಸಿದ್ಧಾಂತದ ಜೊತೆಗಿನ ಸಂಘರ್ಷದ ಕಾರಣಕ್ಕೆ ಅಥವಾ ತಮ್ಮದೇ ಆದ ಯೋಜನೆಗಳ ಹಿನ್ನೆಲೆಯಲ್ಲಿ ಇದ್ದಕ್ಕಿದ್ದಂತೆ ರಾಜೀನಾಮೆ ನೀಡಿದ ಹಲವು ಉದಾಹರಣೆಗಳಿವೆ.
ತಮ್ಮ ವಿರುದ್ಧ ಮುಖ್ಯಮಂತ್ರಿ ಸಾರ್ವಜನಿಕ ಸಭೆಯಲ್ಲಿ ಕೈಯೆತ್ತಿ ಗದರಿಸಿದ್ದರಿಂದ ನೊಂದು ಸ್ವಯಂ ನಿವೃತ್ತಿಗೆ ಕೋರಿಕೆ ಸಲ್ಲಿಸಿದ್ದ ಧಾರವಾಡ ಎಎಸ್‌ಪಿ ನಾರಾಯಣ ಭರಮನಿ ಅವರನ್ನು ಸಿದ್ದರಾಮಯ್ಯನವರೇ ಕರೆ ಮಾಡಿ ಸಮಾಧಾನಪಡಿಸಿದ್ದಾರೆ. ಆದರೆ ಇನ್ನೊಂದು ವರದಿ ಪ್ರಕಾರ, ಭರಮನಿ ಕರ್ತವ್ಯಕ್ಕೆ ಹಾಜರಾಗಿದ್ದರೂ ಸ್ವಯಂ ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿದಿಲ್ಲ. ‘‘ಸರಕಾರದ ನಿರ್ಧಾರಕ್ಕಾಗಿ ಕಾಯುತ್ತಿದ್ದೇನೆ. ಸರಕಾರ ಮನವಿ ಅಂಗೀಕರಿಸಿದರೆ ಒಳ್ಳೆಯದು, ಇಲ್ಲದಿದ್ದರೆ ನನ್ನ ನಿರ್ಧಾರ ತೆಗೆದುಕೊಳ್ಳುತ್ತೇನೆ’’ ಎಂದು ಹೇಳಿದ್ದಾರೆ.
ಎ.28ರಂದು ಕೇಂದ್ರ ಸರಕಾರದ ಬೆಲೆ ಏರಿಕೆ ನೀತಿ ವಿರೋಧಿಸಿ ಬೆಳಗಾವಿಯಲ್ಲಿ ನಡೆದಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಈ ಪ್ರಸಂಗ ನಡೆದಿತ್ತು. ಕಾಂಗ್ರೆಸ್ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಬಿಜೆಪಿ ಕಾರ್ಯಕರ್ತರು ಅಡ್ಡಿಪಡಿಸಿದ್ದರು. ಸಿಎಂಗೆ ಕಪ್ಪುಬಾವುಟ ತೋರಿಸಲಾಗಿತ್ತು. ಅದರಿಂದ ಸಿದ್ದರಾಮಯ್ಯ ಕೋಪಗೊಂಡು ಪ್ರತಿಕ್ರಿಯಿಸಿದ್ದರು. ಭದ್ರತಾ ವ್ಯವಸ್ಥೆಗೆ ಸಂಬಂಧಿಸಿದಂತೆ ಅಸಮಾಧಾನಗೊಂಡು, ವೇದಿಕೆಯಲ್ಲೇ ಭರಮನಿ ಅವರಿಗೆ ಕೈ ಎತ್ತಿ ರೇಗಿದ್ದರು. ಈ ಘಟನೆ ಬಳಿಕ ಸ್ವಯಂ ನಿವೃತ್ತಿಗೆ ಅವರು ಕೋರಿಕೆ ಸಲ್ಲಿಸಿದ್ದರು ಮತ್ತು ಮುಖ್ಯಮಂತ್ರಿಗಳಿಂದಾದ ಅವಮಾನದಿಂದ ಮನನೊಂದು ಸ್ವಯಂ ನಿವೃತ್ತಿಗೆ ಮುಂದಾಗಿರುವುದಾಗಿ ಪತ್ರದಲ್ಲೇ ಹೇಳಿದ್ದರು.
ಅವರ ಭಾವುಕ ಪತ್ರ ತೀವ್ರ ಸಂಚಲನ ಮೂಡಿಸಿತ್ತು. ಉದ್ದಕ್ಕೂ ಉತ್ತಮವಾಗಿ ಕಾರ್ಯನಿರ್ವಹಿಸಿಕೊಂಡು ಬಂದವರು ಎಂಬ ಹೆಸರು ಹೊಂದಿರುವ ಭರಮನಿ ಅವರನ್ನು ಸರಕಾರ, ಅದರಲ್ಲೂ ಮುಖ್ಯಮಂತ್ರಿ ಅವಮಾನಿಸಿದ್ದಾರೆ ಎಂಬುದು ದೊಡ್ಡ ವಿಷಯವಾಯಿತು. ಮುಖ್ಯಮಂತ್ರಿ ಆವತ್ತು ಸಭೆಯಲ್ಲಿ ಕೈಯೆತ್ತಿದ್ದ ವರ್ತನೆಯೇ ತೀವ್ರ ಟೀಕೆಗೆ ಒಳಗಾಗಿದ್ದಾಗ, ಅದೇ ಕಾರಣಕ್ಕೆ ಭರಮನಿ ಪೊಲೀಸ್ ಇಲಾಖೆಯನ್ನೇ ಬಿಡಲು ಮುಂದಾದರು ಎನ್ನುವುದು ಸರಕಾರಕ್ಕೆ ದೊಡ್ಡ ಕಳಂಕವಾಗಿ ಅಂಟಿಕೊಳ್ಳುತ್ತಿತ್ತು. ಹಿರಿಯ ಅಧಿಕಾರಿಗಳು ಮನವೊಲಿಸುವ ಪ್ರಯತ್ನ ಮಾಡಿದರೂ ಪ್ರಯೋಜನವಾಗದೆ ಇದ್ದಾಗ, ಕಡೆಗೆ ಗೃಹಸಚಿವ ಪರಮೇಶ್ವರ್, ಬಳಿಕ ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಸಮಾಧಾನ ಹೇಳಲು ಮುಂದಾಗುವುದು ಅನಿವಾರ್ಯವಾಯಿತು. ಅನ್ಯಾಯವಾಗಿ ಪೊಲೀಸ್ ಅಧಿಕಾರಿ ಇಲಾಖೆಯನ್ನೇ ಬಿಡುವಂಥ ನಡತೆ ತೋರಿಸಲಾಯಿತೆಂಬ ಆರೋಪದಿಂದ ಸರಕಾರ ಸದ್ಯಕ್ಕೆ ಮುಕ್ತವಾದಂತಾಗಿದೆ. ಆದರೆ ಪ್ರಕರಣ ಇನ್ನೂ ಮುಗಿದಿಲ್ಲ.
ಹಲವು ಅಧಿಕಾರಿಗಳು, ಇನ್ನೂ ಸೇವೆಯಲ್ಲಿ ಇರಬೇಕಿತ್ತು ಎನ್ನುವ ಹಂತದಲ್ಲೇ ದಿಢೀರನೆ ರಾಜೀನಾಮೆ ಕೊಟ್ಟು ಹೊರಟುಹೋಗಿರುವ ಹಲವು ಪ್ರಕರಣಗಳಿವೆ. ಆದರೆ ಭರಮನಿ ಪ್ರಕರಣ ಭಿನ್ನವಾದುದಾಗಿದೆ. ಇದು ನನ್ನೊಬ್ಬನ ಅಳಲಲ್ಲ. ರಾಜ್ಯದ ಸಮವಸ್ತ್ರ ಧರಿಸುವ ಕೆಳಸ್ತರದ ಅಧಿಕಾರಿ ಸಿಬ್ಬಂದಿಯಷ್ಟೇ ಅಲ್ಲ, ಸಮಸ್ತ ಸರಕಾರಿ ನೌಕರರ ಅಳಲಾಗಿದೆ ಎಂದೂ ಅವರು ತಮ್ಮ ಪತ್ರದಲ್ಲಿ ಬರೆದಿದ್ದಾರೆ.
ಅಂದರೆ, ಒಬ್ಬ ಅಧಿಕಾರಿ ಅವಮಾನಕ್ಕೆ ತುತ್ತಾಗುವುದು, ಅವನ ಇಡೀ ಇಲಾಖೆಯ ಆತ್ಮಸ್ಥೈರ್ಯ ಕುಂದಿಸುತ್ತದೆ. ಅಷ್ಟೇ ಅಲ್ಲ, ವೈಯಕ್ತಿವಾಗಿ ಅದು ಆ ಅಧಿಕಾರಿಯ ಕುಟುಂಬದವರೆಗೂ ವ್ಯಾಪಿಸಿಕೊಳ್ಳುತ್ತದೆ. ಅದಕ್ಕಿಂತ ಹೆಚ್ಚಾಗಿ, ರಾಜಕಾರಣಿಗಳು ಅಧಿಕಾರಿಗಳನ್ನು ತಮ್ಮ ಕೈಕೆಳಗಿನವರು ಎಂದು ಭಾವಿಸುವ ಪ್ರವೃತ್ತಿಯೇ ಸೂಕ್ಷ್ಮತೆ ಇಲ್ಲದ್ದು. ಹಾಗಾಗಿ, ಈ ಸಂಘರ್ಷ ಬಹುಶಃ ಕೊನೆಯಿಲ್ಲದ್ದೇ ಆಗಿರುತ್ತದೆ.
ಇನ್ನು, ಈ ಹಿಂದೆ ಹಲವು ಅಧಿಕಾರಿಗಳು ಹಲವು ಸಂದರ್ಭಗಳಲ್ಲಿ ರಾಜೀನಾಮೆ ಕೊಟ್ಟರು. ಕೆಲವರಿಗೆ ಸಿದ್ಧಾಂತ ಮತ್ತೇನೋ ಬದ್ಧತೆಯಿದ್ದವು. ಮತ್ತೆ ಕೆಲವರಿಗೆ ವೈಯಕ್ತಿಕ ಮಹತ್ವಾಕಾಂಕ್ಷೆಗಳಿದ್ದವು. ಮತ್ತೆ ಕೆಲವರಿಗೆ ವ್ಯವಸ್ಥೆಯ ವಿರುದ್ದವೇ ಬಂಡೆದ್ದು ನಿಲ್ಲುವುದು ಮುಖ್ಯವಾಗಿ ಕಂಡು, ಅಂಥ ನಿಲುವು ತಾಳಿದ್ದಿತ್ತು. ಅಂಥ ಕೆಲವು ಪ್ರಕರಣಗಳನ್ನು ಇಲ್ಲಿ ಗಮನಿಸಬಹುದು.
ಸಸಿಕಾಂತ್ ಸೆಂಥಿಲ್ ಪ್ರಕರಣ :
ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ತಮ್ಮ ಹುದ್ದೆಗೆ ರಾಜೀನಾಮೆ ಕೊಡುವ ಹೊತ್ತಲ್ಲಿ ದಕ್ಷಿಣ ಕನ್ನಡ ಡಿಸಿಯಾಗಿದ್ದರು. ಐಎಎಸ್ ಅಧಿಕಾರಿಯಾಗಿ ದಕ್ಷತೆಗೆ ಹೆಸರಾಗಿದ್ದವರು ಸೆಂಥಿಲ್. ಇಂಜಿನಿಯರಿಂಗ್ ಪದವೀಧರರಾದ ತಮಿಳುನಾಡಿನ ದಲಿತ ಸಮುದಾಯದ ಸೆಂಥಿಲ್ ಯುಪಿಎಸ್‌ಸಿ ಪರೀಕ್ಷೆಯಲ್ಲಿ ದೇಶಕ್ಕೇ 9ನೇ ರ್ಯಾಂಕ್ ಪಡೆದವರು. 2009ರಲ್ಲಿ ಐಎಎಸ್‌ಗೆ ಆಯ್ಕೆಯಾದ ಅವರು ಹತ್ತು ವರ್ಷಗಳ ತಮ್ಮ ಸೇವಾವಧಿಯಲ್ಲಿ ಅತ್ಯಂತ ದಕ್ಷ, ಪ್ರಾಮಾಣಿಕ ಐಎಎಸ್ ಅಧಿಕಾರಿ ಎಂದು ಖ್ಯಾತಿ ಪಡೆದಿದ್ದರು. ಕರ್ನಾಟಕ ಕೇಡರ್ ಅಧಿಕಾರಿಯಾಗಿ ಬಳ್ಳಾರಿ, ಶಿವಮೊಗ್ಗ, ಚಿತ್ರದುರ್ಗ, ರಾಯಚೂರುಗಳಲ್ಲಿ ಅಸಿಸ್ಟಂಟ್ ಕಮಿಷನರ್, ಜಿಲ್ಲಾ ಪಂಚಾಯತ್ ಸಿಇಒ ಹಾಗೂ ಜಿಲ್ಲಾಧಿಕಾರಿಗಳಾಗಿ ಕೆಲಸ ಮಾಡಿ ಅಪಾರ ಜನಮನ್ನಣೆ ಗಳಿಸಿದ್ದರು.
2017ರ ಅಕ್ಟೋಬರ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ಬಂದು ಜಿಲ್ಲೆಯಲ್ಲಿ ಸುಮಾರು ಎರಡು ವರ್ಷಗಳ ತಮ್ಮ ಸೇವಾವಧಿಯಲ್ಲಿ ಸೆಂಥಿಲ್ ಜನಪರ, ದಕ್ಷ ಹಾಗೂ ನೇರ ನಡೆ ನುಡಿಯ ಡಿಸಿಯಾಗಿ ಜನಪ್ರಿಯತೆ ಗಳಿಸಿದ್ದರು. ಅವರು ದಿಢೀರನೇ ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟು ಬೀದಿ ಹೋರಾಟಕ್ಕೆ ಇಳಿಯುವರೆಂದು ಯಾರೂ ಊಹಿಸಿರಲಿಲ್ಲ.
2019ರ ಆಗಸ್ಟ್ ನರೇಂದ್ರ ಮೋದಿ ಸರಕಾರ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದುಪಡಿಸಿತು. ಜೊತೆಗೆ ಕಾಶ್ಮೀರದ ರಾಜ್ಯ ಸ್ಥಾನಮಾನವನ್ನೂ ಕಿತ್ತುಕೊಂಡಿತು. ಅಲ್ಲಿನ ಬಹುತೇಕ ಎಲ್ಲ ರಾಜಕೀಯ ನಾಯಕರನ್ನು ಗೃಹ ಬಂಧನದಲ್ಲಿಟ್ಟಿತು. ಸೆಪ್ಟಂಬರ್ ತಿಂಗಳಲ್ಲಿ ಮಂಗಳೂರಿನಿಂದ ದಿಢೀರನೆ ಒಂದು ಸುದ್ದಿ ಬಂತು. ಅದು ಕ್ಷಣಮಾತ್ರದಲ್ಲಿ ಇಡೀ ದೇಶದಲ್ಲಿ ಚರ್ಚೆಯಾಯಿತು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಇನ್ನೂ ಎರಡು ದಶಕಗಳ ಸೇವಾವಧಿ ಇರುವಾಗಲೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ‘‘ನಮ್ಮ ದೇಶದ ಬಹುತ್ವದ, ಪ್ರಜಾಪ್ರಭುತ್ವದ ಬುನಾದಿಯನ್ನೇ ಅಲುಗಾಡಿಸುವಂತಹ ಆಘಾತಕಾರಿ ಬೆಳವಣಿಗೆಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ನಮ್ಮ ದೇಶದ ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ದೊಡ್ಡ ಸವಾಲುಗಳು ಎದುರಾಗಲಿವೆ. ಹಾಗಾಗಿ ನಾನು ಇನ್ನು ಐಎಎಸ್‌ನಲ್ಲಿ ಮುಂದುವರಿಯುವುದು ನೈತಿಕವಲ್ಲ, ನಾನು ಇದರ ಹೊರಗಿದ್ದು ಹೋರಾಡುತ್ತೇನೆ’’ ಎಂದು ಹೇಳಿ ಸೆಂಥಿಲ್ ರಾಜೀನಾಮೆ ಕೊಟ್ಟಿದ್ದರು.
ರಾಜೀನಾಮೆ ಕೊಟ್ಟವರೇ ಮಂಗಳೂರು, ಬೆಂಗಳೂರು ಸಹಿತ ರಾಜ್ಯದ ಎಲ್ಲೆಡೆ ಸಾಮಾನ್ಯ ಆಕ್ಟಿವಿಸ್ಟ್ ಆಗಿ ಓಡಾಡಿದರು. ಅಲ್ಲಿಂದ ಸೆಂಥಿಲ್ ಬಿಜೆಪಿ, ಸಂಘ ಪರಿವಾರದ ವಿಭಜನಕಾರಿ ವಿಚಾರಧಾರೆ ವಿರುದ್ಧ ಮಾತನಾಡುತ್ತಾ, ಸಂವಿಧಾನದ ಆಶಯಗಳನ್ನು ಪ್ರಚಾರ ಮಾಡುತ್ತಾ ಜನರನ್ನು ಸಂಘಟಿಸುತ್ತಾ ಕರ್ನಾಟಕ ಮಾತ್ರವಲ್ಲ ದೇಶಾದ್ಯಂತ ಓಡಾಡಿದರು. ಕೊನೆಗೆ ಕಾಂಗ್ರೆಸ್ ಸೇರಿದರು. ರಾಹುಲ್ ಗಾಂಧಿಯ ಭಾರತ ಜೋಡೊ ಯಾತ್ರಾ, ಕರ್ನಾಟಕ ವಿಧಾನ ಸಭಾ ಚುನಾವಣೆಗಳಲ್ಲಿ ಮಹತ್ವದ ಪಾತ್ರ ವಹಿಸಿದರು. ಲೋಕಸಭಾ ಚುನಾವಣೆಗೂ ಕಾಂಗ್ರೆಸ್‌ನ ರಾಷ್ಟ್ರೀಯ ವಾರ್ ರೂಮ್ ಮುಖ್ಯಸ್ಥರಾಗಿ ದಿಲ್ಲಿಯಲ್ಲಿ ನಿಂತರು. ಚುನಾವಣೆ ಘೋಷಣೆಯಾಗಿ ತಮಿಳುನಾಡಿನಲ್ಲಿ ಮೊದಲ ಹಂತದಲ್ಲೇ ಮತದಾನ ಎಂದು ದಿನಾಂಕ ಪ್ರಕಟವಾಯಿತು. ಮತದಾನಕ್ಕೆ ಇಪ್ಪತ್ತು ದಿನಗಳಿರುವಾಗ ಕಾಂಗ್ರೆಸ್ ಹೈಕಮಾಂಡ್ ತಮಿಳುನಾಡಿನ ತಿರುವಳ್ಳೂರು ಮೀಸಲು ಕ್ಷೇತ್ರಕ್ಕೆ ಸಸಿಕಾಂತ್ ಸೆಂಥಿಲ್ ಅವರೇ ಅಭ್ಯರ್ಥಿ ಎಂದು ಘೋಷಿಸಿಬಿಟ್ಟಿತು. ಎರಡೇ ವಾರ ಪ್ರಚಾರ ಮಾಡಿದ ಸೆಂಥಿಲ್ 5,72,165 ಮತಗಳ ಭಾರೀ ಅಂತರದ ಪ್ರಚಂಡ ಗೆಲುವು ಸಾಧಿಸಿದರು. ದೇಶದಲ್ಲೇ ಅತಿ ಹೆಚ್ಚು ಅಂತರದ ಗೆಲುವುಗಳ ಪಟ್ಟಿಯಲ್ಲಿ ಸೆಂಥಿಲ್ ಅವರ ಗೆಲುವು ಕೂಡ ಜಾಗ ಪಡೆಯಿತು.
ಹೀಗೆ, ಕೋಮುವಾದದ ವಿರುದ್ಧದ ಹೋರಾಟಕ್ಕಾಗಿ, ಸಂವಿಧಾನದ ಪರ ಆಂದೋಲನಕ್ಕಾಗಿ ಪ್ರತಿಷ್ಠಿತ ಐಎಎಸ್ ಹುದ್ದೆಯನ್ನೇ ಬಿಟ್ಟು ಹೋದ ಸೆಂಥಿಲ್ ಇವತ್ತು ಕಾಂಗ್ರೆಸ್ ಸಂಸದರಾಗಿದ್ದಾರೆ.
ಅನುಪಮಾ ಶೆಣೈ ಪ್ರಕರಣ :
ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ರಾಜೀನಾಮೆ ಪ್ರಕರಣ 2016ರಲ್ಲಿನದು. 2016ರಲ್ಲಿ ಸಿದ್ದರಾಮಯ್ಯನವರ ಮೊದಲ ಅವಧಿಯ ಸರಕಾರವಿದ್ದಾಗ ಅನುಪಮಾ ಶೆಣೈ ಕೂಡ್ಲಿಗಿ ಡಿವೈಎಸ್‌ಪಿಯಾಗಿದ್ದರು. ಅನುಪಮಾ ಶೆಣೈ ಹಾಗೂ ಅಂದಿನ ಹೂವಿನಹಡಗಲಿ ಶಾಸಕ ಮತ್ತು ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ್ ನಾಯಕ್ ನಡುವೆ ಭಿನ್ನಮತ ತಲೆದೋರಿತ್ತು. ತನ್ನ ಫೋನ್ ಕಾಲ್ ಅನ್ನು ರಿಸೀವ್ ಮಾಡಲು ತಡ ಮಾಡಿದರು ಎಂಬ ಕಾರಣಕ್ಕೆ ಸಚಿವ ಪಿ.ಟಿ. ಪರಮೇಶ್ವರ್ ಅವರು ಅನುಪಮಾ ಶೆಣೈ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರೆಂದು ಹೇಳಲಾಗಿತ್ತು. ಇದಕ್ಕೆ ಪ್ರತಿಯಾಗಿ ಶೆಣೈ ಕೂಡ ಕಿಡಿಕಾರಿದ್ದರು. ಇಬ್ಬರ ನಡುವಿನ ಆರೋಪ, ಪ್ರತ್ಯಾರೋಪ ವಾರಗಟ್ಟಲೆ ನಡೆದಿತ್ತು. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿಯೂ ಅನುಪಮಾ ಶೆಣೈ ಅವರು ಪರಮೇಶ್ವರ್ ಅವರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರಿಂದ, ಸಾರ್ವಜನಿಕ ವಲಯಗಳಲ್ಲಿಯೂ ಅದು ಭಾರೀ ಚರ್ಚೆಗೆ ಎಡೆ ಮಾಡಿಕೊಟ್ಟಿತ್ತು. ಕಡೆಗೆ ಅನುಪಮಾ ಶೆಣೈ ರಾಜೀನಾಮೆ ಕೊಟ್ಟಿದ್ದರು.
ದಾರಿ ವಿವಾದ ಪ್ರಕರಣವೊಂದರಲ್ಲಿ ದಲಿತರ ಪರ ನಿಂತಿದ್ದು ಹಾಗೂ ಮದ್ಯದ ಲಾಬಿಗೆ ಮಣಿಯದೇ ಇದ್ದುದು ಶೆಣೈ ರಾಜೀನಾಮೆ ಹಿಂದೆ ಕೆಲಸ ಮಾಡಿವೆ ಎನ್ನಲಾಗಿತ್ತು. ಸಚಿವರು ಹಾಗೂ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳೆಲ್ಲ ಶೆಣೈ ರಾಜೀನಾಮೆ ನೀಡಬೇಕಾದ ಸ್ಥಿತಿ ತಂದಿಟ್ಟರು ಎಂಬ ಮಾತುಗಳೇ ಕೇಳಿಬಂದಿದ್ದವು.
ಇದಾದ ಬಳಿಕ ಅವರು 2017ರಲ್ಲಿ ಮೋದಿಯವರಿಗೆ ಪತ್ರ ಬರೆದು, ಮೂರು ಪ್ರಕರಣಗಳನ್ನು ಸಿಬಿಐಗೆ ವಹಿಸಲು ಒತ್ತಾಯಿಸಿದ ವಿಷಯ ಸುದ್ದಿಯಾಗಿತ್ತು. ಸಿಎಂ ಸಿದ್ದರಾಮಯ್ಯ ಹ್ಯೂಬ್ಲೋ ವಾಚ್ ಪ್ರಕರಣ, ಜೋಗ ಜಲಪಾತವನ್ನು ಖಾಸಗಿಯವರಿಗೆ ವಹಿಸಿದ್ದು ಮತ್ತು ಉಡುಪಿ ಸರಕಾರಿ ಆಸ್ಪತ್ರೆಯನ್ನು ಉದ್ಯಮಿ ಬಿ.ಆರ್. ಶೆಟ್ಟಿಗೆ ಮಾರಿದ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿ ಅವರು ಪ್ರಧಾನಿಗೆ ಪತ್ರ ಬರೆದಿದ್ದರು. ಪ್ರಧಾನಿಯವರಿಂದ ತಮ್ಮ ಪತ್ರಕ್ಕೆ ಪ್ರತಿಕ್ರಿಯೆ ಬಂದಿದ್ದನ್ನು ಮಾಧ್ಯಮಗಳ ಮುಂದೆ ಹೇಳುವಾಗ ಅವರು, ರಾಜ್ಯ ಪೊಲೀಸರನ್ನು ರಾಜಕಾರಣಿಗಳು ಪೀಡಿಸುತ್ತಿರುವುದನ್ನು ನೆನೆದು ಕಣ್ಣೀರಿಟ್ಟದ್ದು ದೊಡ್ಡ ಸುದ್ದಿಯಾಗಿತ್ತು. ಕಲ್ಲಪ್ಪ ಹಂಡಿಭಾಗ್ ಮತ್ತು ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆಯ ಬಗ್ಗೆಯೂ ಅವರು ಆ ವೇಳೆ ಆಕ್ರೋಶದಿಂದ ಮಾತನಾಡಿದ್ದರು.
2017ರಲ್ಲಿ ಅನುಪಮಾ ಅವರು ಭಾರತೀಯ ಜನಶಕ್ತಿ ಕಾಂಗ್ರೆಸ್ ಎಂಬ ಪಕ್ಷವನ್ನು ಕಟ್ಟಿದ್ದರು. ಆದರೆ ಅದರಲ್ಲಿ ಅವರಿಗೆ ಯಾವುದೇ ಯಶಸ್ಸು ಸಿಗಲಿಲ್ಲ.