×
Ad

ಆಕ್ಸಿಯಮ್ 4 ಮಿಷನ್ ಭಾರತಕ್ಕೆ ಮಹತ್ವದ ಹೆಜ್ಜೆಯಾಗಲಿದೆಯೇ?

ಇಸ್ರೋದ ಆರಂಭಿಕ ಕಾರ್ಯಾಚರಣೆಗಳು ಮತ್ತು ತಾಂತ್ರಿಕ ಪ್ರಗತಿಗಳನ್ನು ನೋಡುವುದಾದರೆ...

Update: 2025-07-02 12:14 IST

ಭಾಗ - 2

ಆರ್ಯಭಟ ಉಡಾವಣೆ -1975

ಇದು ಉಪಗ್ರಹ ತಂತ್ರಜ್ಞಾನದಲ್ಲಿ ಭಾರತದ ಸಾಮರ್ಥ್ಯಗಳನ್ನು ಪ್ರದರ್ಶಿಸಿದ ಗಮನಾರ್ಹ ಸಾಧನೆ. ಆರ್ಯಭಟ ಭಾರತದ ಮೊದಲ ಉಪಗ್ರಹವಾಗಿದ್ದು, ಅದರ ಯಶಸ್ವಿ ಉಡಾವಣೆ ದೇಶದ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಒಂದು ದೊಡ್ಡ ಜಿಗಿತವಾಗಿ ದಾಖಲಾಯಿತು. ಇದು ಸ್ಥಳೀಯ ಉಪಗ್ರಹ ತಂತ್ರಜ್ಞಾನ ನಿರ್ಮಾಣ ಮತ್ತು ಬಾಹ್ಯಾಕಾಶ ಪರಿಶೋಧನೆಯ ಪ್ರಗತಿಗೆ ಅಡಿಪಾಯ ಹಾಕಿತು. ವರ್ಧಿತ ಉಪಗ್ರಹ ಉಡಾವಣಾ ವಾಹನ (ASLV) ಕಾರ್ಯಕ್ರಮದೊಂದಿಗೆ ಮತ್ತಷ್ಟು ಎತ್ತರ ಕಾಣಲಾಯಿತು.

ಇದರೊಂದಿಗೆ, ತಾಂತ್ರಿಕ ಹಿನ್ನಡೆಗಳನ್ನು ನಿವಾರಿಸುವ ನಿಟ್ಟಿನ ತನ್ನ ಅಚಲತೆಯನ್ನು ಇಸ್ರೋ ತೋರಿಸಿತು. ಭಾರತೀಯ ರಾಷ್ಟ್ರೀಯ ಉಪಗ್ರಹ (INSAT) ಮತ್ತು ಭಾರತೀಯ ರಿಮೋಟ್ ಸೆನ್ಸಿಂಗ್ (IRS) ಉಪಗ್ರಹ ವ್ಯವಸ್ಥೆಗಳ ಉಡಾವಣೆ ಬಾಹ್ಯಾಕಾಶ ತಂತ್ರಜ್ಞಾನದ ಪ್ರಾಯೋಗಿಕ ಉಪಯುಕ್ತತೆ ಬಗ್ಗೆ ಗಮನ ಕೊಡಲು ನೆರವಾಯಿತು. ದೂರಸಂಪರ್ಕ, ಪ್ರಸಾರ ಮತ್ತು ಹವಾಮಾನಶಾಸ್ತ್ರಕ್ಕೆ ಸೇವೆ ಸಲ್ಲಿಸುವ ಉಪಗ್ರಹಗಳು ಗ್ರಾಮೀಣ ಮತ್ತು ನಗರ ಪ್ರದೇಶಗಳನ್ನು ಸಂಪರ್ಕಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವು. ಉಪಗ್ರಹಗಳು ಅತ್ಯಂತ ದೂರದ ಹಳ್ಳಿಗಳಿಗೆ ಶೈಕ್ಷಣಿಕ ವಿಷಯವನ್ನು ಮುಟ್ಟಿಸಿದವು. ವಿಪತ್ತುಗಳನ್ನು ಎದುರಿಸುವುದಕ್ಕೆ ಸಿದ್ಧವಾಗಲು ಹವಾಮಾನ ಪರಿಸ್ಥಿತಿಗಳ ಉತ್ತಮ ಮೇಲ್ವಿಚಾರಣೆ ಸಾಧ್ಯವಾಯಿತು. ಸೀಮಿತ ಆರೋಗ್ಯ ಸೌಲಭ್ಯಗಳಿರುವ ಪ್ರದೇಶಗಳಿಗೆ ಟೆಲಿಮೆಡಿಸಿನ್ ವ್ಯವಸ್ಥೆ ಸಾಧ್ಯವಾಯಿತು. ಸಾಮಾಜಿಕ-ಆರ್ಥಿಕ ಅಭಿವೃದ್ಧಿಗಾಗಿ ಉಪಗ್ರಹಗಳ ಮೇಲಿನ ಆರಂಭಿಕ ಒತ್ತು, ಡಾ. ವಿಕ್ರಮ್ ಸಾರಾಭಾಯ್ ಹೊಂದಿದ್ದ ದೃಷ್ಟಿಕೋನದ ನೆರವೇರಿಕೆಯ ಭಾಗವಾಗಿತ್ತು. ಕೃಷಿ ಮತ್ತು ಕೈಗಾರಿಕಾ ಅಭಿವೃದ್ಧಿಯ ನಮ್ಮ ತುರ್ತು ಸಮಸ್ಯೆಗಳ ಪರಿಹಾರಕ್ಕೆ ಪ್ರಮುಖ ಆದ್ಯತೆಯನ್ನು ನೀಡಬೇಕು ಎಂಬುದು ಸಾರಾಭಾಯ್ ಹಂಬಲವಾಗಿತ್ತು. ನಂತರದ ಪ್ರತಿಯೊಂದು ಕಾರ್ಯಾಚರಣೆಯೂ ಉಡಾವಣಾ ತಂತ್ರಜ್ಞಾನ ಕರಗತ ಮಾಡಿಕೊಳ್ಳುತ್ತಲೇ ಕೃಷಿ, ಸಂಪನ್ಮೂಲ ನಿರ್ವಹಣೆ ಮತ್ತು ಹವಾಮಾನ ಮೇಲ್ವಿಚಾರಣೆಯನ್ನು ಬೆಂಬಲಿಸುವ ಉಪಗ್ರಹಗಳ ವಿನ್ಯಾಸ ಮತ್ತು ನಿಯೋಜನೆವರೆಗೆ ಬೆಳೆಯುವ ದಾರಿಯಾಯಿತು. ಇವು ತಾಂತ್ರಿಕ ಮೈಲಿಗಲ್ಲುಗಳು ಮಾತ್ರವಾಗಿರದೆ, ರಾಷ್ಟ್ರೀಯ ಅಭಿವೃದ್ಧಿಗಾಗಿ ಬಾಹ್ಯಾಕಾಶ ತಂತ್ರಜ್ಞಾನವನ್ನು ಬಳಸುವಲ್ಲಿ ಇಸ್ರೋದ ಪ್ರಯತ್ನವನ್ನು ಕಾಣಿಸುತ್ತವೆ.

ಇಸ್ರೋದ ಗಮನಾರ್ಹ ಸಾಧನೆಗಳಲ್ಲಿ ಚಂದ್ರಯಾನ ಮತ್ತು ಮಂಗಳಯಾನ ಸೇರಿವೆ. 2008ರಲ್ಲಿ ಉಡಾವಣೆಯಾದ ಚಂದ್ರಯಾನ-1 ಬಾಹ್ಯಾಕಾಶ ಯಾನ ಭಾರತದ ಬಾಹ್ಯಾಕಾಶ ಪರಿಶೋಧನೆಯಲ್ಲಿ ಪ್ರಮುಖ ಮೈಲಿಗಲ್ಲು. ಚಂದ್ರಯಾನ-1, ಚಂದ್ರನ ಮೇಲ್ಮೈಯನ್ನು ನಕ್ಷೆ ಮಾಡುವ ಧ್ಯೇಯ ಹೊಂದಿತ್ತು. ಅದು ಚಂದ್ರನ ಮೇಲೆ ನೀರಿನ ಅಣುಗಳ ಉಪಸ್ಥಿತಿಯನ್ನು ಕಂಡುಕೊಂಡಿತು. ಈ ಗಣನೀಯ ವೈಜ್ಞಾನಿಕ ಮೌಲ್ಯದ ಮಿಷನ್ ನೊಂದಿಗೆ ಭಾರತ ಪ್ರಮುಖ ಬಾಹ್ಯಾಕಾಶ ಸಾಧನೆ ಮಾಡಿದ ದೇಶಗಳಲ್ಲಿ ಒಂದಾಯಿತು.

ಚಂದ್ರಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ಇಸ್ರೋ ಮಂಗಳ ಗ್ರಹದ ಕಡೆ ದೃಷ್ಟಿ ಹರಿಸಿತು. ಮೊದಲ ಮಾರ್ಸ್ ಆರ್ಬಿಟರ್ ಮಿಷನ್ ಅಡಿಯಲ್ಲಿ ಮಹತ್ವಾಕಾಂಕ್ಷೆಯ ಜಿಗಿತ ಕಂಡಿತು. ಮಂಗಳಯಾನ 2013ರಲ್ಲಿ ಉಡಾವಣೆಗೊಂಡಿತು. ಇದರೊಂದಿಗೆ ಭಾರತ, ಒಂದೇ ಪ್ರಯತ್ನದಲ್ಲಿ ಮಂಗಳ ಗ್ರಹದಲ್ಲಿ ಯಶಸ್ವಿಯಾಗಿ ಇಳಿದ ಏಶ್ಯದ ಮೊದಲ ದೇಶವಾಯಿತು. ವಿಶ್ವಾದ್ಯಂತ ಭಾರತದ ವೈಜ್ಞಾನಿಕ ಉದ್ದೇಶಗಳು ಪ್ರಶಂಸೆಗೆ ಪಾತ್ರವಾದವು.

ಮಂಗಳಯಾನ ಬಹುಶಃ ಇದುವರೆಗಿನ ಅತ್ಯಂತ ಕಡಿಮೆ ವೆಚ್ಚದ ಅಂತರಗ್ರಹ ನೌಕೆಯಾಗಿತ್ತು. ಅದರ ಅಂದಾಜು ಬಜೆಟ್ ಸುಮಾರು 74 ಮಿಲಿಯನ್ ಡಾಲರ್ ಆಗಿತ್ತು. ಅದು ಇಸ್ರೋದ ಸಂಪನ್ಮೂಲ ಮತ್ತು ನಾವೀನ್ಯತೆಯಲ್ಲಿನ ಪರಿಣತಿಯ ಸಂಕೇತವಾಗಿ ಗಮನ ಸೆಳೆಯಿತು. ಈ ಮಿಷನ್ ಮಂಗಳ ಗ್ರಹದ ವಾತಾವರಣ ಮತ್ತು ಮೇಲ್ಮೈಯಿಂದ ಅಮೂಲ್ಯವಾದ ಡೇಟಾವನ್ನು ಸೆರೆಹಿಡಿಯಿತು. ಜಾಗತಿಕ ಬಾಹ್ಯಾಕಾಶ ಸಮುದಾಯದಲ್ಲಿ ಭಾರತದ ಸ್ಥಾನ ಮತ್ತಷ್ಟು ಗಟ್ಟಿಯಾಯಿತು.

ಚಂದ್ರಯಾನ-2 ವಿಫಲವಾಯಿತಾದರೂ, ಚಂದ್ರಯಾನ-3ರ ಯಶಸ್ಸಿನೊಂದಿಗೆ ಇಸ್ರೋ ಸಾಧನೆ ಮತ್ತೆ ಬೆಳಗಿತು. ಚಂದ್ರಯಾನ-2 ಅನ್ನು ಜುಲೈ 22, 2019ರಂದು ಉಡಾವಣೆ ಮಾಡಲಾಯಿತು. ಆದರೆ ಚಂದ್ರನ ಮೇಲ್ಮೈಯಿಂದ ಸುಮಾರು 2.1 ಕಿ.ಮೀ. ದೂರದಲ್ಲಿ ಸಿಗ್ನಲ್ ಸಂಪರ್ಕ ಕಳೆದುಹೋಯಿತು. ಹಲವಾರು ತಿಂಗಳುಗಳ ಕಾಲ ತಂಡ ಲ್ಯಾಂಡರ್‌ನೊಂದಿಗೆ ಸಂಪರ್ಕ ಪುನರಾರಂಭಿಸಲು ಪ್ರಯತ್ನಿಸಿತು. ಆದರೆ ಯಾವುದೇ ಯಶಸ್ಸನ್ನು ಪಡೆಯಲಿಲ್ಲ. ಅಲ್ಲಿನ ವಿಫಲತೆಯನ್ನೆಲ್ಲ ಸರಿಪಡಿಸಿಕೊಂಡು, ಬಳಿಕ ಚಂದ್ರಯಾನ-3ರಲ್ಲಿ ಯಶಸ್ಸು ಸಾಧಿಸಲಾಯಿತು.

ಇನ್ನು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತದ 75 ವರ್ಷಗಳ ಹಾದಿಯ ಕಡೆಗೊಮ್ಮೆ ನೋಡಬೇಕು. ಮೊದಲ ಕೆಲವು ದಶಕಗಳಲ್ಲಿ, ದೇಶಾದ್ಯಂತ ಶೈಕ್ಷಣಿಕ ಸಂಸ್ಥೆಗಳು, ಪ್ರಯೋಗಾಲಯಗಳು ಮತ್ತು ಸಂಶೋಧನಾ ಕೇಂದ್ರಗಳನ್ನು ನಿರ್ಮಿಸುವ ಕೆಲಸವಾಯಿತು. ದೇಶದಲ್ಲಿ ಸಂಶೋಧನೆಗೆ ನಿರ್ದೇಶನ ನೀಡಲು ಹಲವಾರು ಸರಕಾರಿ ಸಂಸ್ಥೆಗಳನ್ನು ಸಹ ಸ್ಥಾಪಿಸಲಾಯಿತು.

1942-ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (CSIR)

1954 -ಪರಮಾಣು ಶಕ್ತಿ ಇಲಾಖೆ (DAE)

1958 -ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO)

1971 -ಇಲೆಕ್ಟ್ರಾನಿಕ್ಸ್ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗಳು

1972 -ಬಾಹ್ಯಾಕಾಶ ಇಲಾಖೆ

1980 -ಪರಿಸರ ಇಲಾಖೆ

ಇದರ ಜೊತೆಗೆ, 1976ರಲ್ಲಿ ಮತ್ತೊಂದು ನಿರ್ಣಾಯಕ ಹೆಜ್ಜೆ ಇಡಲಾಯಿತು. ಭಾರತ ತನ್ನ ಸಂವಿಧಾನದಲ್ಲಿ ವೈಜ್ಞಾನಿಕ ಮನೋಭಾವ ಅಳವಡಿಸಿಕೊಂಡಿತು. ವೈಜ್ಞಾನಿಕ ಮನೋಭಾವ, ಮಾನವತಾವಾದ ಮತ್ತು ವಿಚಾರಣಾ ಮನೋಭಾವದ ಅಭಿವೃದ್ಧಿ ಪ್ರತಿಯೊಬ್ಬ ಭಾರತೀಯ ನಾಗರಿಕನ ಕರ್ತವ್ಯವೆಂದು ಘೋಷಿಸಿತು.

1976ರ ಹೊತ್ತಿಗೆ ಭಾರತ ಸ್ವಾವಲಂಬನೆಯಲ್ಲಿ ಎರಡು ಪ್ರಮುಖ ಮೈಲಿಗಲ್ಲುಗಳನ್ನು ಸಾಧಿಸಿತು. ಅವೆಂದರೆ, ಹಸಿರು ಕ್ರಾಂತಿ ಮತ್ತು ಶ್ವೇತ ಕ್ರಾಂತಿ. 1960ರ ದಶಕದಲ್ಲಿ, ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಹೆಚ್ಚಿನ ಇಳುವರಿ ನೀಡುವ ಗೋಧಿ ಪ್ರಭೇದಗಳ ಕುರಿತಾದ ಸಂಶೋಧನೆ ನಡೆಯಿತು. ಇದು ಭಾರತ ತನ್ನ ಗೋಧಿ ಮತ್ತು ಅಕ್ಕಿ ಉತ್ಪಾದನೆಯನ್ನು ಗಮನಾರ್ಹವಾಗಿ ಹೆಚ್ಚಿಸಲು ನೆರವಾಯಿತು. ಅದೇ ಸಮಯದಲ್ಲಿ, ಗುಜರಾತ್‌ನ ಆನಂದ್‌ನಲ್ಲಿರುವ ಡಾ. ವರ್ಗೀಸ್ ಕುರಿಯನ್ ಮತ್ತವರ ತಂಡ ಹಾಲಿನ ಉದ್ಯಮದಲ್ಲಿ ಕ್ರಾಂತಿ ಮಾಡಿತು. ವಿಶ್ವದಲ್ಲಿ ಮೊದಲ ಬಾರಿಗೆ ಎಮ್ಮೆ ಹಾಲನ್ನು ಹಾಲಿನ ಪುಡಿಯಾಗಿ ಸಂಸ್ಕರಿಸಬಹುದು ಮತ್ತು ಸಂಗ್ರಹಿಸಬಹುದು ಎಂದು ಸಾಬೀತುಪಡಿಸುವ ಮೂಲಕ ಹಾಲಿನ ಆಮದಿನ ಅಗತ್ಯವನ್ನು ಇಲ್ಲವಾಗಿಸಿತು. ಯಾವುದೇ ಹಾಲು ವ್ಯರ್ಥವಾಗದಂತೆ ನೋಡಿಕೊಳ್ಳುವ ರಾಷ್ಟ್ರವ್ಯಾಪಿ ಡೈರಿ ಸಹಕಾರಿ ಸಂಘಗಳನ್ನು ರಚಿಸುವಲ್ಲಿ ಡಾ. ಕುರಿಯನ್ ಪ್ರಮುಖ ಪಾತ್ರ ವಹಿಸಿದರು.

ಇದರ ನಂತರ 1980 ರ ದಶಕದ ಉತ್ತರಾರ್ಧದಲ್ಲಿ ಹಳದಿ ಕ್ರಾಂತಿ ಮತ್ತು ನೀಲಿ ಕ್ರಾಂತಿ ನಡೆದವು. ಇದು ಖಾದ್ಯ ಎಣ್ಣೆಕಾಳುಗಳ ಉತ್ಪಾದನೆಯನ್ನು ಹೆಚ್ಚಿಸಿತು ಮತ್ತು ಭಾರತವನ್ನು ಕ್ರಮವಾಗಿ ಎರಡನೇ ಅತಿದೊಡ್ಡ ಮೀನು ಉತ್ಪಾದಿಸುವ ದೇಶವನ್ನಾಗಿ ಮಾಡಿತು. 1990ರ ದಶಕದಲ್ಲಿ ಸುವರ್ಣ ಕ್ರಾಂತಿ ಬಂತು. ಇದು ಜೇನುತುಪ್ಪ ಮತ್ತು ತೋಟಗಾರಿಕಾ ಉತ್ಪಾದನೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿತ್ತು.

ಹಸಿರು ಕ್ರಾಂತಿಯ ಸಮಯವಾಗಿದ್ದ 1960ರ ದಶಕದಲ್ಲೇ ಭಾರತ ತನ್ನ ಮೊದಲ ರಕ್ಷಣಾ ಮೈಲಿಗಲ್ಲನ್ನು ಕೂಡ ಮುಟ್ಟಿತು. ಅದೆಂದರೆ, ಮೊದಲ ಸ್ಥಳೀಯ ನೌಕಾ ಜಲಾಂತರ್ಗಾಮಿ ಐಎನ್‌ಎಸ್ ಕಲ್ವರಿ ಉಡಾವಣೆ. ಇದು ರಕ್ಷಣೆಯಲ್ಲಿ ಮಾತ್ರವಲ್ಲದೆ ಎಲ್ಲಾ ಕ್ಷೇತ್ರಗಳಲ್ಲಿಯೂ ಸ್ವದೇಶಿ ನಿರ್ಮಿತ ತಂತ್ರಜ್ಞಾನಗಳ ದೀರ್ಘ ಪಟ್ಟಿಗೆ ನಾಂದಿಯಾಯಿತು.

ರಕ್ಷಣಾ ವಲಯದಲ್ಲಿ ಅಗ್ನಿ ಮತ್ತು ಪೃಥ್ವಿ ಕ್ಷಿಪಣಿಗಳು, ತೇಜಸ್‌ನಂತಹ ಸೂಪರ್‌ಸಾನಿಕ್ ಯುದ್ಧ ವಿಮಾನಗಳು, ಪರಮಾಣು ಕ್ಷಿಪಣಿಗಳು (ಪೋಖ್ರಾನ್ II), ವಿಶ್ವದ ಅತ್ಯಂತ ವೇಗದ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ ಬ್ರಹ್ಮೋಸ್, ಬ್ಯಾಲಿಸ್ಟಿಕ್ ಕ್ಷಿಪಣಿ ಜಲಾಂತರ್ಗಾಮಿ ಐಎನ್‌ಎಸ್ ಅರಿಹಂತ್ ಮತ್ತು ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್ ಅನ್ನು ಯಶಸ್ವಿಯಾಗಿ ನಿರ್ಮಿಸುವುದು, ಪರೀಕ್ಷಿಸುವುದು ಮತ್ತು ನಿಯೋಜಿಸುವುದು ಮುಂದುವರಿಯಿತು.

ವಿಮಾನಗಳು, ಕ್ಷಿಪಣಿಗಳು ಮತ್ತು ಜಲಾಂತರ್ಗಾಮಿ ನೌಕೆಗಳ ಜೊತೆಗೆ, ಇತ್ತೀಚಿನ ದಿನಗಳಲ್ಲಿ ಹಲವಾರು ಪ್ರಮುಖ ಬೆಳವಣಿಗೆಗಳು ನಡೆದಿವೆ. ಅವುಗಳಲ್ಲಿ ಮಿಷನ್ ಶಕ್ತಿ ಅಡಿಯಲ್ಲಿ ಅಭಿವೃದ್ಧಿಪಡಿಸಲಾದ ಉಪಗ್ರಹ ವಿರೋಧಿ ತಂತ್ರಜ್ಞಾನ ಭಾರತವನ್ನು ಸ್ಥಳೀಯ ತಂತ್ರಜ್ಞಾನದ ಆಧಾರದ ಮೇಲೆ ಈ ಸಾಮರ್ಥ್ಯ ಪ್ರದರ್ಶಿಸಿದ 4ನೇ ರಾಷ್ಟ್ರವನ್ನಾಗಿ ಮಾಡಿದೆ. ದೃಶ್ಯ ವ್ಯಾಪ್ತಿಯನ್ನು ಮೀರಿದ ಮೊದಲ ಸ್ಥಳೀಯ ಮತ್ತು ಗಾಳಿಯಿಂದ ಗಾಳಿಗೆ ಹಾರುವ ಕ್ಷಿಪಣಿ ಅಸ್ಟ್ರಾ. ಈ ತಂತ್ರಜ್ಞಾನ ಹೊಂದಿರುವ ಕೆಲವೇ ರಾಷ್ಟ್ರಗಳಲ್ಲಿ ಭಾರತ ಕೂಡ ಒಂದಾಗಿದೆ. ವಿಶ್ವದ ಅತಿ ಉದ್ದದ ಗುಂಡಿನ ವ್ಯಾಪ್ತಿ ಹೊಂದಿರುವ ATAGS 155 mm ಗನ್; ಆಯುಧ ಪತ್ತೆ ರಾಡಾರ್ ಸ್ವಾತಿ ಮತ್ತು ಪರ್ವತಗಳಲ್ಲಿನ ಕಡಿಮೆ ಮಟ್ಟದ ಟ್ರ್ಯಾಕಿಂಗ್ ರಾಡಾರ್‌ಗಳಂತಹ ರಾಡಾರ್‌ಗಳು; ಇಲೆಕ್ಟ್ರಾನಿಕ್ ಯುದ್ಧ ವ್ಯವಸ್ಥೆಗಳು; ನೀರೊಳಗಿನ ಶಸ್ತ್ರಾಸ್ತ್ರಗಳು ಮತ್ತು ಪ್ರತಿ-ಅಳತೆ ವ್ಯವಸ್ಥೆಗಳು; ಮತ್ತು ಡ್ರೋನ್‌ಗಳು ಮತ್ತು ಡ್ರೋನ್ ವಿರೋಧಿ ವ್ಯವಸ್ಥೆಗಳು ನಮ್ಮ ಇನ್ನಷ್ಟು ಸಾಧನೆಗಳಾಗಿವೆ. ಈಗ, ಕ್ವಾಂಟಮ್ ವ್ಯವಸ್ಥೆಗಳು, ಹೈಪರ್‌ಸಾನಿಕ್ ವ್ಯವಸ್ಥೆಗಳು, ಸುಧಾರಿತ ವಸ್ತುಗಳು ಮತ್ತು ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನಗಳನ್ನು ರಕ್ಷಣಾ ವಲಯಕ್ಕೆ ಸಂಯೋಜಿಸುವ ವಿಧಾನಗಳ ಕುರಿತು DRDO ಸಂಶೋಧನೆ ನಡೆಸುತ್ತಿದೆ. ವಾಸ್ತವವಾಗಿ, ಹೈಪರ್‌ಸಾನಿಕ್ ತಂತ್ರಜ್ಞಾನ ಪ್ರದರ್ಶನ ವಾಹನ (HSDTV) ಅನ್ನು 2020ರಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಯಿತು. ಭಾರತ ಈ ತಂತ್ರಜ್ಞಾನದ ಬಳಕೆ ಪ್ರದರ್ಶಿಸಿದ 4ನೇ ದೇಶವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಆರ್.ಜೀವಿ

contributor

Similar News