×
Ad

ಫೆಬ್ರವರಿ 13ರಿಂದ ಮೂರು ದಿನಗಳ ಕಾಲ 'ಹಂಪಿ ಉತ್ಸವ' : ಸಚಿವ ಝಮೀರ್ ಅಹ್ಮದ್‌ ಖಾನ್

ಹಂಪಿ ಉತ್ಸವ-2026ರ ಲಾಂಛನ ಬಿಡುಗಡೆ

Update: 2026-01-14 19:17 IST

ವಿಜಯನಗರ​(ಹೊಸಪೇಟೆ): ವಿಶ್ವವಿಖ್ಯಾತ ಹಂಪಿ ಉತ್ಸವವನ್ನು ಈ ಬಾರಿ ಫೆಬ್ರವರಿ 13, 14 ಮತ್ತು 15ರಂದು ಮೂರು ದಿನಗಳ ಕಾಲ ಅತ್ಯಂತ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಅಲ್ಪಸಂಖ್ಯಾತರ ಇಲಾಖೆ, ವಸತಿ, ವಕ್ಫ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಝಮೀರ್ ಅಹ್ಮದ್ ಖಾನ್ ತಿಳಿಸಿದರು.

ಬುಧವಾರ ಹೊಸಪೇಟೆ ಅಮರಾವತಿ ಪ್ರವಾಸಿ ಮಂದಿರದಲ್ಲಿ ಹಂಪಿ ಉತ್ಸವ-2026ರ ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಝಮೀರ್ ಅಹ್ಮದ್ ಖಾನ್, ಹಂಪಿ ಉತ್ಸವದ ಸಿದ್ಧತೆಗಳ ಕುರಿತು ಪ್ರಮುಖ ಮಾಹಿತಿಗಳನ್ನು ಹಂಚಿಕೊಂಡರು.

ಫೆಬ್ರವರಿ 13ರ ಸಂಜೆ ಮುಖ್ಯಮಂತ್ರಿಗಳು ಹಂಪಿ ಉತ್ಸವಕ್ಕೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ​ಉತ್ಸವದ ಯಶಸ್ವಿ ಆಚರಣೆಗಾಗಿ ಈ ಬಾರಿ 22 ಕೋಟಿ ಅನುದಾನ ಕೋರಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಳೆದ ವರ್ಷ 16 ಕೋಟಿ ಅನುದಾನ ನೀಡಲಾಗಿತ್ತು ಎಂದು ಹೇಳಿದರು.  

ರಾಷ್ಟ್ರ ಮತ್ತು ರಾಜ್ಯ ಮಟ್ಟದ ಖ್ಯಾತ ಕಲಾವಿದರನ್ನು ಆಹ್ವಾನಿಸುವ ಕುರಿತು ಗುರುವಾರ ಬೆಳಿಗ್ಗೆ 11 ಗಂಟೆಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಮಹತ್ವದ ಸಭೆ ನಡೆಸಲಾಗುವುದು. ಈ ಸಭೆಯಲ್ಲಿ ಕಾರ್ಯಕ್ರಮಗಳ ಪಟ್ಟಿಯನ್ನು ಅಂತಿಮಗೊಳಿಸಲಾಗುವುದು ಎಂದರು.

ಹಂಪಿ ಉತ್ಸವದಲ್ಲಿ ಪ್ರತಿ ವರ್ಷದಂತೆ ಸ್ಥಳೀಯ ಕಲಾವಿದರಿಗೂ ಹೆಚ್ಚಿನ ಆದ್ಯತೆ ನೀಡಲಾಗುವುದು. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಸಾರಿಗೆ ಹಾಗೂ ಮೂಲಸೌಕರ್ಯಗಳ ಬಗ್ಗೆ ವಿಶೇಷ ಗಮನ ಹರಿಸಲಾಗುವುದು ಎಂದು ಸಚಿವರು ತಿಳಿಸಿದರು.

ಈ ವೇಳೆ ಸಂಸದರಾದ ಈ.ತುಕಾರಾಂ, ಶಾಸಕರಾದ ಲತಾ ಮಲ್ಲಿಕಾರ್ಜುನ್, ಕಂಪ್ಲಿ ಗಣೇಶ್, ನಾ.ರಾ.ಭರತ್ ರೆಡ್ಡಿ, ಹುಡಾ ಅಧ್ಯಕ್ಷರಾದ ಹೆಚ್.ಎನ್.ಎಫ್ ಇಮಾಮ್ ನಿಯಾಜಿ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಸಿಇಓ ನೋಂಗ್ಜಾಯ್ ಮಹ್ಮದ್ ಅಲಿ ಅಕ್ರಂ ಷಾ, ಪೊಲೀಸ್ ಅಧೀಕ್ಷಕಿ ಎಸ್.ಜಹ್ನಾವಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News