×
Ad

ವಿಜಯನಗರ | ಕಟ್ಟಕಡೆಯ ವ್ಯಕ್ತಿಗೂ ಸರಕಾರದ ಸೌಲಭ್ಯ ತಲುಪಲಿ : ಸಂಸದ ಈ. ತುಕಾರಾಂ

569 ವಿಶೇಷ ಚೇತನರಿಗೆ ಸಾಧನ ಸಲಕರಣೆ ವಿತರಣೆ

Update: 2026-01-12 19:01 IST

ವಿಜಯನಗರ (ಹೊಸಪೇಟೆ): ಜಿಲ್ಲೆಯ ಹಿರಿಯ ನಾಗರಿಕರು ಮತ್ತು ವಿಶೇಷ ಚೇತನರು ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಹ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಸಿಗುವಂತಾಗಬೇಕು ಎಂದು ಸಂಸದ ಈ. ತುಕಾರಾಂ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಅಲಿಂಕೋ ಸಂಸ್ಥೆಯ ವತಿಯಿಂದ ಜಿಲ್ಲೆಯಾದ್ಯಂತದ ವಿಕಲಚೇತನರಿಗೆ ಮತ್ತು ಹಿರಿಯ ನಾಗರಿಕರಿಗೆ ಸಾಧನ ಸಲಕರಣೆಗಳನ್ನು ವಿತರಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಂಗವೈಕಲ್ಯವನ್ನು ಶಾಪ ಎಂದು ಪರಿಗಣಿಸಬಾರದು. ಪೌಷ್ಟಿಕಾಂಶದ ಕೊರತೆ ಅಥವಾ ಅನಿವಾರ್ಯ ಕಾರಣಗಳಿಂದ ದೈಹಿಕ ನ್ಯೂನತೆ ಉಂಟಾಗಿದ್ದರೂ, ಅದನ್ನು ಮೀರಿ ಯಶಸ್ವಿ ಜೀವನ ನಡೆಸಲು ಸರ್ಕಾರದ ಯೋಜನೆಗಳು ಬೆನ್ನೆಲುಬಾಗಿವೆ. ಅಧಿಕಾರಿಗಳು ಅರ್ಹ ಫಲಾನುಭವಿಗಳಿಗೆ ಸಕಾಲಕ್ಕೆ ಸೌಲಭ್ಯಗಳನ್ನು ತಲುಪಿಸಬೇಕು. ಪೋಷಕರು ವಿಶೇಷ ಚೇತನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಬೇಕು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಮಾತನಾಡಿ, ದೈಹಿಕವಾಗಿ ಸದೃಢರಾಗಿರುವವರಲ್ಲಿಯೇ ಅನೇಕ ಮಾನಸಿಕ ನ್ಯೂನತೆಗಳಿರುತ್ತವೆ. ಅಂತಹದ್ದರಲ್ಲಿ ದೈಹಿಕ ಸವಾಲು ಎದುರಿಸುತ್ತಿರುವವರಿಗೆ ದೈನಂದಿನ ಜೀವನ ಸುಗಮಗೊಳಿಸಲು ಈ ಸಲಕರಣೆಗಳು ಅತ್ಯಂತ ಸಹಕಾರಿಯಾಗಲಿವೆ ಎಂದರು.

77.55 ಲಕ್ಷ ರೂ. ವೆಚ್ಚದ ಸಲಕರಣೆ ವಿತರಣೆ :

ಜಿಲ್ಲೆಯ 6 ತಾಲೂಕುಗಳಲ್ಲಿ ನಡೆಸಲಾದ ವೈದ್ಯಕೀಯ ಶಿಬಿರಗಳ ಮೂಲಕ ಒಟ್ಟು 569 ವಿಶೇಷ ಚೇತನರನ್ನು (356 ಪುರುಷರು, 213 ಮಹಿಳೆಯರು) ಹಾಗೂ 95 ಹಿರಿಯ ನಾಗರಿಕರನ್ನು ಆಯ್ಕೆ ಮಾಡಲಾಗಿತ್ತು. ಇವರಿಗೆ ಸುಮಾರು 77,55,898 ರೂ. ವೆಚ್ಚದ ಉಪಕರಣಗಳನ್ನು ವಿತರಿಸಲಾಯಿತು.

ಈ ವೇಳೆ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ತಿಮ್ಮಪ್ಪ, ನಗರಸಭೆ ಅಧ್ಯಕ್ಷ ಎನ್.ರೂಪೇಶ್ ಕುಮಾರ್,ಮುನ್ನಿ ಖಾಸಿಂ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಇಮಾಮ್ ನಿಯಾಜಿ, ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ವೆಂಕಟರಮಣ, ದಾದಾಪಿರ್ ಸೇರಿದಂತೆ ವಿವಿಧ ಇಲಾಖೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಚುನಾಯಿತ ಸದಸ್ಯರು ಇದ್ದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ತಿಮ್ಮಪ್ಪ, ನಗರಸಭೆ ಅಧ್ಯಕ್ಷ ಎನ್.ರೂಪೇಶ್ ಕುಮಾರ್, ಮುನ್ನಿ ಖಾಸಿಂ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಇಮಾಮ್ ನಿಯಾಜಿ, ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ವೆಂಕಟರಮಣ, ದಾದಾಪಿರ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News