×
Ad

ಹರಪನಹಳ್ಳಿ | 6.33 ಕೋಟಿ ರೂ. ವೆಚ್ಚದ ಮೊರಾರ್ಜಿ ವಸತಿ ನಿಲಯಕ್ಕೆ ಶಾಸಕಿ ಎಂ.ಪಿ.ಲತಾ ಶಂಕುಸ್ಥಾಪನೆ

ಅಲ್ಪಸಂಖ್ಯಾತರ ಸಮಗ್ರ ಅಭಿವೃದ್ಧಿಗೆ ಬದ್ಧ : ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ

Update: 2026-01-12 21:23 IST

ಹರಪನಹಳ್ಳಿ: ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಇಲಾಖೆಯ ಅನುದಾನವನ್ನು ಸಮರ್ಪಕವಾಗಿ ಬಳಸಿ ಸಮುದಾಯದ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹೇಳಿದರು.

ಪಟ್ಟಣದ ಶೃಂಗಾರ ತೋಟದಲ್ಲಿ ಸೋಮವಾರ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಉನ್ನತೀಕರಿಸಿದ ವಸತಿ ನಿಲಯದ ಸಿಬ್ಬಂದಿ ವಸತಿಗೃಹದ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಸುಮಾರು 6.33 ಕೋಟಿ ರೂ. ವೆಚ್ಚದ ಈ ಕಾಮಗಾರಿಗೆ ಚಾಲನೆ ನೀಡಿದ ಶಾಸಕರು, ಈಗಾಗಲೇ ಅಪೂರ್ಣಗೊಂಡಿರುವ ಮುರಾರ್ಜಿ ವಸತಿ ಶಾಲೆಯ ಇತರ ಕಾಮಗಾರಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಅಪೂರ್ಣಗೊಂಡ ಕಾಮಗಾರಿಯ ಗುತ್ತಿಗೆದಾರರಿಗೆ ತಕ್ಷಣ ನೋಟಿಸ್ ಜಾರಿ ಮಾಡಿ, ಕೆಲಸ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಾವೀದ್ ಕಾರಂಗಿ ಅವರಿಗೆ ಸೂಚಿಸಿದರು. ಅಲ್ಲದೆ, ಹೆಚ್ಚುವರಿ ಅನುದಾನದ ಅಗತ್ಯವಿದ್ದರೆ ಸರ್ಕಾರದಿಂದ ಬಿಡುಗಡೆ ಮಾಡಿಸುವುದಾಗಿ ಭರವಸೆ ನೀಡಿದರು.

ಮೌಲಾನಾ ಆಜಾದ್ ವಸತಿ ಶಾಲೆಗೆ ಈಗಾಗಲೇ 4 ಎಕರೆ ಭೂಮಿ ಮಂಜೂರಾಗಿದೆ. ಶೀಘ್ರದಲ್ಲೇ ಕಾಮಗಾರಿ ಆರಂಭಿಸಿ ಮುಂದಿನ ಶೈಕ್ಷಣಿಕ ವರ್ಷದೊಳಗೆ ಸುಸಜ್ಜಿತ ಕಟ್ಟಡವನ್ನು ವಿದ್ಯಾರ್ಥಿಗಳ ಲೋಕಾರ್ಪಣೆಗೆ ಸಿದ್ಧಪಡಿಸಲಾಗುವುದು ಎಂದು ಅವರು ತಿಳಿಸಿದರು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಾವೀದ್ ಕಾರಂಗಿ ಮಾತನಾಡಿ, ಮುರಾರ್ಜಿ ವಸತಿ ಶಾಲೆಯಲ್ಲಿ ಎರಡು ಬ್ಲಾಕ್ ಕಟ್ಟಡ ಸಮುಚ್ಚಯಗಳನ್ನು ನಿರ್ಮಿಸಲಾಗುವುದು. ಇಲ್ಲಿ 6 ರಿಂದ 12ನೇ ತರಗತಿಯವರೆಗೆ ಶಿಕ್ಷಣ ಲಭ್ಯವಿರಲಿದ್ದು, ಶೇ. 75ರಷ್ಟು ಅಲ್ಪಸಂಖ್ಯಾತರಿಗೆ ಹಾಗೂ ಶೇ. 25ರಷ್ಟು ಇತರ ವರ್ಗದವರಿಗೆ ಸೀಟು ಹಂಚಿಕೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ಲೇಪಾಕ್ಷಪ್ಪ, ಅಂಜುಮನ್ ಸಂಸ್ಥೆಯ ಮಾಜಿ ಅಧ್ಯಕ್ಷ ಸಿ. ಜಾಹೀದ್, ಮಹಬೂಬ್ ಸಾಹೇಬ್, ಮುಖಂಡರಾದ ಪದ್ಮರಾಜ ಜೈನ್, ಎಚ್. ಪದ್ಮನಾಭ ಸೇರಿದಂತೆ ಇಲಾಖೆಯ ಸಿಬ್ಬಂದಿ ಹಾಗೂ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News