×
Ad

ಮರಿಯಮ್ಮನಹಳ್ಳಿ | 2.10 ಕೋಟಿ ರೂ. ವೆಚ್ಚದ ಪ.ಪಂ. ನೂತನ ಕಟ್ಟಡಕ್ಕೆ ಶಾಸಕ ನೇಮಿರಾಜ್ ನಾಯ್ಕ್ ಭೂಮಿ ಪೂಜೆ

Update: 2026-01-13 22:43 IST

ಮರಿಯಮ್ಮನಹಳ್ಳಿ : ಪಟ್ಟಣದಲ್ಲಿ 2022-23ನೇ ಸಾಲಿನ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ (ಹಂತ-4) ಯೋಜನೆಯಡಿ ಮಂಜೂರಾದ 210.50 ಲಕ್ಷ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಹಗರಿಬೊಮ್ಮನಹಳ್ಳಿ ಶಾಸಕ ಕೆ. ನೇಮಿರಾಜ್ ನಾಯ್ಕ್ ಸೋಮವಾರ ಭೂಮಿ ಪೂಜೆ ನೆರವೇರಿಸಿದರು.

ಸುಮಾರು 200 ಲಕ್ಷ ರೂ. ವೆಚ್ಚದಲ್ಲಿ ನೂತನ ಪಟ್ಟಣ ಪಂಚಾಯಿತಿ ಕಟ್ಟಡ ಹಾಗೂ 10.50 ಲಕ್ಷ ರೂ. ವೆಚ್ಚದಲ್ಲಿ ಮರಿಯಮ್ಮನಹಳ್ಳಿ ತಾಂಡಾದಲ್ಲಿ ಗ್ರಂಥಾಲಯ ನಿರ್ಮಾಣ ಕಾಮಗಾರಿಗೆ ಈ ಸಂದರ್ಭದಲ್ಲಿ ಚಾಲನೆ ನೀಡಲಾಯಿತು.

ಬಳಿಕ ಮಾತನಾಡಿದ ಶಾಸಕರು, ಕ್ಷೇತ್ರದ 17 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ರಾಜ್ಯ ಸರ್ಕಾರ ಆಲಸ್ಯ ತೋರುತ್ತಿದೆ. ಸರ್ಕಾರ 50:50 ಅಥವಾ 60:40ರ ಅನುಪಾತದಲ್ಲಿ ಅನುದಾನ ನೀಡಿದರೆ, ಬಾಕಿ ಮೊತ್ತವನ್ನು ಕೇಂದ್ರದಿಂದ ತರಲು ನಾವು ಸಿದ್ಧರಿದ್ದೇವೆ. ಈ 17 ಕೆರೆಗಳ ವ್ಯಾಪ್ತಿಯಲ್ಲಿ 68 ಉಪಕೆರೆಗಳಿದ್ದು, ಈ ಯೋಜನೆ ಜಾರಿಯಾದರೆ ಕೃಷಿ ಕ್ಷೇತ್ರಕ್ಕೆ ದೊಡ್ಡ ಶಕ್ತಿ ಬರಲಿದೆ. ಸರ್ಕಾರ ತಕ್ಷಣ ಸ್ಪಂದಿಸಬೇಕು ಎಂದು ಆಗ್ರಹಿಸಿದರು.

2028ರಲ್ಲಿ ಹೆಚ್.ಡಿ. ಕುಮಾರಸ್ವಾಮಿ ಅವರು ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗಿ ಅಭಿವೃದ್ಧಿ ಪರ್ವಕ್ಕೆ ನಾಂದಿ ಹಾಡುವುದು ಸೂರ್ಯ-ಚಂದ್ರರಷ್ಟೇ ಸತ್ಯ. ಈ ನಿಟ್ಟಿನಲ್ಲಿ ಜೆಡಿಎಸ್ ಶಾಸಕರು ಹಾಗೂ ಹಿರಿಯರು ಕುಮಾರಣ್ಣನವರ ಮನವೊಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಪ.ಪಂ. ಅಧ್ಯಕ್ಷ ಹುಸೇನ್ ಬಾಷಾ, ಮುಖ್ಯಾಧಿಕಾರಿ ಕಳಕ ಮಲ್ಲೇಶ, ಕಿರಿಯ ಅಭಿಯಂತರ ಹನುಮಂತಪ್ಪ, ಪ.ಪಂ. ಸದಸ್ಯರಾದ ಮರಡಿ ಸುರೇಶ, ಬಿ.ಎಂ.ಎಸ್. ರಾಜೀವ್, ಜೆಡಿಎಸ್ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News