ಮರಿಯಮ್ಮನಹಳ್ಳಿ | 33 ಕೋಟಿ ರೂ. ವೆಚ್ಚದ ರಾಷ್ಟ್ರೀಯ ಹೆದ್ದಾರಿ ಅಂಡರ್ ಪಾಸ್ ಕಾಮಗಾರಿಗೆ ಸಂಸದ ಈ. ತುಕಾರಾಂ ಚಾಲನೆ
ಮರಿಯಮ್ಮನಹಳ್ಳಿ : ಸಮೀಪದ ಡಣಾಪುರ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನೆಯಡಿ ಸುಮಾರು 33 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಅಂಡರ್ ಪಾಸ್ ಮತ್ತು ಪ್ಲೈಓವರ್ ಕಾಮಗಾರಿಗೆ ಸಂಸದ ಈ.ತುಕಾರಾಂ ಸೋಮವಾರ ಭೂಮಿ ಪೂಜೆ ನೆರವೇರಿಸಿದರು.
ಹೊಸಪೇಟೆ-ಚಿತ್ರದುರ್ಗ ಮಾರ್ಗದ ರಾಷ್ಟ್ರೀಯ ಹೆದ್ದಾರಿ-50 ರಲ್ಲಿ ಈ ಬೃಹತ್ ಕಾಮಗಾರಿ ನಡೆಯಲಿದೆ. ಈ ಸಂದರ್ಭದಲ್ಲಿ ಮಾತನಾಡಿದ ಸಂಸದರು, ಜನರು ನೀಡಿರುವ ಅಧಿಕಾರಾವಧಿಯಲ್ಲಿ ಅಖಂಡ ಜಿಲ್ಲೆಯಾದ್ಯಂತ ಪ್ರವಾಸ ಮಾಡಿ, ಸಾರ್ವಜನಿಕರ ಅಗತ್ಯಕ್ಕೆ ತಕ್ಕಂತೆ ರೈಲ್ವೆ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಸಮಸ್ಯೆಗಳನ್ನು ಸರಿಪಡಿಸಲಾಗುವುದು. ಹೆದ್ದಾರಿ ಪಕ್ಕದ ಗ್ರಾಮಸ್ಥರು ಪ್ಲೈಓವರ್ ಮತ್ತು ಸರ್ವಿಸ್ ರಸ್ತೆಗಾಗಿ ಬೇಡಿಕೆ ಇಟ್ಟಿದ್ದು, ಈ ಬಗ್ಗೆ ಅಧಿಕಾರಿಗಳಿಂದ ವರದಿ ಪಡೆದು ತ್ವರಿತವಾಗಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಾಮಗಾರಿ ಚಾಲನೆ ನೀಡಿದ ಬಳಿಕ, ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯತ್ ಆವರಣದಲ್ಲಿ ಸಂಸದರ ಅನುದಾನದಡಿ ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸಲಾಯಿತು.
ಪಟ್ಟಣದ ನಾಲ್ವರು ವಿಶೇಷ ಚೇತನರಿಗೆ ನಾಲ್ಕು ಚಕ್ರದ ವಾಹನಗಳು ಹಾಗೂ ಶ್ರವಣ ದೋಷವುಳ್ಳ ಮೂವರಿಗೆ ಶ್ರವಣ ಸಾಧನಗಳನ್ನು ಸಂಸದರು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ಆದಿಮನಿ ಹುಸೇನ್ ಬಾಷಾ, ಮುಖ್ಯಾಧಿಕಾರಿ ಗರಡಿ ಕಳಕ ಮಲ್ಲೇಶ, ಡಣಾಪುರ ಗ್ರಾಮ ಪಂಚಾಯಿತಿ ಸದಸ್ಯರಾದ ರವಿರಾಜ, ಗಾಳೇಶ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಅಂಜಿನಪ್ಪ, ಮುಖಂಡರಾದ ಹೊಸಪೇಟೆ ಹನುಮಂತಪ್ಪ, ಗುಡುದಪ್ಪ, ಬುಡೆನ್ ಸಾಬ್, ಸತ್ಯನಾರಾಯಣ, ಉದಯ್ ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.