ಪುಸ್ತಕ ಸಂಸ್ಕೃತಿ ಮನೆಮನಕ್ಕೆ ತಲುಪಲಿ: ಹೊಸಪೇಟೆಯಲ್ಲಿ 'ಮನೆಗೊಂದು ಗ್ರಂಥಾಲಯ' ಅಭಿಯಾನಕ್ಕೆ ಚಾಲನೆ
ಹೊಸಪೇಟೆ (ವಿಜಯನಗರ): ಪುಸ್ತಕ ಓದುವ ಸಂಸ್ಕೃತಿಯನ್ನು ಮನೆಮನಕ್ಕೆ ತಲುಪಿಸುವ ನಿಟ್ಟಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರವು ಅತ್ಯಂತ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಡಾ.ಮಾನಸ ನುಡಿದರು.
ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ವಿಜಯನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತಾಶ್ರಯದಲ್ಲಿ ನಗರದ ಜಗದ್ಗುರು ಶ್ರೀ ಕೊಟ್ಟೂರುಸ್ವಾಮಿ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ "ಮನೆಗೊಂದು ಗ್ರಂಥಾಲಯ" ಸದಸ್ಯರ ನೇಮಕ ಹಾಗೂ ಪ್ರಮಾಣ ಪತ್ರ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ ಮಾತನಾಡಿ, ಪ್ರಾಧಿಕಾರದ ಈ ಯೋಜನೆ ಅತ್ಯಂತ ಸ್ತುತ್ಯರ್ಹವಾಗಿದೆ. ಇದರ ಮೂಲಕ ರಾಜ್ಯದ ಒಂದು ಲಕ್ಷ ಮನೆಗಳಲ್ಲಿ ಗ್ರಂಥಾಲಯ ಸ್ಥಾಪಿಸಲು ಮುಂದಾಗಿರುವುದು ಶ್ಲಾಘನೀಯ ಸಂಗತಿ," ಎಂದರು. ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ ರಂಗಣ್ಣನವರ ಮಾತನಾಡಿ, ಪುಸ್ತಕ ಸಂಸ್ಕೃತಿಯು ಮಾನವ ಸಮಾಜದ ನಿರಂತರ ಬೆಳವಣಿಗೆಯ ಸಂಕೇತವಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರನ್ನಾಗಿ ಎಂ. ಉಮಾಮಹೇಶ್ವರ ಹಾಗೂ ಸದಸ್ಯರನ್ನಾಗಿ ಹುಲಿಯಪ್ಪನವರ ಬಸವರಾಜ (ಹರಪನಹಳ್ಳಿ), ವೀರಮ್ಮ ಹಿರೇಮಠ (ಹೊಸಪೇಟೆ), ಎಲ್. ಹಾಲ್ಯಾನಾಯಕ, ಬಿ. ಕಿರಣ್ ಕುಮಾರ್, ಎಸ್.ಎಂ. ರಿಯಾಜ್ ಪಾಷಾ (ಕೂಡ್ಲಿಗಿ), ಗಣೇಶ ಹವಾಲ್ದಾರ್ (ಹಗರಿಬೊಮ್ಮನಹಳ್ಳಿ), ಬಿ.ಎಚ್. ಶರಣಪ್ಪ (ಕೊಟ್ಟೂರು) ಹಾಗೂ ಬಿ.ಕೆ. ಮುರಳೀಧರ ಅವರನ್ನು ನೇಮಿಸಿ ಪ್ರಮಾಣ ಪತ್ರ ವಿತರಿಸಲಾಯಿತು.
ವೇದಿಕೆಯಲ್ಲಿ ತಾಲೂಕು ಕಸಾಪ ಅಧ್ಯಕ್ಷ ಡಾ. ಗುಂಡಿ ಮಾರುತಿ, ಹಿರಿಯ ಸಾಹಿತಿ ಟಿ. ಯಮನಪ್ಪ ಹಾಗೂ ಶೋಭಾ ಶಂಕರಾನಂದ ಉಪಸ್ಥಿತರಿದ್ದರು. ಶ್ರೀನಿವಾಸ ಪುರೋಹಿತ ಪ್ರಾರ್ಥಿಸಿದರು, ಎಲ್. ಹಾಲ್ಯಾನಾಯಕ ಸ್ವಾಗತಿಸಿದರು, ವೀರಮ್ಮ ಹಿರೇಮಠ ನಿರೂಪಿಸಿದರೆ, ಉಮಾಮಹೇಶ್ವರ ವಂದಿಸಿದರು.