ಹರಪನಹಳ್ಳಿ | ಹಕ್ಕುಪತ್ರ ನೀಡುವಂತೆ ಗ್ರಾಮಸ್ಥರ ಮನವಿ
ಹರಪನಹಳ್ಳಿ, ಮಾ.2: ತಾಲ್ಲೂಕಿನ ಚಿಕ್ಕಮೇಗಳಗೆರೆ ಗ್ರಾಮದ ಸರ್ವೇ ನಂ.578ರಲ್ಲಿ ಹಲವು ವರ್ಷಗಳಿಂದ ವಾಸವಾಗಿರುವ ಕುಟುಂಬಗಳಿಗೆ ಹಕ್ಕುಪತ್ರ ನೀಡುವಂತೆ ಸ್ಥಳೀಯರು ಪಿಡಿಒ ಹಾಗೂ ಗ್ರಾಮ ಲೆಕ್ಕಾಧಿಕಾರಿಗೆ ಸೋಮವಾರ ಮನವಿ ಸಲ್ಲಿಸಿದರು.
ಗ್ರಾಮದಲ್ಲಿ ಸುಮಾರು 40 ವರ್ಷಗಳಿಂದ ಅನೇಕ ಬಡ ಕುಟುಂಬಗಳು ಮನೆ ನಿರ್ಮಿಸಿ ವಾಸವಾಗಿದ್ದು, ಅಕ್ರಮ-ಸಕ್ರಮ ಯೋಜನೆಯಡಿ ಹಕ್ಕುಪತ್ರ ಸಿಗಲಿದೆ ಎಂಬ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ. ಆದರೆ ಸರ್ಕಾರದಿಂದ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳದಿರುವುದಾಗಿ ಅವರು ದೂರಿದರು.
ಹಕ್ಕುಪತ್ರ ವಿತರಣೆಯಲ್ಲಿ ಅಧಿಕಾರಿಗಳು ತಾರತಮ್ಯ ಧೋರಣೆ ಅನುಸರಿಸುತ್ತಿದ್ದಾರೆ. ಒಂದೇ ಸರ್ವೇ ಸಂಖ್ಯೆಯಲ್ಲಿ ಕೆಲವರಿಗೆ ಹಕ್ಕುಪತ್ರ ನೀಡಲು ಸಿದ್ಧತೆ ನಡೆಸಿದರೆ, ಇತರ ಅರ್ಹರಿಗೆ ಸ್ಪಂದನೆ ನೀಡಲಾಗುತ್ತಿಲ್ಲ. ಕೂಡಲೇ ಮರು ಸಮೀಕ್ಷೆ ನಡೆಸಿ ಅರ್ಹ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಬೇಕು ಎಂದು ಆಗ್ರಹಿಸಿದರು.
ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಹೆಸರಿನ 3.79 ಎಕರೆ ಜಮೀನಿನಲ್ಲಿ ಜನ ವಾಸವಾಗಿರುವ 16 ಸೆಂಟ್ಸ್ ಭೂಮಿಯನ್ನು ಯಾವುದೇ ಮಾಹಿತಿ ನೀಡದೆ ಪೋಡಿ ಮಾಡಲಾಗಿದೆ ಎಂದು ಆರೋಪಿಸಿದ ಗ್ರಾಮಸ್ಥರು, ಅದನ್ನು ರದ್ದುಗೊಳಿಸಿ ಯಥಾಸ್ಥಿತಿಯಲ್ಲಿ ಉಳಿಸಿ ಹಕ್ಕುಪತ್ರ ನೀಡುವಂತೆ ಕೋರಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಯಮುನ ನಾಯ್ಕ, ಗ್ರಾಮ ಲೆಕ್ಕಾಧಿಕಾರಿ ಶೃತಿ, ಮುಖಂಡ ಕೆ. ಹನುಮಂತಪ್ಪ, ಅಂಜಿನಪ್ಪ, ಬಿ.ಪರಶುರಾಮ, ಉಮೇಶ್, ದೊಡ್ಡಪ್ಪರ ನಾಗರಾಜ್, ಹನುಮಂತಪ್ಪ, ಮಾರುತಿ, ತಿಪ್ಪಣ್ಣ, ಬಸವರಾಜ್, ಮಲ್ಲೇಶಪ್ಪ, ಅಭಿಜಿತ್, ಮಲ್ಲಿಕಾರ್ಜುನ, ಪರಶುರಾಮಪ್ಪ, ಭರತ, ನಾಗಪ್ಪ, ಶಿವಣ್ಣ ಇತರರು ಉಪಸ್ಥಿತರಿದ್ದರು.