Vijayanagara | ಕರಡಿ ದಾಳಿಗೆ ಕುರಿಗಾಹಿ ಬಲಿ : ಕರಡಿಯನ್ನು ಹೊಡೆದು ಸಾಯಿಸಿದ ಗ್ರಾಮಸ್ಥರು
ವಿಜಯನಗರ: ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಹಾಲಸಾಗರ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಕರಡಿ ದಾಳಿಯಿಂದ ಕುರಿಗಾಹಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ಹಾಲಸಾಗರ ಗ್ರಾಮದ ಓಬಣ್ಣ (30) ಎಂದು ಗುರುತಿಸಲಾಗಿದೆ.
ಓಬಣ್ಣ ಅವರು ದಿನನಿತ್ಯದಂತೆ ಕುರಿ ಮೇಯಿಸಲು ಅರಣ್ಯ ಪ್ರದೇಶಕ್ಕೆ ತೆರಳಿದ್ದರು. ಸಂಜೆಯಾದರೂ ಮನೆಗೆ ಮರಳಿ ಬಾರದ ಹಿನ್ನೆಲೆಯಲ್ಲಿ ಆತಂಕಗೊಂಡ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಹುಡುಕಾಟ ನಡೆಸಿದರು. ಅರಣ್ಯದ ಒಳಭಾಗದಲ್ಲಿ ಕರಡಿ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಓಬಣ್ಣ ಅವರ ಮೃತದೇಹ ಪತ್ತೆಯಾಗಿತ್ತು ಎನ್ನಲಾಗಿದೆ.
ಅಚಾನಕ್ ದಾಳಿ ನಡೆಸಿದ ಕರಡಿಯಿಂದ ಉಂಟಾದ ತೀವ್ರ ಗಾಯಗಳ ಪರಿಣಾಮ ಅವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿರುವುದಾಗಿ ತಿಳಿದುಬಂದಿದೆ.
ಇದೇ ವೇಳೆ ದಾಳಿ ನಡೆಸಿದ ಕರಡಿಯನ್ನು ಆಕ್ರೋಶಗೊಂಡ ಗ್ರಾಮಸ್ಥರು ಹೊಡೆದು ಸಾಯಿಸಿರುವ ಮಾಹಿತಿ ಲಭ್ಯವಾಗಿದೆ. ಈ ಘಟನೆ ಗುಡೆಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅರಣ್ಯ ಪ್ರದೇಶದ ಸಮೀಪದ ಗ್ರಾಮಗಳಲ್ಲಿ ಕಾಡುಪ್ರಾಣಿಗಳ ಸಂಚಾರಿ ಹೆಚ್ಚುತ್ತಿರುವ ಹಿನ್ನೆಲೆ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಜನರ ರಕ್ಷಣೆಗಾಗಿ ಅರಣ್ಯ ಇಲಾಖೆ ತಕ್ಷಣ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಮೃತ ಓಬಣ್ಣ ಅವರ ಕುಟುಂಬಕ್ಕೆ ಸರ್ಕಾರ ಸಮರ್ಪಕ ಪರಿಹಾರ ನೀಡಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.