ಹರಪ್ಪನಹಳ್ಳಿ : ತಮ್ಮ ಜಮೀನಿನಲ್ಲಿ ಕೆಪಿಟಿಸಿಎಲ್ ಕಾಮಗಾರಿ ವಿರೋಧಿಸಿ ರೈತ ದಂಪತಿ ಆತ್ಮಹತ್ಯೆಗೆ ಯತ್ನ; ಆಸ್ಪತ್ರೆಗೆ ದಾಖಲು
Update: 2025-06-14 09:45 IST
ವಿಜಯನಗರ: ಜಮೀನಿನಲ್ಲಿ 220 ಕೆವಿ ವಿದ್ಯುತ್ ಕೆಪಿಟಿಸಿಎಲ್ ಕಾಮಗಾರಿ ವಿರೋಧಿಸಿ ರೈತ ದಂಪತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹರಪನಹಳ್ಳಿ ತಾಲೂಕಿನ ಮಾಚೀಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಾಚೀಹಳ್ಳಿ ಗ್ರಾಮದ ವಿಜಯ್ ನಾಯ್ಕ್ ಹಾಗೂ ವಿಜಿ ಭಾಯಿ ಎಂಬವರು ಆತ್ಮಹತ್ಯೆಗೆ ಯತ್ನಿಸಿದ ರೈತ ದಂಪತಿ. ತಮ್ಮ ಜಮೀನಿನಲ್ಲಿ ಕೆಪಿಸಿಎಲ್ 220 ಕೆವಿ ವಿದ್ಯುತ್ ಸಂಪರ್ಕ ಕಾಮಗಾರಿ ಆಗಿರೋದಕ್ಕೆ ಇವರು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಪೊಲೀಸ್ ಬಂದೋಬಸ್ತ್ ನಲ್ಲಿ ಗುತ್ತಿಗೆದಾರರು ಆಗಮಿಸಿ ಕಾಮಗಾರಿ ಕೈಗೊಂಡಿದ್ದರು ಎನ್ನಲಾಗಿದೆ.
ಈ ಹಿನ್ನೆಲೆ ಆಕ್ರೋಶಗೊಂಡ ದಂಪತಿ, ಗುತ್ತಿಗೆದಾರ, ಜೆಸ್ಕಾಂ, ಪೊಲೀಸ್ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿ ಅವರ ಎದುರಿನಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ ಮಾಡಿದ್ದಾರೆ. ವಿಷ ಸೇವಿಸಿದ ದಂಪತಿಯ ಪರಿಸ್ಥಿತಿ ಚಿಂತಾಜನಕವಾಗಿದ್ದು, ದಾವಣಗೆರೆ ಜಿಲ್ಲೆಯ ಚಿಕ್ಕೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.