ವಿಜಯನಗರ | AIDSO ವಿದ್ಯಾರ್ಥಿ ಸಂಘಟನೆ ವತಿಯಿಂದ ಜ್ಯೋತಿಬಾ ಫುಲೆ ಸ್ಮರಣೆ ದಿನ
ವಿಜಯನಗರ : ಆಲ್ ಇಂಡಿಯಾ ಡೆಮಾಕ್ರೆಟ್ ಸ್ಟೂಡೆಂಟ್ ಆರ್ಗನೈಸೇಶನ್ (AIDSO) ವಿದ್ಯಾರ್ಥಿ ಸಂಘಟನೆ ವತಿಯಿಂದ ನಗರದ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಣ ಕ್ರಾಂತಿಯ ಹರಿಕಾರ ಮಹಾತ್ಮ ಜ್ಯೋತಿಬಾ ಫುಲೆ ಅವರ ಸ್ಮರಣೆ ದಿನವನ್ನು ಆಚರಿಸಲಾಯಿತು.
AIDSO ವಿದ್ಯಾರ್ಥಿ ಸಂಘಟನೆಯ ಜಿಲ್ಲಾ ಸದಸ್ಯರಾದ ಉಮಾ ಮಾತನಾಡಿ, ಜ್ಯೋತಿಬಾ ಫುಲೆ ಅವರ ತಂದೆ ಗೋವಿಂದರಾವ್ ಅವರ ಮೇಲೆ ದಿನನಿತ್ಯ ಮೌಡ್ಯ,ಕಂದಾಚಾರಗಳ ಪ್ರತಿಪಾದಕರ ಕಿರುಕುಳ ಹೆಚ್ಚಾಯಿತು. ಈ ಒತ್ತಡಕ್ಕೆ ಮಣಿದ ಗೋವಿಂದ್ ರಾವ್ ಅವರು ಶಾಲೆಯನ್ನು ಮುಚ್ಚದಿದ್ದರೆ ಮನೆಯಲ್ಲಿ ನಿಮಗೆ ಜಾಗ ಇಲ್ಲ ಎಂಬ ಕಟುವಾದ ನಿಲುವನ್ನು ತಾಳಿದರು. ಆಗ ಜ್ಯೋತಿಬಾ ಫುಲೆ ಅವರು ಹಿಂದುಳಿದ ವರ್ಗದ ಮತ್ತು ಮಹಿಳೆಯರ ಶಿಕ್ಷಣಕ್ಕೋಸ್ಕರ ಮನೆಯನ್ನು ತೊರೆಯುತ್ತೇನೆ ಆದರೆ ಶಾಲೆಯನ್ನು ಮುಚ್ಚುವುದಿಲ್ಲ ಎಂದು ಮಡದಿ ಸಾವಿತ್ರಿ ಬಾಯಿಯೊಡನೆ ತಂದೆಯ ಮನೆಯನ್ನು ತೊರೆದರು. ಎಲ್ಲರಿಗೂ ಉಚಿತ ಶಿಕ್ಷಣ ಸಿಗಬೇಕು ಎಂಬ ಕನಸನ್ನು ಹೊತ್ತಿದ್ದ ಇವರ ವಿಚಾರ ಇಂದಿಗೂ ಪ್ರಸ್ತುತವಾಗಿದೆ ಎಂದು ಹೇಳಿದರು.
ಇಂದಿನ ಸರಕಾರಗಳು ಶಿಕ್ಷಣವನ್ನು ವ್ಯಾಪಾರೀಕರಣಕ್ಕೆ ಇಟ್ಟಿದ್ದಾರೆ. ಶಿಕ್ಷಣ ವ್ಯಾಪಾರೀಕರಣದ ವಿರುದ್ಧ ಹೋರಾಟ ಮಾಡಿರುವ ಇವರು ನಮ್ಮ ಆದರ್ಶವಾಗಬೇಕು. ಜನರ ತೆರಿಗೆಯ ಮೇಲೆ ನಡೆಯುವ ಸರಕಾರಗಳೇ ಶಿಕ್ಷಣದ ಮಾರಾಟಕ್ಕೆ ನಿಂತಿರುವಾಗ ಮಹಾತ್ಮ ಜ್ಯೋತಿಬಾ ಹುಟ್ಟಿ 200 ವರ್ಷಗಳಾದರೂ ಈ ನೆಲದ ಬಡವರ ಮಕ್ಕಳಿಗೆ ಶಿಕ್ಷಣವು ಗಗನ ಕುಸುಮವಾಗಿದೆ. ಸರ್ಕಾರದ ಈ ನೀತಿಯ ವಿರುದ್ಧ ರಾಜ್ಯದ ಜನತೆ ಧ್ವನಿಯಾಗುವುದು ಜ್ಯೋತಿಬಾ ಅವರಿಗೆ ತೋರುವ ದಿಟ್ಟ ಗೌರವ ಎಂದು ಉಮಾ ಹೇಳಿದರು.