ವಿಜಯನಗರ | ಬಾಣಂತಿಯರ ಆರೋಗ್ಯ ರಕ್ಷಣೆಗೆ ಮಾತೃವಂದನಾ ಯೋಜನೆ ಸಹಕಾರಿ : ಸಿಂಧು ಅಂಗಡಿ
ವಿಜಯನಗರ : ಬಾಣಂತಿಯರ ಆರೋಗ್ಯ ಕ್ಷೇಮಕ್ಕಾಗಿ, ನಿರಂತರ ತಪಾಸಣೆಗೆ ಪ್ರೋತ್ಸಾಹಿಸಿ ಕೇಂದ್ರ ಸರಕಾರ ಮಾತೃವಂದನಾ ಯೋಜನೆಯನ್ನು ಮಹಿಳೆಯರಿಗೆ ಕೊಡುಗೆಯಾಗಿ ನೀಡಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿಂಧು ಅಂಗಡಿ ಹೇಳಿದರು.
ತಾಲೂಕಿನ ಹಳೇ ಮಲಪನಗುಡಿ ಅಂಗನವಾಡಿ 2ನೇ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಮಾತೃವಂದನಾ ಶಿಬಿರ ಉದ್ಘಾಟಿಸಿ ಮಾತನಾಡಿದ ಸಿಂಧು ಅಂಗಡಿ, ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆ ಭಾರತ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಕೇಂದ್ರ ಪ್ರಾಯೋಜಿತ ಪ್ರಮುಖ ಯೋಜನೆಯಾಗಿದೆ. ಈ ಯೋಜನೆಯು ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರನ್ನು ಬೆಂಬಲಿಸಲು ವಿನ್ಯಾಸಗೊಳಿಸಲಾಗಿದೆ. ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸೇರಿದ ಮಹಿಳೆಯರಿಗೆ ಹೆರಿಗೆ ಸೌಲಭ್ಯಗಳನ್ನು ಒದಗಿಸುತ್ತದೆ. ನಗದು ಪ್ರೋತ್ಸಾಹ ಧನವಾಗಿ 5,000 ರೂಗಳನ್ನು ನೀಡಲಾಗುತ್ತದೆ ಎಂದು ಹೇಳಿದರು.
ಈ ಯೋಜನೆಯಡಿ ಈವರೆಗೆ 4 ಕೋಟಿಗೂ ಅಧಿಕ ಮಹಿಳೆಯರು ಪ್ರಯೋಜನ ಪಡೆದುಕೊಂಡಿದ್ದಾರೆ. ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಮನೆ-ಮನೆ ಜಾಗೃತಿ ಮತ್ತು ದಾಖಲಾತಿ ಅಭಿಯಾನದ ಮೂಲಕ ಎಲ್ಲಾ ಗರ್ಭಿಣಿಯರು ಮತ್ತು ಹಾಲುಣಿಸುವ ಮಹಿಳೆಯರನ್ನು ಗುರುತಿಸಿ ಈ ಯೋಜನೆಯಡಿಯಲ್ಲಿ ನೋಂದಣಿಯನ್ನು ಖಚಿತಪಡಿಸಿಕೊಳ್ಳುತ್ತಿದ್ದಾರೆ ಎಂದರು.