×
Ad

ಹೊಸಪೇಟೆ | ಡಿಎಪಿ ಗೊಬ್ಬರಕ್ಕೆ ಪರ್ಯಾಯವಾಗಿ ಸಂಯುಕ್ತ ರಸಗೊಬ್ಬರ ಬಳಸಿ : ರೈತರಿಗೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್ ಸಲಹೆ

Update: 2025-05-23 20:48 IST

ಸಾಂದರ್ಭಿಕ ಚಿತ್ರ

ಹೊಸಪೇಟೆ : ರೈತರು ಉತ್ತಮ ಇಳುವರಿ ಪಡೆಯಲು ಡಿಎಪಿ ಗೊಬ್ಬರಕ್ಕೆ ಪರ್ಯಾಯವಾಗಿ ಸಂಯುಕ್ತ ರಸಗೊಬ್ಬರ ಬಳಸಲು ಮುಂದಾಗಬೇಕು. ಸಸ್ಯಗಳ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಹದಿನೇಳು ಪೋಷಕಾಂಶಗಳ ಅಗತ್ಯವಿರುತ್ತದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್ ಹೇಳಿದರು. 

ಪ್ರಮುಖವಾಗಿ ಇವುಗಳಲ್ಲಿ ಇಂಗಾಲ, ಜಲಜನಕ ಮತ್ತು ಆಮ್ಲಜನಕ ಸ್ವಾಭಾವಿಕವಾಗಿ ದೊರೆಯಲಿದೆ. ಇವು ಗಾಳಿ ಮತ್ತು ನೀರಿನ ಮೂಲಕ ಸಸ್ಯಗಳಿಗೆ ಲಭ್ಯವಾಗುತ್ತವೆ. ಉಳಿದ ಹದಿನಾಲ್ಕು ಪೋಷಕಾಂಶಗಳಲ್ಲಿ ಸಾರಜನಕ, ರಂಜಕ ಹೆಚ್ಚಿನ ಪ್ರಮಾಣದಲ್ಲಿ ಬೇಕಾಗಿದೆ, ಇವುಗಳನ್ನು ಪ್ರಧಾನ ಪೋಷಕಾಂಶಗಳೆಂದು ಹಾಗೂ ಕಾಲ್ಸಿಯಂ, ಮೆಗ್ನೆಷಿಯಂ, ಗಂಧಕ, ಕಬ್ಬಿಣ, ಜಿಂಕ್, ಬೋರಾನ್, ತಾಮ್ರ, ಮ್ಯಾಂಗನೀಸ್, ಮಾಲಿಬಿನಂ ಕಡಿಮೆ ಪ್ರಮಾಣದಲ್ಲಿ ಬೇಕಿದ್ದು ಇವುಗಳನ್ನು ಲಘು ಪೋಷಕಾಂಶಗಳೆಂದು ವಿಂಗಡಿಸಲಾಗಿದೆ.

ಇವುಗಳಲ್ಲಿ ಯಾವುದೇ ಒಂದು ಪೋಷಕಾಂಶದ ಕೊರತೆಯಾದರೂ ಸಸ್ಯಗಳ ಬೆಳವಣಿಗೆ ಮತ್ತು ಅಭಿವೃದ್ಧಿಯ ಮೇಲೆ ಪರಿಣಾಮ ಬೀರಿ ಇಳುವರಿ ಕುಂಠಿತವಾಗುತ್ತದೆ. ಪ್ರಧಾನ ಪೋಷಕಾಂಶಗಳು ಮತ್ತು ಲಘು ಪೋಷಕಾಂಶಗಳಿಗೆ ಭೂಮಿಯೇ ಮುಖ್ಯ ಅಧಾರ. ಮಣ್ಣಿನಿಂದ ಈ ಎಲ್ಲಾ ಪೋಷಕಾಂಶಗಳು ಬೆಳೆಗಳಿಗೆ ಬೇಕಾದ ಪ್ರಮಾಣದಲ್ಲಿ ದೊರೆಯುವುದಿಲ್ಲವಾದ್ದರಿಂದ ಬಾಹ್ಯವಾಗಿ ನೀಡುವುದು ಅನಿವಾರ್ಯ. ಬೆಳೆಗಳಿಗೆ ಬೇಕಾಗುವ ಈ ಬಾಹ್ಯ ಪೋಷಕಾಂಶಗಳನ್ನು ಸಾವಯವ (ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರ, ಹಿಂಡಿ ಇತ್ಯಾದಿ) ಮತ್ತು ರಸಗೊಬ್ಬರಗಳಿಂದ ಒದಗಿಸಬೇಕಾಗಿದೆ.

ರೈತರು ರಸಗೊಬ್ಬರಗಳನ್ನು ಬಳಸುವಾಗ ಕೆಲವು ಕ್ರಮಗಳನ್ನು ಅನುಸರಿಸಬೇಕಿದೆ. ರೈತರು ಕೇವಲ ಒಂದು ಅಥವಾ ಎರಡು ಪೋಷಕಾಂಶ ಒದಗಿಸುವ ಯೂರಿಯಾ ಹಾಗೂ ಡಿ.ಎ.ಪಿ.ಯನ್ನು ರೂಢಿಗತವಾಗಿ ಬಳಸುತ್ತಿದ್ದು, ಇವುಗಳಲ್ಲಿ ಸಾರಜನಕ ಮತ್ತು ರಂಜಕದ ಅಂಶ ಮಾತ್ರವಿರುತ್ತದೆ. ಆದರೆ, ಬೆಳೆಗಳಿಗೆ ಬರ ಮತ್ತು ರೋಗ ನಿರೋಧಕ ಶಕ್ತಿ ನೀಡಿ ಕಾಳಿನ ತೂಕ ಹೆಚ್ಚಿಸಲು ಅತ್ಯಂತ ಅವಶ್ಯಕವಾಗಿರುವ ಪೊಟ್ಯಾಷ್ ಲಭ್ಯವಿರುವುದಿಲ್ಲ. ಮಾರುಕಟ್ಟೆಯಲ್ಲಿ ವಿವಿಧ ಶ್ರೇಣಿಯ(ಗ್ರೇಡ್) ಸಾರಜನಕ, ರಂಜಕ ಮತ್ತು ಪೊಟ್ಯಾಷ್ಯುಕ್ತ ಬಹಳಷ್ಟು ರಸಗೊಬ್ಬರಗಳು ಲಭ್ಯವಿದೆ. ಶಿಫಾರಸ್ಸಿನಂತೆ ವಿವಿಧ ರಸಗೊಬ್ಬರಗಳ ಸಂಯೋಜನೆಯೊಂದಿಗೆ ಬಳಸಬಹುದಾಗಿದೆ ಎಂದು ಹೇಳಿದರು. 

ಮಣ್ಣು ಪರೀಕ್ಷೆ ಆಧಾರದ ಮೇಲೆ ರಸಗೊಬ್ಬರಗಳನ್ನು ಬಳಸಬೇಕು. ಬೆಳೆಗಳಿಗೆ ಅವಶ್ಯಕ ಅವಧಿಯಲ್ಲಿ ರಸಗೊಬ್ಬರಗಳನ್ನು ಬಳಸುವುದು ಉತ್ತಮ. ಹೆಚ್ಚಿನ ಪ್ರಮಾಣದಲ್ಲಿ ಸಾವಯವ ಗೊಬ್ಬರಗಳನ್ನು ಬಳಸುವುದು ಸೂಕ್ತವಾಗಿದೆ. ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News