ವಿಜಯನಗರ | ಮೈಲಾರ ಲಿಂಗೇಶ್ವರ ಜಾತ್ರೆ, ಕಾರ್ಣಿಕೋತ್ಸವ ಹಿನ್ನೆಲೆ: ಆಯ್ದ ರಸ್ತೆಗಳಲ್ಲಿ ಸಂಚಾರ ನಿರ್ಬಂಧ
ವಿಜಯನಗರ (ಹೊಸಪೇಟೆ) : ಹೂವಿನಹಡಗಲಿ ತಾಲ್ಲೂಕಿನ ಮೈಲಾರ ಗ್ರಾಮದಲ್ಲಿ ಫೆ.4ರಂದು ನಡೆಯಲಿರುವ ಶ್ರೀ ಮೈಲಾರ ಲಿಂಗೇಶ್ವರ ಜಾತ್ರೆ ಹಾಗೂ ಕಾರ್ಣಿಕೋತ್ಸವ ಕಾರ್ಯಕ್ರಮದ ಹಿನ್ನೆಲೆ, ವಾಹನ ಸಂಚಾರ ದಟ್ಟಣೆ ಹೆಚ್ಚಾಗಿ ಸಾರ್ವಜನಿಕರು ಹಾಗೂ ಗಣ್ಯರ ಸಂಚಾರಕ್ಕೆ ಅಡಚಣೆ ಉಂಟಾಗುವ ಸಾಧ್ಯತೆ ಇರುವುದರಿಂದ ಫೆ.3 ರಿಂದ 5ರವರೆಗೆ ಆಯ್ದ ರಸ್ತೆಗಳಲ್ಲಿ ವಾಹನ ಸಂಚಾರ ಮತ್ತು ನಿಲುಗಡೆಗೆ ನಿರ್ಬಂಧ ವಿಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರು ಆದೇಶಿಸಿದ್ದಾರೆ.
ಫೆ.3ರ ಸಂಜೆ 4 ಗಂಟೆಯಿಂದ ಫೆಬ್ರವರಿ 5ರ ಬೆಳಗ್ಗೆ 10 ಗಂಟೆಯವರೆಗೆ ಮೈಲಾರ–ಗುತ್ತಲ, ಮೈಲಾರ–ಹೊಳಲು ಹಾಗೂ ಕುರುವತ್ತಿ ಮಾರ್ಗಗಳಲ್ಲಿ ಭಕ್ತಾಧಿಗಳ ವಾಹನಗಳನ್ನು ಹೊರತುಪಡಿಸಿ ಸರಕು ಸಾಗಾಣಿಕೆ ಹಾಗೂ ಭಾರಿ ವಾಹನಗಳ ಸಂಚಾರಕ್ಕೆ ಮತ್ತು ರಸ್ತೆ ಎರಡೂ ಬದಿಗಳಲ್ಲಿ ವಾಹನ ನಿಲುಗಡೆಗೆ ನಿರ್ಬಂಧ ವಿಧಿಸಲಾಗಿದೆ.
ಪಾರ್ಕಿಂಗ್ ವ್ಯವಸ್ಥೆ :
ನೀಲಗುಂದ, ಕಂಚೂರು, ಹಲುವಾಗಲು, ಹರವಿ, ಸಿದ್ದಾಪುರ, ಲಿಂಗನಾಯಕನಹಳ್ಳಿ ಹಾಗೂ ಕುರುವತ್ತಿ ಮಾರ್ಗಗಳಿಂದ ಬರುವ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಕುರುವತ್ತಿ ರಸ್ತೆಯಲ್ಲಿನ ಚನ್ನಬಸಪ್ಪ ಮಹಾದೇವಪ್ಪ ಅವರ ಜಮೀನು, ಲಘು ವಾಹನಗಳಿಗೆ ತೋಟದಸ್ವಾಮಿ, ಕೆ.ನೀಲಪ್ಪ ಮತ್ತು ಮಲ್ಲಿಕಾರ್ಜುನ್ ಅವರ ಜಮೀನು, ದ್ವಿಚಕ್ರ ವಾಹನಗಳಿಗೆ ಉದ್ದಗಟ್ಟಿ ಶೇಖರಪ್ಪ ಅವರ ಜಮೀನು, ಹಡಗಲಿ, ಹಿರೇಹಡಗಲಿ, ಹೊಳಲು, ಹರಪನಹಳ್ಳಿ, ಹುಲಿಕಟ್ಟೆ, ಹಾರಕನಾಳು, ಹ್ಯಾರಾಡ ಮಾರ್ಗಗಳಿಂದ ಬರುವ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಹೊಳಲು ರಸ್ತೆಯಲ್ಲಿನ ದೇವರಾಜ್ ಅವರ ಜಮೀನು, ಲಘು ವಾಹನಗಳಿಗೆ ಅಳ್ಳಿಹಾಳ ಪೊರಪ್ಪ, ಗುರುಪ್ರಸಾದ್ ದೇವಗುರು ಹಾಗೂ ಹೊಳಲು ಮೀರತ್ ಮಠ, ದ್ವಿಚಕ್ರ ವಾಹನಗಳಿಗೆ ಹೊಳಲು ರಸ್ತೆಯ ಬದಿ, ಗುತ್ತಲ, ಹಡಗಲಿ ಹಾಗೂ ಹರಪನಹಳ್ಳಿ ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮಗಳಿಂದ ಬರುವ ವಾಹನಗಳಿಗೆ, ಗುತ್ತಲ ರಸ್ತೆ ಬದಿ ಹಾಗೂ ದೊಂಬ್ರಳ್ಳಿ ಕ್ರಾಸ್ ಬಳಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಭಕ್ತಾಧಿಗಳು ಹಾಗೂ ಸಾರ್ವಜನಿಕರು ಸಂಚಾರ ನಿಯಮಗಳನ್ನು ಪಾಲಿಸಿ ಸಹಕರಿಸುವಂತೆ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರು ಮನವಿ ಮಾಡಿದ್ದಾರೆ.