Vijayanagara | ಹಂಪಿಯಲ್ಲಿ ‘ಟ್ರಾವೆಲ್ಲರ್ ನೂಕ್’ ಸ್ಥಾಪನೆಗೆ ವೇಗ ನೀಡಲು ಜಿಲ್ಲಾಧಿಕಾರಿ ಸೂಚನೆ
ವಿಜಯನಗರ (ಹೊಸಪೇಟೆ) : ಕೇಂದ್ರ ಪುರಸ್ಕೃತ ಸ್ವದೇಶಿ ದರ್ಶನ್ 2.0 ಯೋಜನೆಯಡಿ ವಿಶ್ವ ಪಾರಂಪರಿಕ ತಾಣವಾದ ಹಂಪಿಗೆ ಬರುವ ಪ್ರವಾಸಿಗರ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ, ಸ್ಮಾರಕಗಳು ಹಾಗೂ ಪ್ರವಾಸಿ ತಾಣಗಳ ಬಳಿ ಪ್ರವಾಸಿಗರ ಸುರಕ್ಷತೆ ಮತ್ತು ಮೂಲಭೂತ ಸೌಲಭ್ಯಗಳನ್ನು ಒಳಗೊಂಡ ‘ಟ್ರಾವೆಲ್ಲರ್ ನೂಕ್’ಗಳನ್ನು ಅನುಷ್ಠಾನಗೊಳಿಸಲು ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಟ್ರಾವೆಲ್ಲರ್ ನೂಕ್ ಕಾಮಗಾರಿಗಳ ಅನುಷ್ಠಾನ ಕುರಿತು ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಸ್ವದೇಶಿ ದರ್ಶನ್ 2.0 ಯೋಜನೆಯಡಿ ಹಂಪಿ ಆಯ್ಕೆಯಾಗಿರುವುದು ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಮಹತ್ವದ ಅವಕಾಶವಾಗಿದೆ ಎಂದರು.
ಈ ಯೋಜನೆಯಡಿ ಯುನೆಸ್ಕೋ ವಿಶ್ವ ಪರಂಪರಾ ತಾಣವಾದ ಹಂಪಿಗೆ ಆಗಮಿಸುವ ಪ್ರವಾಸಿಗರಿಗೆ ಒಂದೇ ಸೂರಿನಡಿ ಕುಡಿಯುವ ನೀರು, ಸ್ವಚ್ಛ ಶೌಚಾಲಯ, ವಿಶ್ರಾಂತಿಗೆ ನೆರಳಿನ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ‘ಟ್ರಾವೆಲ್ಲರ್ ನೂಕ್’ಗಳನ್ನು ನಿರ್ಮಿಸಲಾಗುತ್ತಿದೆ. ಇವು ಕಡಿಮೆ ದರದಲ್ಲಿ ಅಗತ್ಯ ಸೌಲಭ್ಯಗಳನ್ನು ಹೊಂದಿದ್ದು, ಪ್ರವಾಸಿಗರಿಗೆ ಸುರಕ್ಷಿತ ವಾಸ ಮತ್ತು ಸ್ಥಳೀಯ ಸಂಸ್ಕೃತಿಯನ್ನು ಸಮೀಪದಿಂದ ಅನುಭವಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಸ್ವದೇಶಿ ದರ್ಶನ್ 2.0 ಯೋಜನೆಯಡಿ ಹಂಪಿಯ ಮಯೂರ ಭುವನೇಶ್ವರಿ ಹೋಟೆಲ್ ಹತ್ತಿರ, ಚಂದ್ರಕೇಶ್ವರ ದೇವಸ್ಥಾನ, ವಿಜಯ ವಿಠ್ಠಲ ದೇವಸ್ಥಾನ, ವಿರೂಪಾಕ್ಷ ದೇವಸ್ಥಾನ ಸೇರಿದಂತೆ ವಿವಿಧ ಸ್ಮಾರಕಗಳು ಮತ್ತು ಪ್ರವಾಸಿ ತಾಣಗಳ ಒಟ್ಟು 20 ಸ್ಥಳಗಳಲ್ಲಿ ‘ಟ್ರಾವೆಲ್ಲರ್ ನೂಕ್’ಗಳನ್ನು ಸ್ಥಾಪಿಸಬೇಕು ಎಂದು ಸೂಚಿಸಿದರು.
ಯೋಜನೆ ಅನುಷ್ಠಾನದಲ್ಲಿ ಸ್ಥಳದ ಅಭಾವ ಅಥವಾ ಇತರೆ ತಾಂತ್ರಿಕ ಅಡೆತಡೆಗಳು ಎದುರಾದಲ್ಲಿ, ತಕ್ಷಣವೇ ಪರಿಹಾರ ಕಂಡು ನಿಗದಿತ ಅವಧಿಯೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಒ ನೋಂಗ್ಜಾಯ್ ಮುಹಮ್ಮದ್ ಅಲಿ ಅಕ್ರಂ ಷಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ, ನಗರಸಭೆ ಪೌರಾಯುಕ್ತ ಶಿವಕುಮಾರ್, ಹಂಪಿಯ ಪುರಾತತ್ವ ಇಲಾಖೆ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.