ವಿಜಯಪುರ: ಸಿಬ್ಬಂದಿಯನ್ನು ಕಟ್ಟಿ ಹಾಕಿ ಬ್ಯಾಂಕ್ ದರೋಡೆ
Update: 2025-09-16 21:20 IST
ವಿಜಯಪುರ: ಮನಗೂಳಿ ಕೆನರಾ ಬ್ಯಾಂಕ್ ದರೋಡೆ ಪ್ರಕರಣ ಮಾಸುವ ಮುನ್ನವೇ ಚಡಚಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನಲ್ಲಿ ಮುಸುಕುದಾರಿಗಳು ದರೋಡೆ ನಡೆಸಿ ಪರಾರಿಯಾಗಿರುವ ಘಟನೆ ಮಂಗಳವಾರ ನಡೆದಿದೆ.
ಚಡಚಣ ಪಟ್ಟಣದಲ್ಲಿ ಸಂಜೆ 6 ಗಂಟೆ ಸುಮಾರಿಗೆ ಮಿಲಿಟರಿ ಡ್ರೆಸ್ ನಲ್ಲಿ ಬ್ಯಾಂಕ್ ಪ್ರವೇಶ ಮಾಡಿರುವ ದರೋಡೆಕೋರರು ಮುಖಕ್ಕೆ ಮಾಸ್ಕ್ ಧರಿಸಿ ಕಂಟ್ರಿ ಪಿಸ್ತೂಲು, ಮಾರಕಾಸ್ತ್ರಗಳನ್ನು ತೋರಿಸಿ ಸಿಬ್ಬಂದಿಗಳನ್ನು ಹೆದರಿಸಿದ್ದಾರೆ. ನಂತರ ಮ್ಯಾನೇಜರ್, ಕ್ಯಾಶಿಯರ್ ಹಾಗೂ ಸಿಬ್ಬಂದಿಗಳ ಕೈಕಾಲು ಕಟ್ಟಿಹಾಕಿ ಬ್ಯಾಂಕ್ ನಲ್ಲಿನ ಚಿನ್ನಭಾರಣ ಹಾಗೂ ನಗದು ದೋಚಿಕೊಂಡು ಪರಾರಿಯಾಗಿದ್ದಾರೆ.
ಎಷ್ಟು ಚಿನ್ನ ಹಾಗೂ ನಗದು ದರೋಡೆಯಾಗಿದೆ ಎನ್ನುವ ಮಾಹಿತಿ ಸಿಕ್ಕಿಲ್ಲ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹಾಗೂ ಅಧಿಕಾರಿಗಳು ಭೇಟಿ ನೀಡಿದ್ದು, ಬ್ಯಾಂಕ್ ಎದುರಿಗೆ ಸ್ಥಳೀಯರು ಜಮಾಯಿಸಿದ್ದಾರೆ.
ಈ ಕುರಿತು ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.